Site icon Vistara News

Bihar Politics | ರಾಜೀನಾಮೆಗೆ ನಿತೀಶ್‌ ನಿರ್ಧಾರ, ಬಿಜೆಪಿ ಜತೆಗಿನ ದೋಸ್ತಿ ಕಟ್‌

Bihar Politics

ಪಟನಾ: ಬಿಜೆಪಿ ನಮ್ಮನ್ನು ಅವಮಾನಿಸಿದೆ. ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಹಾಗಾಗಿ ಅವರ ಸಹವಾಸ ತೊರೆಯದೆ ನಮಗೆ ಬೇರೆ ದಾರಿಯೇ ಇಲ್ಲ…

ಜೆಡಿಯು ಶಾಸಕರ ತುರ್ತು ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೀಗೆ ಬೇಸರ, ಆಕ್ರೋಶ ತೋಡಿಕೊಂಡಿದ್ದಾರೆ. ಹಾಗಾಗಿ ನಿತೀಶ್‌ ಕುಮಾರ್‌ ಬಿಜೆಪಿ ಮೈತ್ರಿ ತೊರೆದು ರಾಜೀನಾಮೆ ನೀಡುವುದು ಖಚಿತವಾಗಿದೆ. ರಾಜ್ಯಪಾಲರನ್ನು ಅವರು ಕೆಲವೇ ನಿಮಿಷಗಳಲ್ಲಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷವೀಗ ಬಿಜೆಪಿ ಮೈತ್ರಿಯಿಂದ ಹೊರಬಿದ್ದಂತಾಗಿದೆ. ಇಂದು ಸಂಜೆ 4 ಗಂಟೆಗೆ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಒಟ್ಟಾಗಿ ರಾಜ್ಯಪಾಲ ಫಗುಚೌಹಾಣ್​​ರನ್ನು ಭೇಟಿಯಾಗಲಿದ್ದಾರೆ. ಅದಾದ ಬಳಿಕ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ನಿತೀಶ್​ ಕುಮಾರ್​ ಸಂಪುಟದಲ್ಲಿರುವ ಬಿಜೆಪಿ ಸಚಿವರೂ ರಾಜೀನಾಮೆ ಸಿದ್ಧತೆ ನಡೆಸಿದ್ದು, ಅವರೂ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ.

ಇಂದು ಬೆಳಗ್ಗೆ ಜೆಡಿ(ಯು)ದ ಎಲ್ಲ ಶಾಸಕರು-ಸಂಸದರ ಸಭೆ ನಡೆದಿತ್ತು. ಅತ್ತ ಆರ್​ಜೆಡಿ ಕೂಡ ಇಂದು ಸಭೆ ನಡೆಸಿತ್ತು. ಜೆಡಿಯು ಪಕ್ಷ ಬಿಜೆಪಿಯಿಂದ ಹೊರಬೀಳುತ್ತಿರುವುದಕ್ಕೆ ಕಾಂಗ್ರೆಸ್​ ಮತ್ತು ಆರ್​ಜೆಡಿ ವಲಯದಲ್ಲಿ ಭರ್ಜರಿ ಖುಷಿ ಮನೆಮಾಡಿದೆ. ಅದರಲ್ಲೂ ಎರಡು ದಶಕಗಳಿಂದಲೂ ಮೂಲೆಗುಂಪಾಗಿರುವ ಆರ್​ಜೆಡಿ ಸಿಕ್ಕಾಪಟೆ ಸಂತೋಷದಲ್ಲಿದೆ. ಜೆಡಿಯು ಜತೆ ಮೈತ್ರಿ ಮಾಡಿಕೊಂಡರೆ ಮತ್ತೆ ಅಧಿಕಾರ ಚಲಾಯಿಸಬಹುದು ಎಂಬ ಕಾತರದಲ್ಲಿದೆ. ಸಂಜೆ 4 ಗಂಟೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಹಾಗೇ, ಇವೆಲ್ಲ ರಾಜಕೀಯ ಬೆಳವಣಿಗೆಗಳನ್ನು ಲಾಲು ಪ್ರಸಾದ್ ಯಾದವ್​ ಇಂಚಿಂಚೂ ಮಾಹಿತಿ ಪಡೆಯುತ್ತಿದ್ದಾರೆ.

ಹಾಗೊಮ್ಮೆ ಆರ್​ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಸರ್ಕಾರ ಮೈತ್ರಿ ಮಾಡಿಕೊಂಡರೆ ನಿತೀಶ್​ ಕುಮಾರ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ. ತೇಜಸ್ವಿ ಯಾದವ್​ ಉಪಮುಖ್ಯಮಂತ್ರಿಯಾಗಲಿದ್ದು, ಗೃಹ ಇಲಾಖೆಯೂ ತಮಗೇ ಬೇಕೆಂದು ಅವರು ಕೇಳಿದ್ದಾರೆ ಎನ್ನಲಾಗಿದೆ. ಹಾಗೇ, ಲಾಲೂ ಪ್ರಸಾದ್ ಯಾದವ್​ ಇನ್ನೊಬ್ಬ ಪುತ್ರ ತೇಜ್​ ಪ್ರತಾಪ್ ಯಾದವ್​ ಕೂಡ ಹೊಸ ಸರ್ಕಾರದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮಧ್ಯೆ ಲಾಲು ಪ್ರಸಾದ್​ ಯಾದವ್ ಪುತ್ರಿ ಚಂದಾ ಯಾದವ್​ ಟ್ವೀಟ್​ ಮಾಡಿ ‘ತೇಜಸ್ವೀ ಭವ’ ಎಂದಿದ್ದಾರೆ.

ಅಂಕಿ-ಸಂಖ್ಯೆ ಏನು?
ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು ಸರ್ಕಾರ ರಚನೆ ಮಾಡುವ ಪಕ್ಷದ ಬಳಿ 122 ಶಾಸಕರ ಬಲ ಇರಬೇಕು. ಇಷ್ಟು ದಿನ ಬಿಜೆಪಿಯ 77, ಜೆಡಿಯುದ 45 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)ದ 4 ಸೇರಿ ಒಟ್ಟು 126 ಸಂಖ್ಯಾಬಲದ ಆಧಾರದಲ್ಲಿ ಬಿಹಾರ ಸರ್ಕಾರ ಇತ್ತು. ಇದೀಗ ಜೆಡಿಯು ತನ್ನ ಮೈತ್ರಿ ಪಕ್ಷ ಬಿಜೆಪಿಯಿಂದ ಹೊರಬಿದ್ದು, ಕಾಂಗ್ರೆಸ್​ ಮತ್ತು ಆರ್​ಜೆಡಿಯೊಂದಿಗೆ ಸೇರಿಕೊಂಡರೆ, ಜೆಡಿಯುದ 45, ಆರ್​ಜೆಡಿ ಪಕ್ಷದ 79, ಕಾಂಗ್ರೆಸ್​​ನ 19, ಎಡಪಕ್ಷಗಳ 16 ಮತ್ತು ಎಚ್​​ಎಎಂಬ 4 ಸೇರಿ ಒಟ್ಟು 163 ಶಾಸಕರ ಬಲದೊಂದಿಗೆ ಸರ್ಕಾರ ರಚನೆಗೊಳ್ಳಲಿದೆ.

ಇದನ್ನೂ ಓದಿ:Bihar Politics | ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ನಿತೀಶ್‌ ಕುಮಾರ್‌, ಬಿಜೆಪಿ-ಜೆಡಿಯು ಸರಕಾರ ಪತನ ಸನ್ನಿಹಿತ

Exit mobile version