Site icon Vistara News

India Canada Trade: ಭಾರತದ ಜತೆಗಿನ ವ್ಯಾಪಾರ ಮುಂದೂಡಿದ ಕೆನಡಾ; ಮೋದಿ ಖಂಡನೆ ಕಾರಣ?

justin trudeau and narendra modi

ನವದೆಹಲಿ/ಒಟ್ಟಾವ: ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಪಾಲ್ಗೊಂಡು, ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿ ವಾಪಸಾದ ಕೆಲವೇ ದಿನಗಳಲ್ಲಿ ಭಾರತದ ಜತೆಗಿನ ವ್ಯಾಪಾರ ಒಪ್ಪಂದವನ್ನು (India Canada Trade) ಕೆನಡಾ ಮುಂದೂಡಿದೆ. “ಭಾರತದ ಜತೆಗಿನ ಟ್ರೇಡ್‌ ಮಿಷನ್‌ಅನ್ನು ಮುಂದೂಡಲಾಗಿದೆ” ಎಂದು ಕೆನಡಾ ವ್ಯಾಪಾರ ಸಚಿವೆ ಮೇರಿ ಎನ್‌ಜಿ (Mary Ng) ಅವರ ವಕ್ತಾರೆ ಶಾಂಟಿ ಕೊಸೆಂಟಿನೋ ಘೋಷಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಸ್ಟಿನ್‌ ಟ್ರುಡೋ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತಕತೆ ನಡೆಸಿದ್ದರು. ಇದೇ ವೇಳೆ, “ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು” ಎಂದು ಹೇಳಿದ್ದರು. ಖಲಿಸ್ತಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರೋಕ್ಷವಾಗಿ ಆಗ್ರಹಿಸಿದ್ದರು. ಇದೇ ಕಾರಣಕ್ಕಾಗಿ ಕೆನಡಾ ಸರ್ಕಾರವು ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದೆ ಎಂದು ಹೇಳಲಾಗುತ್ತಿದೆ.

ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಕೆನಡಾ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆದಿತ್ತು. ಭಾರತದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಕೆನಡಾ ಸಚಿವೆ ಮೇರಿ ಎನ್‌ಜಿ ಅವರು ಜಂಟಿ ಪ್ರಕಟಣೆ ಹೊರಡಿಸಿದ್ದರು. ಭಾರತ ಹಾಗೂ ಕೆನಡಾ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಿವೆ. ವರ್ಷಾಂತ್ಯದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಘೋಷಣೆ ಮಾಡಿದ್ದರು. ಆದರೆ, “ಭಾರತದ ಜತೆಗಿನ ಒಪ್ಪಂದವನ್ನು ಕೆನಡಾ ಸರ್ಕಾರ ಮುಂದೂಡಿದೆ” ಎಂದು ಶಾಂಟಿ ಕೊಸೆಂಟಿನೋ ಘೋಷಿಸಿರುವುದು ಸಂಚಲನ ಮೂಡಿಸಿದೆ.

ಇದನ್ನೂ ಓದಿ: Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು

ಭಾರತದಲ್ಲಿ ಟ್ರುಡೋಗೆ ‘ಅವಮಾನ’ ಆರೋಪ

ಜಸ್ಟಿನ್‌ ಟ್ರುಡೋ ಅವರು ಭಾರತಕ್ಕೆ ಬಂದಾಗ ಅವಮಾನ ಮಾಡಲಾಗಿದೆ ಎಂದು ಅಲ್ಲಿನ ಪ್ರತಿಪಕ್ಷ ಆರೋಪಿಸಿತ್ತು. ವೇದಿಕೆಯಿಂದ ನಡೆಯುವಂತೆ ಮೋದಿ ಸೂಚಿಸಿದ್ದಾರೆ, ಕೆನಡಾ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದಾರೆ ಎಂದೆಲ್ಲ ಟೀಕಿಸಿತ್ತು. ಅದರಲ್ಲೂ, ಕೆನಡಾ ಪ್ರತಿಪಕ್ಷ ನಾಯಕ ಪಿಯರೆ ಪೊಲಿವ್ರೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ʼಟೊರಾಂಟೊ ಸನ್‌ʼ ಪತ್ರಿಕೆಯ ಮುಖಪುಟವನ್ನು ಪೋಸ್ಟ್‌ ಮಾಡಿದ್ದರು.

ಪತ್ರಿಕೆಯ ವರದಿ ಉಲ್ಲೇಖಿಸಿ ಪಿಯರೆ ಟೀಕಿಸಿದ್ದರು. ಮೋದಿಯವರು ಟ್ರುಡೊಗೆ ವೇದಿಕೆಯಿಂದಾಚೆಗೆ ದಾರಿ ತೋರಿಸುತ್ತಿದ್ದಾರೆ. ಪತ್ರಿಕೆ ಅದಕ್ಕೆ ʼದಿಸ್‌ ವೇ ಔಟ್‌ʼ ಎಂದು ಶೀರ್ಷಿಕೆ ನೀಡಿದೆ. ʼʼಸಹಭಾಗಿತ್ವ ಹಾಗಿರಲಿ, ಯಾರೂ ಕೂಡ ನಮ್ಮ ಪ್ರಧಾನಿ ಸತತ ಅವಮಾನಕ್ಕೆ ಒಳಗಾಗುವುದನ್ನು ಹೀಗೆ ನೋಡಲು ಬಯಸುವುದಿಲ್ಲʼʼ ಎಂದು ಪಿಯರೆ ಹೇಳಿದ್ದರು. ಇನ್ನು, ʼಜಿ20ಯಲ್ಲಿ ಟ್ರುಡೊಗೆ ಸ್ನೇಹಿತರೇ ಇರಲಿಲ್ಲʼ ಎಂದು ಪತ್ರಿಕೆ ಬರೆದಿತ್ತು. ಭಾರತದಲ್ಲಿ ಜಸ್ಟಿನ್‌ ಟ್ರುಡೋ ಪ್ರಯಾಣಿಸಬೇಕಿದ್ದ ವಿಮಾನ ಕೆಟ್ಟು ನಿಂತಾಗಲೂ ಪ್ರತಿಪಕ್ಷವು ಟೀಕಿಸಿತ್ತು.

Exit mobile version