Site icon Vistara News

Dawood Ibrahim: ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ? ಆಸ್ಪತ್ರೆಗೆ ದಾಖಲು

Dawood Ibrahim @ Pakistan Karachi

ಹೊಸದಿಲ್ಲಿ: ಭಾರತಕ್ಕೆ ಹಲವು ಅಪರಾಧಗಳ ಮೂಲಕ ಕಂಟಕವಾಗಿದ್ದ, ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪೈಕಿ ಒಬ್ಬನಾದ ದಾವೂದ್ ಇಬ್ರಾಹಿಂ ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಭಾರತ ಹಾಗೂ ಪಾಕಿಸ್ತಾನದ ತನಿಖಾ ಅಧಿಕಾರಿಗಳು ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಖಚಿತಪಡಿಸಿಲ್ಲ. ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದ್ದು, ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಜನವರಿಯಲ್ಲಿ, ಭೂಗತ ಲೋಕದ ಡಾನ್ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದ್ದರು.

ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಆಗಿದ್ದಾನೆ. ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.

ಇದನ್ನೂ ಓದಿ: Interpol | ದಾವೂದ್‌, ಹಫೀಜ್‌ ಎಲ್ಲಿ ಎಂಬ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪಾಕ್‌ನ ತನಿಖಾ ಸಂಸ್ಥೆ ಅಧಿಕಾರಿ

Exit mobile version