ನವದೆಹಲಿ: ಚೀನಾದಲ್ಲಿ ದಿಢೀರ್‌ನೇ ಕೋವಿಡ್ ಪ್ರಕರಣಗಳು (Covid-19) ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಅದರಂತೆ, ಹೆಚ್ಚು ಜನರು ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲು ಮುಂದಾಗಿದೆ. ಜತೆಗೆ, ಕೋವಿಡ್ ಕುರಿತು ಪರಿಸ್ಥಿತಿಯನ್ನು ಅವಲೋಕಿಸಲು ಪ್ರತಿ ವಾರ ಸಭೆ ನಡೆಸುವುದರ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಅವರ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೋವಿಡ್ ಇನ್ನೂ ಮುಗಿದಿಲ್ಲ. ಸಂಬಂಧಿಸಿದ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ನಿಗಾ ವ್ಯವಸ್ಥೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಅವರು ತಿಳಿಸಿದ್ದಾರೆ.
ನೀತಿ ಆಯೋಗದ ಸದಸ್ಯರೂ ಆಗಿರುವ ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ವಿ ಕೆ. ಪೌಲ್ ಮಾತನಾಡಿ, ಆತಂಕ್ಕೀಡಾಗುವ ಅಗತ್ಯವಿಲ್ಲ. ಸಮರ್ಪಕ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಜನಸಂದಣಿಯಲ್ಲಿ ಇದ್ದಾಗ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಮಾರ್ಗದರ್ಶಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಸಾಧ್ಯವಾದಷ್ಟು ಪ್ರತಿದಿನವೂ ಗೊತ್ತುಪಡಿಸಿದ INSACOG ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೋರೇಟರೀಸ್(IGSLs)ಗೆ ಕಳುಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಗಳಿಗೆ ಸೂಚಿಸಲಾಯಿತು ಎಂದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳಿದರು.
ಭಾರತವು, ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಮಾರ್ಗದರ್ಶಿ ಪಾಲನೆ ಎಂಬ ಐದು ಅಂಶಗಳ ಆಧಾರದ ಮೇಲೆ ಕೋವಿಡ್ ತಡೆಯುವ ಕೆಲಸವನ್ನು ಮಾಡುತ್ತಿದೆ. ಸದ್ಯ ಭಾರತದಲ್ಲಿ ವಾರಕ್ಕೆ ಸರಾಸರಿ 1200 ಕೇಸ್‌ಗಳು ವರದಿಯಾಗುತ್ತಿವೆ. ಸಾರ್ವಜನಿಕ ಆರೋಗ್ಯಕ್ಕೆ ಕೋವಿಡ್ ಸವಾಲು ಜಗತ್ತಿನಾದ್ಯಂತ ಇನ್ನೂ ಮುಂದುವರಿದಿದೆ. ಜಗತ್ತಿನ ಲೆಕ್ಕ ತೆಗೆದುಕೊಂಡರೆ, ವಾರಕ್ಕೆ ಸುಮಾರು 35 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ ಎಂದು ರಾಜೇಶ್ ಭೂಷಣ್ ಅವರು ತಿಳಿಸಿದರು.
ಇದನ್ನೂ ಓದಿ | ಕೋವಿಡ್-19 | ಮೂರನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ: ಡಾ. ಕೆ. ಸುಧಾಕರ್