ನವದೆಹಲಿ: ಜಿ 20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಅದ್ಧೂರಿಯಾಗಿ ಸಿದ್ಧಗೊಂಡಿದೆ. ಭಾರತ ಮಂಟಪ ಸೇರಿ ಹಲವೆಡೆ ಭದ್ರತೆ, ವಿದೇಶಿ ಗಣ್ಯರಿಗೆ ವಿಶೇಷ ಸೌಕರ್ಯ, ಭೋಜನ ಸೇರಿ ಸಕಲ ರೀತಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಇನ್ನು ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಕೂಡ ಆಗಮಿಸುತ್ತಿದ್ದು, ಅವರಿಗೆ ವಿಶೇಷ ಭದ್ರತೆ ಒದಗಿಸಲಾಗುತ್ತಿದೆ. ಇನ್ನು ಜೋ ಬೈಡೆನ್ ಜತೆ ‘ದಿ ಬೀಸ್ಟ್’ ಹೈ ಸೆಕ್ಯುರಿಟಿ ಕಾರ್ ಕೂಡ ದೆಹಲಿಗೆ ಆಗಮಿಸಲಿದೆ. ದಿ ಬೀಸ್ಟ್ ಕಾರನ್ನು ಜಗತ್ತಿನಲ್ಲೇ ಅತಿ ಸುರಕ್ಷಿತ ಕಾರು ಎಂದು ಕರೆಯಲಾಗುತ್ತಿದೆ. ಇದರ ವೈಶಿಷ್ಟ್ಯ ಏನು? ಬೆಲೆ ಎಷ್ಟು? ಇದೆಷ್ಟು ಸುರಕ್ಷಿತ ಎಂಬುದರ ಮಾಹಿತಿ ಇಲ್ಲಿದೆ.
ಏನಿದರ ವೈಶಿಷ್ಟ್ಯ?
ಕ್ಯಾಡಿಲಾಕ್ ಒನ್ (Cadillac One) ಎಂಬ ಐಷಾರಾಮಿ ಕಾರನ್ನೇ ‘ದಿ ಬೀಸ್ಟ್’ ಎಂದು ಕರೆಯಲಾಗುತ್ತದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಯಾವುದೇ ಅಪಾಯಕಾರಿ ಸಂದರ್ಭದಲ್ಲೂ ಜೀವವನ್ನು ಕಾಪಾಡುತ್ತದೆ. ಇದರ ವೈಶಿಷ್ಟ್ಯಗಳು ಇಂತಿವೆ.
- ಬುಲೆಟ್ ಪ್ರೂಫ್ ಹಾಗೂ ಸ್ಫೋಟ ಸಂಭವಿಸಿದರೂ ಕಾರಿನೊಳಗಿದ್ದವರಿಗೆ ಏನೂ ಆಗಲ್ಲ
- ಕೆಮಿಕಲ್ ದಾಳಿ ನಡೆಸಿದರೂ ಯಾವುದೇ ಪರಿಣಾಮ ಆಗಲ್ಲ
- ಡೋರ್ ಹ್ಯಾಂಡಲ್ಗಳಿಗೆ ವಿದ್ಯುತ್ ಸ್ಪರ್ಶ ಇರುವುದರಿಂದ ದಾಳಿಕೋರರಿಗೆ ಶಾಕ್ ಹೊಡೆಯುವುದು ನಿಶ್ಚಿತ
- ಕಾರಿನ ಚಕ್ರ ಪಂಕ್ಚರ್ ಆದರೂ 100 ಕಿಲೋಮೀಟರ್ ಸಂಚರಿಸಬಲ್ಲದು
- ರಾತ್ರಿ ವಾಹನ ಚಾಲನೆಗೆ ವಿಶೇಷ ಸೌಲಭ್ಯ, ಜಿಪಿಎಸ್, ಸ್ಯಾಟಲೈಟ್ ವ್ಯವಸ್ಥೆ
ಕಾರಿನ ಬೆಲೆ ಎಷ್ಟು?
ದಿ ಬೀಸ್ಟ್ ಕಾರಿನ ಬೆಲೆ 12.47 ಕೋಟಿ ರೂ. ಇದೆ. ಇದರ ತೂಕ 20 ಸಾವಿರ ಪೌಂಡ್ಸ್ ಇದೆ. ಸ್ಟೀಲ್, ಸೆರಾಮಿಕ್‌ನಿಂದ ಕಾರನ್ನು ತಯಾರಿಸಲಾಗಿದ್ದು, ಕಾರಿನ ಬಾಡಿ 8 ಇಂಚು ದಪ್ಪ ಇದ್ದರೆ, ಗ್ಲಾಸ್‌ಗಳು 5 ಇಂಚು ದಪ್ಪ ಇವೆ. ಹಾಗಾಗಿ, ಗುಂಡಿನ ದಾಳಿ ನಡೆದರೂ ಕಾರಿನೊಳಗಿದ್ದವರಿಗೆ ಏನೂ ಆಗುವುದಿಲ್ಲ.
ಇದನ್ನೂ ಓದಿ: G20 Summit: ಜೋ ಬೈಡೆನ್ ಕೋವಿಡ್ ಮುಕ್ತ, ಗುರುವಾರ ಭಾರತಕ್ಕೆ ಬಂದಿಳಿಯಲಿರುವ ಅಮೆರಿಕ ಅಧ್ಯಕ್ಷ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದರೂ ಬೀಸ್ಟ್ ಕಾರನ್ನು ತೆಗೆದುಕೊಂಡು ಹೋಗುತ್ತಾರೆ. ಕಳೆದ ವರ್ಷ ಬ್ರಿಟನ್ ರಾಣಿ ಎಲಿಜಬೆತ್-2 ಅವರ ಅಂತ್ಯಸಂಸ್ಕಾರಕ್ಕೆ ತೆರಳಿದಾಗಲೂ ಜೋ ಬೈಡೆನ್ ಅವರು ದಿ ಬೀಸ್ಟ್ ಕಾರನ್ನು ತೆಗೆದುಕೊಂಡು ಹೋಗಿದ್ದರು. ಇದನ್ನು 2001ರಿಂದಲೂ ಅಮೆರಿಕ ಅಧ್ಯಕ್ಷರು ಬಳಸುತ್ತಿದ್ದಾರೆ.
ಭಾರತದಿಂದಲೂ ವಿಶೇಷ ಭದ್ರತೆ
ಜೋ ಬೈಡೆನ್ ಅವರಿಗೆ ಭಾರತದಲ್ಲೂ ವಿಶೇಷ ಭದ್ರತೆ ಒದಗಿಸಲಾಗಿದೆ. ಪ್ಯಾರಾಮಿಲಿಟರಿ, ಎಸ್‌ಪಿಜಿ ಕಮಾಂಡೋಗಳು ಜೋ ಬೈಡೆನ್ ಅವರಿಗೆ ಭಾರಿ ಭದ್ರತೆ ಒದಗಿಸಲಿದ್ದಾರೆ. ಬೈಡೆನ್ ಅವರು ಐಟಿಸಿ ಮೌರ್ಯ ಶೆರಟನ್ ಹೋಟೆಲ್‌ನಲ್ಲಿ ತಂಗಲಿದ್ದು, ಇದಕ್ಕಾಗಿ 400 ಕೋಣೆಗಳನ್ನು ಬುಕ್ ಮಾಡಲಾಗಿದೆ. ಹಾಗೆಯೇ, ಹೋಟೆಲ್‌ಗೂ ವಿಶೇಷ ಭದ್ರತೆ ಒದಗಿಸಲಾಗಿದೆ.
ಜೋ ಬೈಡೆನ್ ಅವರು ಗುರುವಾರ (ಸೆಪ್ಟೆಂಬರ್ 7) ಭಾರತಕ್ಕೆ ಆಗಮಿಸಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 9ರಂದು ನಡೆಯುವ ಜಿ20 ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.