ನವ ದೆಹಲಿ: ಚೀನಾದಲ್ಲಿ ಪ್ರತಿನಿತ್ಯ ಹತ್ತು ಲಕ್ಷ ಹೊಸ ಕೋವಿಡ್ ಸೋಂಕುಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಹೈ ಅಲರ್ಟ್ ತೆಗೆದುಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಸೋಮವಾರ ಚೀನಾದಿಂದ ಬಂದ ಇಬ್ಬರು ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಆಗ್ರಾ ಹಾಗೂ ಬೆಂಗಳೂರಿನಲ್ಲಿ ವರದಿಯಾಗಿವೆ. ಇವರ ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಕಳಿಸಲಾಗಿದೆ.
ಹೊಸ ವರ್ಷದ ಆಗಮನ ಹಾಗೂ ಸಂಬಂಧಿತ ಆಚರಣೆಗಳು- ಪಾರ್ಟಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಬಿಗಿ ನಿಯಮಾವಳಿಗಳನ್ನು ತರಲು ಸರ್ಕಾರ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ʼಮಾಕ್ ಡ್ರಿಲ್ʼ ಅಥವಾ ʻಅಣಕು ಕಾರ್ಯಾಚರಣೆʼಯನ್ನು ಕೂಡ ಮಾಡಲಾಗುತ್ತಿದೆ. ಏನು ಈ ಮಾಕ್ ಡ್ರಿಲ್ ಅಂದರೆ?
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ದೇಶಾದ್ಯಂತ ಇಂದು ಮಾಕ್ ಡ್ರಿಲ್‌ಗೆ ಕರೆ ನೀಡಿದ್ದಾರೆ. ʼʼಸಾಂಕ್ರಾಮಿಕವನ್ನು ಎದುರಿಸುವಲ್ಲಿ ನಮ್ಮ ಈ ಹಿಂದಿನ ಅನುಭವದ ಆಧಾರದಲ್ಲಿ ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಕ್ ಡ್ರಿಲ್ ಅವುಗಳಲ್ಲಿ ಒಂದು. ಇದು ನಮ್ಮ ಸಿದ್ಧತೆ ಎಷ್ಟು ಎಂದು ಪರಿಶೀಲಿಸಲು ನೆರವಾಗುತ್ತದೆ. ಇದು ನಮ್ಮ ಕೊರತೆಗಳನ್ನು ಕಂಡುಕೊಳ್ಳಲು, ಅವುಗಳನ್ನು ಸರಿಪಡಿಸಲು ನೆರವಾಗಲಿದೆʼʼ ಎಂದಿದ್ದಾರೆ.
ಇದು ಹೇಗೆ ನಡೆಯುತ್ತದೆ?
ನಿಗದಿಪಡಿಸಲಾದ ಆಸ್ಪತ್ರೆಗೆ ಅಣಕು ರೋಗಿಯನ್ನು ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಆಕ್ಸಿಜನ್, ಐಸಿಯುವರೆಗೂ ಎಲ್ಲ ಪ್ರಕ್ರಿಯೆಗಳನ್ನು ನೆರವೇರಿಸುವ ಮೂಲಕ ಈ ಕಾರ್ಯಾಚರಣೆ ನಡೆಯುತ್ತದೆ.
ಎಲ್ಲಾ ಜಿಲ್ಲೆಗಳ ಆರೋಗ್ಯ ಸೌಲಭ್ಯಗಳ ಲಭ್ಯತೆ, ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ, ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳು, ಐಸಿಯು ಹಾಸಿಗೆಗಳು, ವೆಂಟಿಲೇಟರ್ ಬೆಂಬಲಿತ ಹಾಸಿಗೆಗಳು, ವೈದ್ಯರು, ದಾದಿಯರು, ಅರೆವೈದ್ಯರು, ಆಯುಷ್ ವೈದ್ಯರ ಅತ್ಯುತ್ತಮ ಲಭ್ಯತೆ ಮುಂತಾದ ಅಂಶಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಯುತ್ತದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರ ಮುಂಚೂಣಿ ಕಾರ್ಯಕರ್ತರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ | Coronavirus | ದೇಶದಲ್ಲಿ ನಿಧಾನವಾಗಿ ಹೆಚ್ಚುತ್ತಿದೆಯಾ ಕೊರೊನಾ? ವಾರಗಳ ಲೆಕ್ಕಾಚಾರದಲ್ಲಿ ಕೋವಿಡ್ ಕೇಸ್ನಲ್ಲಿ ಶೇ.11ರಷ್ಟು ಏರಿಕೆ
COVID-19 ನಿರ್ವಹಣೆಯಲ್ಲಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರು, ತೀವ್ರತರವಾದ ಪ್ರಕರಣಗಳಿಗೆ ವೆಂಟಿಲೇಟರಿ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ನಲ್ಲಿ ತರಬೇತಿ ಪಡೆದ ಆರೋಗ್ಯ ವೃತ್ತಿಪರರು, ಆಮ್ಲಜನಕ ತಯಾರಿ ಸ್ಥಾವರಗಳ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಇತ್ಯಾದಿ ಸುಧಾರಿತ ಮತ್ತು ಮೂಲಭೂತ ಮಾನವ ಸಂಪನ್ಮೂಲ ಸಾಮರ್ಥ್ಯದ ಮೇಲೂ ಈ ಕಾರ್ಯಾಚರಣೆ ಕೇಂದ್ರೀಕರಿಸುತ್ತದೆ. ಜೀವರಕ್ಷಕ ಆಂಬ್ಯುಲೆನ್ಸ್‌ಗಳು, ಪರೀಕ್ಷಾ ಉಪಕರಣಗಳು, ಅಗತ್ಯ ಔಷಧಗಳನ್ನೂ ಪರಿಶೀಲಿಸುತ್ತದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಆರೋಗ್ಯ ತುರ್ತುಪರಿಸ್ಥಿತಿ ಅಗತ್ಯ ಪೂರೈಸಲು ಅಗತ್ಯವಿರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೆ ತರುವುದು ಅವಶ್ಯಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಒತ್ತಿ ಹೇಳಿದೆ. “ಈ ಕಾರ್ಯಾಚರಣೆಯ ಉದ್ದೇಶ ಕೋವಿಡ್ ನಿರ್ವಹಣೆಗಾಗಿ ಆರೋಗ್ಯ ಸೌಲಭ್ಯಗಳ ಸಿದ್ಧತೆಯನ್ನು ಖಚಿತಪಡಿಸುವುದು” ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ | Coronavirus | ಜನರು ಇನ್ನು ಕೋವಿಡ್ ಲಸಿಕೆಯ 2ನೇ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಪ್ರಾರಂಭಿಸಲಿ ಎಂದ ಕೇಂದ್ರ ಆರೋಗ್ಯ ಸಚಿವ