Site icon Vistara News

Bulldozer Justice Video: ಅತ್ಯಾಚಾರ ಎಸಗಿ ಕ್ರೂರಹಿಂಸೆ; ಆರೋಪಿ ಅಯಾನ್‌ ಪಠಾಣ್‌ ಮನೆ ಧ್ವಂಸಗೊಳಿಸಿದ ಬುಲ್ಡೋಜರ್‌!

Bulldozer Justice

Bulldozer Justice

ಭೋಪಾಲ್‌: ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ಯುವತಿಯನ್ನ ಅಪಹರಿಸಿ ಒತ್ತೆ ಇಟ್ಟುಕೊಂಡು ಸುಮಾರು ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿ ಮಾರಣಾಂತಿಕವಾಗಿ ಹಿಂಸೆ ನೀಡಿದ್ದ ಆರೋಪಿ ಅಯಾನ್ ಪಠಾಣ್ (Ayan Pathan) ವಿರುದ್ಧ ಮಧ್ಯ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಆತನ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ (Bulldozer Justice). ಆತನ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಅಯಾನ್ ಪಠಾಣ್ ತನ್ನ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿಯನ್ನು ಪ್ರೀತಿಸುವಂತೆ ನಾಟಕವಾಡಿ ತನ್ನ ಬಲೆಗೆ ಬೀಳಿಸಿದ್ದ. ಯುವತಿಯ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಆಕೆ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯನ್ನು ತನ್ನ ಪ್ರೇಮದ ಜಾಲಕ್ಕೆ ಬೀಳಿಸಿದ್ದ ಅಯಾನ್ ಪಠಾಣ್ ಆಕೆಯ ಆಸ್ತಿಯನ್ನು ಲಪಟಾಯಿಸಲು ಮುಂದಾಗಿದ್ದ. ಯುವತಿಯ ತಾಯಿಯ ಹೆಸರಲ್ಲಿ ಇದ್ದ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಸಂಚು ರೂಪಿಸಿದ್ದ.

ಚಿತ್ರಹಿಂಸೆ

ಅಯಾನ್ ಪಠಾಣ್‌ನ ಸಂಚು ಅರಿತ ಯುವತಿ ಆತನನ್ನು ವಿರೋಧಿಸತೊಡಗಿದ್ದಳು. ಆಗ ಆತ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬೆಲ್ಟ್ ಹಾಗೂ ನೀರಿನ ಪೈಪ್​ನಿಂದ ಹೊಡೆದಿದ್ದಾನೆ. ಬಳಿಕ ಗಾಯದ ಮೇಲೆ ಮೆಣಸಿನ ಪುಡಿ ಹಾಕಿದ್ದಾನೆ. ಯುವತಿ ನೋವಿನಿಂದ ನರಳಲು ಶುರು ಮಾಡಿದಾಗ ಆಕೆಯ ಅಳು ಹೊರಗೆ ಕೇಳಬಾರದೆಂದು ಫೆವಿಕ್ವಿಕ್​ನಿಂದ ಆಕೆಯ ಬಾಯಿ ಮುಚ್ಚಿದ್ದ. ಇಷ್ಟೆಲ್ಲ ಚಿತ್ರಹಿಂಸೆ ಅನುಭವಿಸಿದ್ದ ಆಕೆ ಹೇಗೋ ತಪ್ಪಿಸಿಕೊಂಡು ಪೊಲೀಸ್​ ಠಾಣೆ ತಲುಪಿದ್ದಾಳೆ.

ಪೊಲೀಸರಿಗೆ ತನಗಾದ ಸಂಕಷ್ಟವನ್ನು ವಿವರಿಸಿದ್ದಾಳೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಅಯಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಯಾನ್‌ನನ್ನು ಬಂಧಿಸಲಾಗಿದೆ. ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಯುವತಿ ಸ್ಥಿತಿ ಚಿಂತಾಜನಕವಾಗಿದೆ. ಆಕೆಯ ಇಡೀ ದೇಹದ ತುಂಬೆಲ್ಲ ಗಾಯಗಳಾಗಿವೆ. ಎರಡೂ ಕಣ್ಣುಗಳಲ್ಲಿ ಊತವಿದೆ. ಅಲ್ಲದೆ ಫೆವಿಕ್ವಾಕ್‌ನಿಂದ ಬಾಧಿತವಾದ ತುಟಿಗಳನ್ನು ವೈದ್ಯರು ಕಷ್ಟಪಟ್ಟು ಸರಿಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಪೊಲೀಸರು, ಜೆಸಿಬಿ ಮೇಲೆ ಕಲ್ಲು ತೂರಾಟ; ಅಧಿಕಾರಿಯ ಕಾಲರ್​ ಹಿಡಿದು ಹೊಡೆದ ಬಿಜೆಪಿ ಶಾಸಕನ ಹಿಂಬಾಲಕರು

ʼʼಅಯಾನ್‌ನ ಮನೆಯನ್ನು ನಕಲಿ ದಾಖಲೆಗಳನ್ನು ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನುವ ಅಂಶ ಪರಿಶೀಲನೆ ವೇಳೆ ಕಂಡು ಬಂದಿದೆ. ಹೀಗಾಗಿ ಅದನ್ನು ನೆಲಸಮಗೊಳಿಸಲು ಆದೇಶ ಹೊರಡಿಸಲಾಯಿತುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಯುವತಿಗೆ ನ್ಯಾಯ ಒದಗಿಸಲಾಗಿದೆ.

ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಅಪರಾಧ ನಡೆದ ಸ್ಥಳವಾದ ಆತನ ಮನೆಗೆ ಕರೆ ತಂದು ಸ್ಥಳ ಮಹಜರು ಮಾಡಿದ್ದರು. ಈ ವೇಳೆ ಯುವತಿಗೆ ಥಳಿಸಲು ಬಳಸಲಾಗಿದ್ದ ಬೆಲ್ಟ್‌, ಫೆವಿ ಕ್ವಿಕ್‌ನ ಟ್ಯೂಬ್‌ಗಳು ಹಾಗೂ ಪ್ಲಾಸ್ಟಿಕ್ ಪೈಪ್ ಸಿಕ್ಕಿವೆ. ಇವೆಲ್ಲವನ್ನೂ ಬಳಸಿ ಯುವತಿ ಮೇಲೆ ದೌರ್ಜನ್ಯ ಎಸಗಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

Exit mobile version