ನವದೆಹಲಿ: ದೇಶದ ಪ್ರಮುಖ ಎಡ್‌ಟೆಕ್ (EdTech) ಕಂಪನಿಯಾಗಿರುವ, ಒಂದು ಕಾಲದ ಬಹುಬೇಡಿಕೆಯ ಹಾಗೂ ಖ್ಯಾತಿಯ ಟೆಕ್ನಾಲಜಿ ಸ್ಟಾರ್ಟಪ್ ಆಗಿದ್ದ ಬೈಜೂಸ್ ಕಂಪನಿಯು ಸಾಲದ ಸುಳಿಗೆ (BYJU’s Debt) ಸಿಲುಕಿದೆ. ಇದೇ ಸಾಲದ ಸುಳಿಯಿಂದಾಗಿ ಬೈಜೂಸ್ ಕಂಪನಿ ಈಗ ತನ್ನ ಅಂಗಸಂಸ್ಥೆಯಾದ ಬೈಜೂಸ್ ಅಲ್ಫಾ ಕಂಪನಿಯನ್ನು ಸಾಲ ನೀಡಬೇಕಾಗಿದೆ. ಅಮೆರಿಕದ ಡೆಲಾವೇರ್ ಕೋರ್ಟ್ (Delaware Court) ಈ ಕುರಿತು ಆದೇಶ ಹೊರಡಿಸಿದೆ.
ಬೈಜೂಸ್ ಕಂಪನಿಯು 1.2 ಶತಕೋಟಿ ಡಾಲರ್ (ಸುಮಾರು 10 ಸಾವಿರ ಕೋಟಿ ರೂ.) ಸಾಲವನ್ನು ಹೊಂದಿದ್ದು, ಮೂರು ತಿಂಗಳಿಗೆ ಸುಮಾರು 33 ಕೋಟಿ ರೂ. ಬಡ್ಡಿಯನ್ನೇ ಕಟ್ಟಬೇಕಿದೆ. ಬಡ್ಡಿ ಕಟ್ಟಲು ಕೂಡ ಆಗದ ಪರಿಸ್ಥಿತಿ ಎದುರಾಗಿದೆ. ಇನ್ನು ಬೈಜೂಸ್ ಕಂಪನಿಗೆ ಸಾಲ ಕೊಟ್ಟಿರುವ ರೆಡ್‌ವುಡ್ ಇನ್ವೆಸ್ಟ್‌ಮೆಂಟ್ಸ್ ಎಲ್‌ಎಲ್‌ಸಿ ಹಾಗೂ ಸಿಲ್ವರ್ ಪಾಯಿಂಟ್ ಕ್ಯಾಪಿಎಲ್ ಎಲ್‌ಪಿ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದವು. ಈಗ ಅತಿಯಾದ ಸಾಲ ಇರುವ ಕಾರಣ ಬೈಜೂಸ್ ಅಲ್ಫಾ ಕಂಪನಿಯ ನಿಯಂತ್ರಣವನ್ನು ಸಾಲ ಕೊಟ್ಟವರಿಗೆ ನೀಡಿ ಡೆಲಾವೇರ್ ಚಾನ್ಸರಿ ಕೋರ್ಟ್ ನ್ಯಾಯಾಧೀಶ ಮಾರ್ಗನ್ ಜುರ್ನ್ ಆದೇಶ ಹೊರಡಿಸಿದ್ದಾರೆ.
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಸಹೋದರ ರಿಜು ರವೀಂದ್ರನ್ ಅವರು ಬೈಜೂಸ್ ಅಲ್ಫಾ ಮಂಡಳಿ ಸದಸ್ಯರಾಗಿದ್ದರು. ಆದರೆ, ಸಾಲ ಕೊಟ್ಟಿರುವ ಕಂಪನಿಗಳು ರಿಜು ರವೀಂದ್ರನ್ ಬದಲಾಗಿ ಟಿಮೋಥಿ ಪೋಹ್ಲ್ ಎಂಬುವರನ್ನು ಮಂಡಳಿ ಸದಸ್ಯರಾಗಿದ್ದರು. ಇದನ್ನು ಪ್ರಶ್ನಿಸಿ ಬೈಜೂಸ್ ಸಲ್ಲಿಸಿದ್ದ ಅರ್ಜಿಯನ್ನು ಡೆಲಾವೇರ್ ಕೋರ್ಟ್ ನಿರಾಕರಿಸಿದೆ. ಹಾಗೆಯೇ, ಸಾಲದ ಹಿನ್ನೆಲೆಯಲ್ಲಿ ಟಿಮೋಥಿ ಪೋಹ್ಲ್ ಅವರೇ ಈಗ ಬೈಜೂಸ್ ಅಲ್ಫಾದ ಏಕೈಕ ನಿರ್ದೇಶಕರಾಗಿದ್ದಾರೆ ಎಂದು ಆದೇಶಿಸಿದೆ.
ಇದನ್ನೂ ಓದಿ: BYJU’s Layoffs: ಮತ್ತೆ 5500 ಉದ್ಯೋಗ ಕಡಿತಕ್ಕೆ ಮುಂದಾದ ಬೈಜೂಸ್ ಕಂಪನಿ
ಸಾವಿರಾರು ಕೋಟಿ ರೂ. ಸಾಲದ ಸುಳಿಗೆ ಸಿಲುಕಿರುವ ಬೆಂಗಳೂರು ಮೂಲದ ಬೈಜೂಸ್ ಕಂಪನಿಯು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಲ್ಲದೆ, ಬೆಂಗಳೂರಿನಲ್ಲಿದ್ದ ಕಚೇರಿಯನ್ನೂ ತೆರವುಗೊಳಿಸಿದೆ. ಬೈಜೂಸ್ ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವ ಚಿಂತನೆಯೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ