Site icon Vistara News

coronavirus | ಒಮಿಕ್ರಾನ್ ಬಿಎಫ್.7ನಿಂದ ಭಾರತೀಯರಿಗೆ ಗಂಭೀರ ಅಪಾಯ ಇಲ್ಲ ಎಂದ ತಜ್ಞರು

Omicron BF.7 @ China and Coronavirus

ನವದೆಹಲಿ: ಚೀನಾದಲ್ಲಿ ದಿಢೀರ್‌ನೇ ಕೋವಿಡ್ ಪ್ರಕರಣಗಳ (coronavirus) ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ವೈರಸ್‌ನ ಒಮಿಕ್ರಾನ್ ಬಿಎಫ್.7(Omicron BF.7) ವೇರಿಯಂಟ್‌ನಿಂದ ಭಾರತದಲ್ಲಿ ತೀರಾ ಅಪಾಯವಿಲ್ಲ ಎಂದು ಬೆಂಗಳೂರಿನ ಟಾಟಾ ಇನ್ಸ್‌ಟಿಟ್ಯೂಟ್‌ ಫಾರ್ ಜೆನೆಟಿಕ್ಸ್ ಆ್ಯಂಡ್ ಸೊಸೈಟಿ(ಟಿಐಜಿಎಸ್) ನಿರ್ದೇಶಕ ರಾಕೇಶ್ ಮಿಶ್ರಾ ಅವರು ಹೇಳಿದ್ದಾರೆ. ಹಾಗಿದ್ದೂ, ಮಾಸ್ಕ್ ಧರಿಸಬೇಕು ಮತ್ತು ಅನಗತ್ಯವಾಗಿ ಹೆಚ್ಚು ಜನರು ಇರುವ ಕಡೆ ಹೋಗುವುದನ್ನು ನಿಲ್ಲಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಭಾರತದಂತೆ, ಚೀನಾ ಕಠಿಣ ಮತ್ತು ಸೋಂಕಿನ ಬಹು ಅಲೆಗಳನ್ನು ಎದುರಿಸಿಲ್ಲ. ಹಾಗಾಗಿ, ಈಗ ಚೀನಾದಲ್ಲಿ ದಿಢೀರ್‌ನೇ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಮಿಕ್ರಾನ್ ಉಪ ತಳಿಯಾಗಿರುವ ಬಿಎಫ್.7 ಆಲ್ಮೋಸ್ಟ್ ಒಮಿಕ್ರಾನ್ ರೀತಿಯಲ್ಲಿದೆ. ಒಂದಿಷ್ಟು ಸಣ್ಣ ಪುಟ್ಟ ಬದಲಾವಣೆಗಳನ್ನು ಗುರುತಿಸಬಹುದಷ್ಟೇ. ಯಾವುದೇ ದೊಡ್ಡ ವ್ಯತ್ಯಾಸಗಳಿಲ್ಲ. ನಾವು ಈಗಾಗಲೇ ಒಮಿಕ್ರಾನ್ ಅಲೆಯನ್ನು ಎದುರಿಸಿದ್ದೇವೆ. ಹಾಗಾಗಿ, ನಾವು ಒಮಿಕ್ರಾನ್ ಬಿಎಫ್.7 ವೇರಿಯಂಟ್‌ ಬಗ್ಗೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ. ವಾಸ್ತವದಲ್ಲಿ ಇದು ಒಂದೇ ತೆರನಾದ ವೈರಸ್ ಆಗಿದೆ ಎಂದು ಅವರು ಹೇಳಿದ್ದಾರೆ.

ಝೀರೋ ಕೋವಿಡ್ ಪಾಲಿಸಿ ಅನ್ವಯ ಚೀನಾ ಜನರ ಚಲನವಲನವನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು. ಅಧಿಕಾರಿಗಳು ಅಪಾರ್ಟ್‌ಮೆಂಟ್ಸ್, ಬಿಲ್ಡಿಂಗ್‌, ಎಲ್ಲ ಜನವಸತಿ ಪ್ರದೇಶಗಳನ್ನು ಕಟ್ಟಿ ಹಾಕಿದ್ದರು. ಅಲ್ಲದೇ, ಒಬ್ಬ ವ್ಯಕ್ತಿಗೆ ಸೋಂಕು ಕಂಡು ಬಂದರೆ, ಆತ ವಾಸಿಸುವ ನೆರೆಹೊರೆಯವರನ್ನು ಮೇಲೂ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಜೀನಾದ ಜನರು ಸೋಂಕಿಗೆ ಎದುರುಗೊಳ್ಳಲೇ ಇಲ್ಲ. ಹಾಗೆಯೇ, ವಯಸ್ಕರಿಗೆ ವ್ಯಾಕ್ಸೀನ್ ಕೂಡ ಮಾಡಿಸಲಿಲ್ಲ. ಈಗ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಏಕ್ದಮ್ ಪ್ರಕರಣಗಳು ಏರಿಕೆಯಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?

Exit mobile version