Site icon Vistara News

ಮುಂಬೈ ದಾಳಿ ರೂವಾರಿ ಹಫೀಜ್‌ ಪುತ್ರನ ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಮತ್ತೆ ಅಡ್ಡಿ

Hafiz Talah

ನವದೆಹಲಿ: ಪಾಕಿಸ್ತಾನ ಎಂತಹ ಹೀನ ಕೃತ್ಯವೇ ಎಸಗಲಿ, ಭಯೋತ್ಪಾದನೆಗೇ ಬೆಂಬಲ ನೀಡಲಿ, ಚೀನಾ ಮಾತ್ರ ಅದರ ಪರವಾಗಿ ವಕಾಲತ್ತು ವಹಿಸುತ್ತದೆ. ವ್ಯಾಪಾರ ವಿಸ್ತರಣೆ, ಭಾರತದ ವಿರುದ್ಧ ಪಾಕ್‌ ಕುತಂತ್ರವನ್ನು ಗಮನದಲ್ಲಿರಿಸಿಕೊಂಡು ಕಮ್ಯುನಿಸ್ಟ್‌ ರಾಷ್ಟ್ರವು ಜಾಗತಿಕ ವೇದಿಕೆಗಳಲ್ಲೂ ಪಾಕ್‌ ಪರ ನಿಲ್ಲುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಮುಂಬೈ ದಾಳಿಯ ರೂವಾರಿ, ಲಷ್ಕರೆ ತಯ್ಬಾ ಉಗ್ರ ಹಫೀಜ್‌ ಸಯೀದ್‌ ಪುತ್ರ ಹಫೀಜ್‌ ತಲಾಹ್‌ ಸಯೀದ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕಿದೆ.

ಹಫೀಜ್‌ ಸಯೀದ್‌ ಪುತ್ರ ಹಫೀಜ್‌ ತಲಾಹ್‌ ಸಯೀದ್‌ನನ್ನು ವಿಶ್ವಸಂಸ್ಥೆಯು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಭಾರತ ಹಾಗೂ ಅಮೆರಿಕವು ಪ್ರಸ್ತಾಪ ಸಲ್ಲಿಸಿದ್ದವು. ಆದರೆ, ಪ್ರಸ್ತಾಪಕ್ಕೆ ಚೀನಾ ವಿರೋಧಿಸುವ ಮೂಲಕ ಮತ್ತೆ ತಾನು ಪಾಕಿಸ್ತಾನದ ಪರ ಎಂಬುದನ್ನು ಸಾಬೀತುಪಡಿಸಿದೆ.

ಒಂದು ದಿನದ ಹಿಂದಷ್ಟೇ ಲಷ್ಕರೆ ತಯ್ಬಾ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಕಾರಣ ಶಹೀದ್‌ ಮೊಹ್ಮೂದ್‌ನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬ ಪ್ರಸ್ತಾಪಕ್ಕೂ ಚೀನಾ ಅಡ್ಡಿಯಾಗಿತ್ತು. ಇದರ ಮರುದಿನವೇ ಭಾರತ ಹಾಗೂ ಅಮೆರಿಕದ ಪ್ರಯತ್ನಕ್ಕೆ ಅಡ್ಡಿಯುಂಟು ಮಾಡಿದೆ. ಅಷ್ಟೇ ಅಲ್ಲ, ಕಳೆದ ಜೂನ್‌ನಿಂದ ಇದುವರೆಗೆ ಭಾರತ ಹಾಗೂ ಅಮೆರಿಕದ ಇಂತಹ ಐದು ಪ್ರಸ್ತಾಪಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಅಡ್ಡಗಾಲು ಹಾಕುವ ಮೂಲಕ ಕುತಂತ್ರ ಮೆರೆದಿದೆ.

ಇದನ್ನೂ ಓದಿ | Sajid Mir | ಲಷ್ಕರೆ ಉಗ್ರನನ್ನು ಕಪ್ಪುಪಟ್ಟಿಗೆ ಸೇರಿಸಲು ಚೀನಾ ಅಡ್ಡಿ, ಮತ್ತೆ ನರಿ ಬುದ್ಧಿ ಪ್ರದರ್ಶನ

Exit mobile version