ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಸಚಿವರ ಗುಂಪಿನ ಸಭೆಯಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಸಂಜೆ ಚಂಡೀಗಢಕ್ಕೆ ಪ್ರಯಾಣಿಸಿದರು. ಜಿಎಸ್‌ಟಿಗೆ ಒಳಪಡುವ ಉತ್ಪನ್ನಗಳು ಹಾಗೂ ಸೇವೆಗಳ ದರ ನಿಗದಿ (Rate Rationalization) ಕುರಿತು ರಚಿಸಲಾಗಿರುವ ಸಚಿವರ ಗುಂಪಿನ ಸಂಚಾಲಕರೂ ಆಗಿರುವ ಸಿಎಂ ಬೊಮ್ಮಾಯಿ, ಎರಡು ದಿನಗಳ ಈ ಸಭೆಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ.
2021ರ ಸೆಪ್ಟೆಂಬರ್‌ನಲ್ಲಿ ಈ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿಗೆ ಸಿಎಂ ಬೊಮ್ಮಾಯಿ ಸಂಚಾಲಕರಾದರೆ, ಬಿಹಾರ, ಗೋವಾ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬರು ಸಚಿವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.
ಸಮಿತಿಗೆ ಮುಖ್ಯವಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವ ಸರಕು ಮತ್ತು ಸೇವೆಗಳನ್ನು ಗುರುತಿಸಿ ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು, ಈಗಾಗಲೆ ಮಂಡಳಿ ನಿರ್ಧಾರ ಕೈಗೊಂಡ ಉತ್ಪನ್ನ ಮತ್ತು ಸೇವೆಗಳನ್ನು ಹೊರತುಪಡಿಸಿ ತೆರಿಗೆ ಸ್ವರೂಪದ ಪುನರ್ವಿಮರ್ಷೆ, ಸದ್ಯದ ತೆರಿಗೆ ಸ್ಲಾಬ್‌ಗಳ ಪರಿಶೀಲನೆ ಹಾಗೂ ಬದಲಾವಣೆಗೆ ಶಿಫಾರಸು ಮಾಡುವ ಕಾರ್ಯವನ್ನು ವಹಿಸಲಾಗಿತ್ತು. ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಜತೆಗೆ, ದೂರಗಾಮಿಯಾಗಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅದಕ್ಕೆ ಅವಶ್ಯಕ ಮಾರ್ಗಸೂಚಿಯನ್ನೂ ಸಮಿತಿ ಸೂಚಿಸಬಹುದು. ಸಮಿತಿ ಎರಡು ತಿಂಗಳಲ್ಲಿ ಪೂರ್ಣ ವರದಿ ಸಲ್ಲಿಸಬೇಕಿದ್ದು, ನಡುವೆ ಮಧ್ಯಂತರ ವರದಿ ಸಲ್ಲಿಸಬಹುದು ಎಂದು ತಿಳಿಸಲಾಗಿತ್ತು.
ಸಮಿತಿಯು ಈಗಾಗಲೆ ಮೂರು ಸಭೆಗಳನ್ನು ನಡೆಸಿದೆ. ಇನ್ನೂ ಪೂರ್ಣ ವರದಿ ಸಿದ್ಧವಾಗಿಲ್ಲ. ಈ ನಡುವೆ ಚಂಡೀಗಢದಲ್ಲಿ ಜೂನ್ 28 ಹಾಗೂ 29 ರಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಸಲ್ಲಿಸಲಿದ್ದಾರೆ. ಈ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರಮುಖವಾಗಿ ಜಿಎಸ್‌ಟಿ ಪರಿಹಾರ ಈ ವರ್ಷ ಅಂತ್ಯಗೊಳ್ಳಲಿದ್ದು, ಅದರ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದರ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಜೂನ್ 30ರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕಕ್ಕೆ ವಾಪಸಾಗಲಿದ್ದಾರೆ.
ಇದನ್ನೂ ಓದಿ | GST ಮಂಡಳಿ ಸಭೆ ಜೂನ್ 28-29ಕ್ಕೆ, ಕುದುರೆ ರೇಸ್, ಆನ್‌ಲೈನ್ ಗೇಮಿಂಗ್‌ಗೆ 28% ಜಿಎಸ್‌ಟಿ ನಿರೀಕ್ಷೆ