Site icon Vistara News

Covid-19 | ಮತ್ತೆ ಮಾಸ್ಕ್‌ ದಂಡ ಜಾರಿ ಚಿಂತನೆ: ನವದೆಹಲಿಯಲ್ಲಿ ಏರಿಕೆಯತ್ತ ಸೋಂಕು

covid

ನವದೆಹಲಿ: ಸತತ ಎರಡು ವರ್ಷ ಎಲ್ಲರಿಗೂ ಸಂಕಷ್ಟ ನೀಡಿದ ಕರೊನಾ (Covid-19) ಸೋಂಕು ಇನ್ನೇನು ಸರಿಯಿತು ಎಂದು ನಿರಾಳವಾಗುವಷ್ಟರಲ್ಲಿ ರಾಜಧಾನಿಯಲ್ಲಿ ಮಾಸ್ಕ್‌ ಕಡ್ಡಾಯ ಸೇರಿ ಮತ್ತೆ ಕರೊನಾ ನಿರ್ಬಂಧಗಳನ್ನು ವಿಧಿಸುವ ಮಾತುಗಳು ಕೇಳಿಬರುತ್ತಿವೆ. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನರಲ್ಲಿ ಜಾಗೃತಿಯ ಕೊರತೆಯಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಮಾಸ್ಕ್‌ ಧರಿಸದಿರುವವರಿಗೆ ದಂಡ ವಿಧಿಸುವಿಕೆಯನ್ನು ಮತ್ತೆ ಆರಂಭಿಸಲು ನವದೆಹಲಿ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂದಿದೆ ಎನ್ನಲಾಗುತ್ತಿರುವ ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಕರೊನಾ ನಿರ್ಬಂಧ ಹೆಚ್ಚಾಗುತ್ತದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ನವದೆಹಲಿಯಲ್ಲಿ ಕರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ, ಮಾಸ್ಕ್‌ ಧರಿಸದಿರುವವರಿಗೆ ದಂಡ ವಿಧಿಸುವ ಕ್ರಮವನ್ನು ಕೈಬಿಡಲಾಗಿತ್ತು. ಜನರು ತಮ್ಮ ಸುರಕ್ಷತೆಗಾಗಿ ಸ್ವಯಂ ಪ್ರೇರಣೆಯಿಂದ ಮಾಸ್ಕ್‌ ಧರಿಸಬಹುದು ಎಂದು ತಿಳಿಸಲಾಗಿತ್ತು. 2020ರ ಹೋಲಿಕೆಯಲ್ಲಿ ಈಗ ಸಮುದಾಯ ಸುರಕ್ಷಿತವಾಗಿದೆ. ಬಹುತೇಕ ಜನರಿಗೆ ಎರಡು ಡೋಸ್‌ ಲಸಿಕೆ ನೀಡಲಾಗಿದೆ. ಇದರ ಜತೆಗೆ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚಳವಾಗಿದೆ. ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ವೈಯಕ್ತಿಕ ಅಂತರ ಕಾಪಾಡುವುದು ಅವಶ್ಯಕತೆ ಇಲ್ಲ ಎಂದಲ್ಲ. “ಕರೊನಾ ಸಮಯದಲ್ಲಿ ಜನರು ಅನುಭವಿಸಿರುವ ಕಷ್ಟ ನೆನಪಿನಲ್ಲಿದೆ ಎಂಬುದು ನಮ್ಮ ಭಾವನೆ. ಅದರ ಆಧಾರದಲ್ಲಿ ಸ್ವಯಂ ಜಾಗೃತಿ ಕೈಗೊಂಡು, ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್‌ ಧರಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ನಮ್ಮ ಉದ್ದೇಶವನ್ನು ಜನರು ಅರಿತಂತೆ ಕಾಣುತ್ತಿಲ್ಲ” ಎಂದು ನವದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2022ರ ಮಾರ್ಚ್‌ಗೂ ಮುನ್ನ ನವದೆಹಲಿಯಲ್ಲಿ ಕರೊನಾ ಪ್ರತಿನದಿನದ ಸೋಂಕಿತರ ಸಂಖ್ಯೆ 500ಕ್ಕೂ ಹೆಚ್ಚಿತ್ತು. ಮಾರ್ಚ್‌ 1ರ ವೇಳೆಗೆ 350ರ ಆಸುಪಾಸಿಗೆ ಬಂದಿತು. ಏಪ್ರಿಲ್‌ 1ರ ಸುಮಾರಿಗೆ ದೆಹಲಿ ಸೇರಿ ಅನೇಕ ರಾಜ್ಯಗಳು ಕೋವಿಡ್‌ ನಿಯಮಗಳನ್ನು ಸಡಿಲಿಸಿತು. ಕರ್ನಾಟಕದಲ್ಲಿ ನಿಯಮ ಸಡಿಲಿಸುವ ಆದೇಶ ಮಾಡಿಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಅಂತರ ಪಾಲನೆ, ಮಾಸ್ಕ್‌ ಧಾರಣೆಗೆ ವಿಧಿಸುತ್ತಿದ್ದ ದಂಡಗಳನ್ನು ಬಹುತೇಕ ಸ್ಥಗಿತಗೊಳಿಸಲಾಗಿದೆ. ಮೆಟ್ರೊ. ರೈಲ್ವೆ ನಿಲ್ದಾಣದಂತಹ ಕೆಲವೆಡೆ ಮಾತ್ರ ದಂಡ ವಸೂಲಿ ನಡೆಯುತ್ತಿದೆ. ದೇಶದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲೂ ನಿರ್ಬಂಧಗಳನ್ನು ತೆರವುಗೊಳಿಸಿ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಅಲ್ಲಿಯೂ ಜನರು ಯಾವುದೇ ನಿಯಮಾವಳಿಗಳನ್ನು ಪಾಲಿಸದೆ ನೂಕುನುಗ್ಗಲು ಉಂಟಾಗುತ್ತಿರುವುದು ಕಂಡುಬಂದಿದೆ. ಇತ್ತೀಚೆಗೆ ಮುಂಬೈಯಲ್ಲೂ ಹೊಸ ರೂಪಾಂತರಿ ತಳಿಯೊಂದು ಪತ್ತೆಯಾಗಿದೆ ಎಂಬ ವರದಿ ಆತಂಕ ಸೃಷ್ಟಿಸಿತ್ತು. ಆದರೆ ಅದು ಹೆಚ್ಚು ಪರೀಣಾಮಕಾರಿ ಅಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

Video: ತಿಮ್ಮಪ್ಪನ ದರ್ಶನಕ್ಕೆ ನೂಕು ನುಗ್ಗಲು

ಈ ನಡುವೆ ನವದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗುರುವಾರ 325 ದಾಖಲಾಗಿದ್ದ ಹೊಸ ಸೋಂಕಿತರ ಸಂಖ್ಯೆ ಶುಕ್ರವಾರ 366ಕ್ಕೆ ಹೆಚ್ಚಿದೆ. ಕಳೆದ 8-10 ದಿನಗಳಿಂದ ಈ ಏರಿಕೆ ನಿರಂತರವಾಗಿದೆ. ನವದೆಹಲಿಯ ಆಸ್ಪತ್ರೆಗಳಲ್ಲಿ ಒಟ್ಟು 5% ಹಾಸಿಗೆಗಳು ಮಾತ್ರ ಭರ್ತಿಯಾಗಿವೆ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಅಧಿಕಾರಿಗಳು ತಿಳಿಸುತ್ತಲೇ ಬಂದಿದ್ದಾರೆ. ಆದರೆ ಇದೀಗ ನಿರಂತರ ಏರಿಕೆ ಕಾಣುತ್ತಿರುವುದು ಉತ್ತಮ ಸೂಚನೆ ಅಲ್ಲ ಎನ್ನುವುದು ತಜ್ಞರ ವಾದ. ನವದೆಹಲಿಯ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿಯ ಸಭೆಯು ಏಪ್ರಿಲ್‌ 20ರಂದು ನಡೆಯಲಿದೆ. ಮಾಸ್ಕ್‌ ಕಡ್ಡಾಯ ಮಾಡುವುದು, ದಂಡ ವಿಧೀಸುವಿಕೆಯೂ ಚರ್ಚೆ ಆಗಲಿದೆ. ಈ ಸಭೆಯಲ್ಲಿ ತಜ್ಞರು ನೀಡುವ ಕಾರಣಗಳ ಆಧಾರದಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಓದಿಗಾಗಿ | ಕರೊನಾದಿಂದ ಆರ್ಥಿಕತೆಗೆ ಪಾಸಿಟಿವ್‌: 1 ಲಕ್ಷ ಕೋಟಿ ಡಾಲರ್‌ ದಾಟಿದ ಯುಪಿಐ ವಹಿವಾಟು

ಕರ್ನಾಟದಲ್ಲೂ ನಿರ್ಬಂಧ?

ದೇಶ ಹಾಗೂ ವಿಶ್ವವನ್ನು ಬಾಧಿಸಿದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಕೋವಿಡ್‌-19 ಸಂಕಷ್ಟ ಒಡ್ಡಿತ್ತು. ಪ್ರತಿದಿನದ ಹೊಸ ಸೋಂಕು ಪ್ರಕರಣಗಳು ಹತ್ತಾರು ಸಾವಿರಕ್ಕೆ ಏರಿ ಹಾಸಿಗೆಯಿಲ್ಲದೆ ರಸ್ತೆ, ಫುಟ್‌ಪಾತ್‌, ಆಸ್ಪತ್ರೆಯ ನೆಲದ ಮೇಲೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಮೂರನೇ ಅಲೆಯ ನಂತರ ಸೋಂಕು ಇಳಿಮುಖವಾಗಿದೆ. ಈ ನಡುವೆ ಮಾರ್ಚ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ಆಗಸ್ಟ್‌ ನಂತರದಲ್ಲಿ ದೇಶಕ್ಕೆ ನಾಲ್ಕನೇ ಅಲೆ ಅಪ್ಪಳಿಸಬಹುದು ಎಂದು ತಿಳಿಸಿದ್ದರು.

ಇದೀಗ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಸಚಿವರು, ಜೂನ್‌-ಜುಲೈನಲ್ಲಿ ನಾಲ್ಕನೇ ಅಲೆ ಕರ್ನಾಟಕದಲ್ಲಿ ಕಾಣಿಸಬಹುದು ಎಂದಿದ್ದಾರೆ. ಅದು ಸೆಪ್ಟೆಂಬರ್‌ವರೆಗೂ ಮುಂದುವರಿಯಬಹುದು. ಕರ್ನಾಟಕ ಎಲ್ಲ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧವಾಗಿದೆ ಎಂದಿದ್ದರು. ಮಾಸ್ಕ್‌ ಧಾರಣೆ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವರು, ಮಾಸ್ಕ್‌ ಧಾರಣೆ ಈಗಲೂ ಕಡ್ಡಾಯವಾಗಿಯೇ ಇದೆ. ಇದರಲ್ಲಿ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಮಾಹಿತಿ ನೀಡಿದ್ದರು.

ಕರ್ನಾಟಕದಲ್ಲಿ ಸದ್ಯ ಸೋಕಿನ ಸಂಖ್ಯೆ ಅತ್ಯಂತ ಕಡಿಮೆ ಇದೆ. ಕಳೆದೆರಡು ವಾರದ ಹಿಂದೆ ತುಸು ಏರಿಕೆ ಕಂಡಿತ್ತಾದರೂ ಈಗ ಇಳಿಮುಖವಾಗಿದೆ. ಶುಕ್ರವಾರ 49ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರಿನಿಂದಲೇ 47 ಪ್ರಕರಣಗಳು ಪತ್ತೆಯಾಗಿದ್ದವು. ಪ್ರತಿದಿನದ ಪಾಸಿಟಿವಿಟಿ ದರ ಸದ್ಯ 0.64% ಇದ್ದು, ವಾರದ ಪಾಸಿಟಿವಿಟಿ ದರ 0.56% ಇದೆ. ಸುಮಾರು 4% ವಾರದ ಪಾಸಿಟಿವಿಟಿ ದರ ಬರುವವರೆಗೂ ಆತಂಕಗೊಳ್ಳುವವ ಅಗತ್ಯವಿಲ್ಲ ಎಂದು ತಜ್ಞರು ತಿಳಿಸುತ್ತಾರೆ. ಆದರೆ ಕರೊನಾ ಸೋಂಕಿಗೆ ರಾಜ್ಯ, ದೇಶದ ಗಡಿಗಳ ಅರಿವಿಲ್ಲ. ನವದೆಹಲಿಯಲ್ಲಿ ಅಥವಾ ಇನ್ನಾವುದೇ ರಾಜ್ಯದಲ್ಲಿ ಏರಿಕೆ ಕಂಡರೂ ಕರ್ನಾಟಕದಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗುತ್ತದೆ. ಭವಿಷ್ಯದಲ್ಲಿ ನಿಯಮಗಳನ್ನು ಇನ್ನಷ್ಟು ಕಠಿಣವಾಗಿ ಅನ್ವಯ ಮಾಡಬೇಕೆ ಅಥವಾ ಇಲ್ಲವೇ ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Exit mobile version