Site icon Vistara News

Conference of Disarmament: ನಿಶ್ಶಸ್ತ್ರೀಕರಣ: ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ ಪಾಕಿಸ್ತಾನ

pakistan missile

ಹೊಸದಿಲ್ಲಿ: ನಿಶ್ಯಸ್ತ್ರೀಕರಣದತ್ತ ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಪಾಕಿಸ್ತಾನ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಜಿನೀವಾದಲ್ಲಿ ನಡೆಯುತ್ತಿರುವ ನಿಶ್ತ್ರಸ್ತ್ರೀಕರಣ ಸಮಾವೇಶದ ಸಭೆಯಲ್ಲಿ (Conference of Disarmament – CD) ಭಾರತವು ಮಂಡಿಸಿದ ʼ2024ರ ಕ್ರಿಯಾಯೋಜನೆʼಗೆ (POW) ಪಾಕಿಸ್ತಾನ ಯಶಸ್ವಿಯಾಗಿ ತಡೆಯೊಡ್ಡಿದೆ.

ಭಾರತ ಒಂದು ತಿಂಗಳ ಮಟ್ಟಿಗೆ ಸಿಡಿಯ ಅಧ್ಯಕ್ಷನಾಗಿದೆ. ಇದೊಂದು ಬಹುರಾಷ್ಟ್ರೀಯ ಸಂಧಾನ ವೇದಿಕೆಯಾಗಿದ್ದು, ನಿಶ್ಶಸ್ತ್ರೀಕರಣಕ್ಕಾಗಿ ದುಡಿಯುವ ಉದ್ದೇಶ ಹೊಂದಿದೆ. ಸಿಡಿ ಜಿನೀವಾ ಎಲ್ಲ ದೇಶಗಳ ಒಮ್ಮತದ ಮೇಲೆ ಕಾರ್ಯನಿರ್ವಹಿಸುವುದರಿಂದ, ಭಾರತ ಮಂಡಿಸಿದ ಕ್ರಿಯಾಯೋಜನೆಯ ಪ್ರಸ್ತಾವವು ಪಾಕಿಸ್ತಾನದ ವಿರೋಧದಿಂದಾಗಿ ಬಿದ್ದುಹೋಗಿದೆ.

“ಯಾವುದೇ ಕಾರಣವಿಲ್ಲದೆ POW ಅನ್ನು ನಿರ್ಬಂಧಿಸಿರುವುದು ಪಾಕಿಸ್ತಾನದ ಕೊಳಕು ಮನಸ್ಥಿತಿಯಾಗಿದೆ” ಎಂದು ಭಾರತೀಯ ನಿರಸ್ತ್ರೀಕರಣ ರಾಜತಾಂತ್ರಿಕರು ಹೇಳಿದ್ದಾರೆ. ಭಾರತವು ಸಿಡಿಯಲ್ಲಿ ಜನವರಿ 21ರಿಂದ ಫೆಬ್ರವರಿ 20ರವರೆಗೆ ಒಂದು ತಿಂಗಳ ಅಧ್ಯಕ್ಷೀಯ ಅವಧಿ ಹೊಂದಿದೆ. 2022ರಲ್ಲಿ ಸಿಡಿ ಜಿನೀವಾ ಕೊನೆಯ POW ಅಳವಡಿಸಿಕೊಂಡಿತ್ತು.

ಶುಕ್ರವಾರ ನಡೆದ ಸಿಡಿಯ ಸಭೆಯಲ್ಲಿ, ಇಸ್ಲಾಮಾಬಾದ್ ನಿರಸ್ತ್ರೀಕರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣದ ಮುನ್ನಡೆಯನ್ನು ತಡೆಯುವಲ್ಲಿ ತನ್ನ ಕೈವಾಡ ಪ್ರದರ್ಶಿಸಿದೆ. ಪಾಕ್‌ ಇದನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಪಾಕಿಸ್ತಾನವು Fissile- Material Cut- off Treaty ಗೆ (ವಿದಳನ ಸಾಮಗ್ರಿ ಕಡಿತ ಒಪ್ಪಂದ – FMCT) ಸಹಿ ಹಾಕುವುದನ್ನು ವಿರೋಧಿಸುತ್ತ ಬಂದಿದೆ. ಏಕೆಂದರೆ ಇದು ಭಾರತದೊಂದಿಗಿನ ತನ್ನ ಮಿಲಿಟರಿ ನಿಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಕ್‌ ಹೇಳಿಕೊಂಡಿದೆ.

ಯುಎಸ್, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಚೀನಾ ಕೂಡ ಭಾರತ ಮಂಡಿಸಿದ ಪಿಒಡಬ್ಲ್ಯೂ ಅನ್ನು ಬೆಂಬಲಿಸಿದವು. ಪ್ಲೀನರಿ ಸಭೆಯಲ್ಲಿ ಹಲವಾರು ಪ್ರತಿನಿಧಿಗಳು, ಪಾಕಿಸ್ತಾನವು ಪ್ರಸ್ತಾಪವನ್ನು ಏಕೆ ತಡೆಯುತ್ತಿದೆ ಎಂಬುದಕ್ಕೆ ನಿಖರವಾದ ಕಾರಣವನ್ನು ತಿಳಿಯಲು ಬಯಸಿದ್ದರು. ಆದರೆ ಪಾಕ್‌ ಇದನ್ನು ಸ್ಪಷ್ಟಪಡಿಸಲಿಲ್ಲ. ಈ ವಿಷಯದ ಬಗ್ಗೆ ತಿಳಿದಿರುವ ರಾಜತಾಂತ್ರಿಕರ ಪ್ರಕಾರ, ಭಾರತವು ಪಿಒಡಬ್ಲ್ಯೂ ಅನ್ನು ಪ್ರಸ್ತಾಪಿಸಿದ್ದರಿಂದಲೇ ಪಾಕಿಸ್ತಾನವು ಅದಕ್ಕೆ ಅಡ್ಡಿಪಡಿಸಿದೆ. ಒಮ್ಮತವನ್ನು ಸಾಧಿಸುವಲ್ಲಿ ಭಾರತ ಯಶಸ್ವಿಯಾಗುವುದನ್ನು ಅದು ಇಷ್ಟಪಡಲಿಲ್ಲ.

ಸಿಡಿ ಜಿನೀವಾ ಒಂದು ಬಹುರಾಷ್ಟ್ರೀಯ ಸಮಾಲೋಚನಾ ಸಂಸ್ಥೆಯಾಗಿದ್ದು, 2009ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಗಟ್ಟುವುದು ಮತ್ತು ನಕಾರಾತ್ಮಕ ಭದ್ರತಾ ಬೆಳವಣಿಗೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿರುವ ಸಂಸ್ಥೆಯಾಗಿದೆ.

ಇದನ್ನೂ ಓದಿ: Pakistan Election: ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಸಹೋದರ ಶೆಹಬಾಜ್ ನಾಮನಿರ್ದೇಶಿಸಿದ ನವಾಜ್ ಷರೀಫ್

Exit mobile version