Site icon Vistara News

Russia Job Scam: ಉದ್ಯೋಗದ ಆಸೆ ತೋರಿಸಿ ರಷ್ಯಾಗೆ ಜನರ ಸಾಗಣೆ; 7 ಕಡೆ ಸಿಬಿಐ ದಾಳಿ

CBI Raid

CBI Raids Against Visa Agents In 7 Cities In Connection With Russia Job Scam

ನವದೆಹಲಿ: ಉದ್ಯೋಗ, ಪ್ರವಾಸಕ್ಕೆಂದು ರಷ್ಯಾಗೆ ತೆರಳಿದ ಭಾರತೀಯರು (Indians In Russia) ಸಂಕಷ್ಟಕ್ಕೆ ಸಿಲುಕಿದ್ದಾರೆ. ರಷ್ಯಾ ಅಧಿಕಾರಿಗಳು ಭಾರತೀಯರನ್ನು ಬಲವಂತವಾಗಿ ಸೇನೆಗೆ ಸೇರಿಸಿದ್ದು, ರಷ್ಯಾ-ಉಕ್ರೇನ್‌ ಸಮರದಲ್ಲಿ ಈಗಾಗಲೇ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ. ಇನ್ನೂ 20ಕ್ಕೂ ಅಧಿಕ ಮಂದಿ ರಷ್ಯಾದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ, ಸಿಬಿಐ ಅಧಿಕಾರಿಗಳು ದೇಶದಲ್ಲಿ ವೀಸಾ ಜಾಲವನ್ನು (Russia Job Scam) ಭೇದಿಸಿದ್ದು, 7 ನಗರಗಳಲ್ಲಿ ದಾಳಿ (CBI Raid) ನಡೆಸಿದ್ದಾರೆ.

ರಷ್ಯಾದಲ್ಲಿ ಭಾರಿ ಸಂಬಳದ ಆಸೆ ತೋರಿಸಿ, ವೀಸಾ ಕೊಡಿಸಿ, ರಷ್ಯಾಗೆ ತೆರಳುತ್ತಿದ್ದ ವೀಸಾ ಏಜೆಂಟ್‌ಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಮುಂಬೈ, ತಿರುವನಂತಪುರಂ, ಅಂಬಾಲ, ಚಂಡೀಗಢ, ಮದುರೈ ಹಾಗೂ ಚೆನ್ನೈನಲ್ಲಿ ದಾಳಿ ನಡೆಸಿದ್ದಾರೆ. ರಷ್ಯಾದಲ್ಲಿ ಉದ್ಯೋಗ ಸಿಗುತ್ತದೆ ಎಂದು ನಂಬಿದ ಭಾರತೀಯರು ಮಾಸ್ಕೊ ಸೇರಿ ಹಲವು ನಗರಗಳಿಗೆ ತೆರಳಿದ್ದು, ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಕೇಸ್‌ ದಾಖಲಿಸಿಕೊಂಡ ಸಿಬಿಐ ಅಧಿಕಾರಿಗಳು ಭಾರಿ ಶೋಧ ನಡೆಸುತ್ತಿದ್ದಾರೆ.

ವೀಸಾ ಏಜೆಂಟ್‌ಗಳ ಕಚೇರಿ, ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ 50 ಲಕ್ಷ ರೂ. ನಗದು, ದಾಖಲೆಗಳು, ಮೊಬೈಲ್‌, ಲ್ಯಾಬ್‌ಟಾಪ್‌, ಡೆಸ್ಕ್‌ಟಾಪ್‌ ಸೇರಿ ಹಲವು ಡಿವೈಸ್‌ಗಳು ಸಿಕ್ಕಿವೆ. ಉದ್ಯೋಗದ ಆಮಿಷ ತೋರಿಸಿ ರಷ್ಯಾ ಕಳುಹಿಸಿದ ಕುರಿತು ಸುಮಾರು 35 ಪ್ರಕರಣಗಳು ದಾಖಲಾಗಿವೆ. ದಾಳಿಯ ವೇಳೆ ಹಲವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಭಾರತೀಯರ ರಕ್ಷಣೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು, ಮಾಸ್ಕೊದಲ್ಲಿರುವ ರಾಯಭಾರಿಗಳು ರಷ್ಯಾ ಅಧಿಕಾರಿಗಳ ಜತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಂಚನೆಗೀಡಾಗಿ ರಷ್ಯಾ ಸೇನೆ ಸೇರಿದ್ದ ತೆಲಂಗಾಣದ ಯುವಕ ಉಕ್ರೇನ್‌ ಯುದ್ಧದಲ್ಲಿ ಬಲಿ!

ರಷ್ಯಾದಲ್ಲಿ ಉಕ್ರೇನ್‌ ಮಾಡಿದ ಡ್ರೋನ್‌ ದಾಳಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಭಾರತ ಮೂಲದ ಯುವಕನೊಬ್ಬ ಮೃತಪಟ್ಟಿದ್ದ. ರಷ್ಯಾ ಹಾಗೂ ಉಕ್ರೇನ್‌ ಗಡಿಯಲ್ಲಿ ನಡೆದ ಈ ದಾಳಿಯಲ್ಲಿ ಭಾರತದ 23 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದ್ದವು. ಮೃತನನ್ನು ಗುಜರಾತ್‌ನ ಸೂರತ್‌ ಜಿಲ್ಲೆಯ ಹೇಮಿಲ್‌ ಅಶ್ವಿನ್‌ಭಾಯಿ ಮಂಗುಕಿಯಾ ಎಂದು ಗುರುತಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ, ಉದ್ಯೋಗದ ಆಸೆಗಾಗಿ ರಷ್ಯಾಗೆ ತೆರಳಿದ್ದ ತೆಲಂಗಾಣದ ಮೊಹಮ್ಮದ್‌ ಅಸ್ಫಾನ್‌ ಎಂಬ 30 ವರ್ಷದ ಯುವಕನು ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟಿದ್ದಾನೆ. ಹಾಗಾಗಿ, ಕರ್ನಾಟಕದವರೂ ಸೇರಿ ಹಲವು ಭಾರತೀಯರು ಇನ್ನೂ ಸಂಕಷ್ಟದಲ್ಲೇ ಇದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version