Site icon Vistara News

Deadly Attack: ಹಾಡಹಗಲೇ ಶಿವಸೇನೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೋ ಇದೆ

Deadly Attack

ಚಂಢಿಗಡ: ಪಂಜಾಬ್‌ನ ಶಿವಸೇನೆ ಮುಖಂಡ(Shivsena Leader)ನ ಮೇಲೆ ನಾಲ್ವರು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ(Deadly Attack) ನಡೆಸಿರುವ ಘಟನೆ ಲುಧಿಯಾನದಲ್ಲಿ ನಡೆದಿದೆ. ಶಿವಸೇನೆ ನಾಯಕ ಸಂದೀಪ್‌ ಥಾಪರ್‌ ಅಲಿಯಾಸ್‌ ಗೋರಾ ಮೇಲೆ ಸ್ಕೂಟರ್‌ನಲ್ಲಿ ಬಂದ ನಿಹಾಂಗ್ ಉಡುಪಿನಲ್ಲಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ವೈರಲ್‌(Viral Video) ಆಗಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಥಾಪರ್‌ ಆಸ್ಪತ್ರೆಯಿಂದ ಹೊರ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಆತನನ್ನು ಹಿಂಬಾಲಿಸಲು ಶುರು ಮಾಡುತ್ತಾರೆ. ಆಗ ದಾಳಿಕೋರರಲ್ಲಿ ಒಬ್ಬ ಕತ್ತಿಯಿಂದ ಥಾಪರ್ ತಲೆಯ ಮೇಲೆ ಬಿಡದೇ ಹೊಡೆಯಲು ಶುರು ಮಾಡುತ್ತಾನೆ. ಥಾಪರ್ ಕೈ ಜೋಡಿಸಿ ಬಿಟ್ಟು ಬಿಡಿ ಎಂದು ಅಂಗಾಲಾಚುತ್ತಿದ್ದರೂ ಅದನ್ನು ಲೆಕ್ಕಿಸದೇ ಆತನ ಮೇಲೆ ನಿರಂತರ ದಾಳಿ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಬ್ಬ ನಿಹಾಂಗ್ ಕತ್ತಿಯಿಂದ ದಾಳಿ ಮುಂದುವರಿಸಿದಾಗ ಶಿವಸೇನಾ ಪಂಜಾಬ್ ನಾಯಕ ಬ್ಯಾಲೆನ್ಸ್‌ ಕಳೆದುಕೊಂಡು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಾರೆ. ಅಲ್ಲೇ ಇದ್ದ ಪ್ರಯಾಣಿಕರು ಆಘಾತದಿಂದ ನೋಡುತ್ತಿದ್ದಂತೆ ದಾಳಿಕೋರರು ಸ್ಕೂಟರ್​​ನಲ್ಲಿ ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಅನೇಕ ಜನ ಥಾಪರ್‌ ಸಹಾಯಕ್ಕೆ ಬರಲೇ ಇಲ್ಲ. ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ್ ಅರೋರಾ ಅವರ ನಾಲ್ಕನೇ ಪುಣ್ಯತಿಥಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಥಾಪರ್ ಅವರು ಸಂವೇದನಾ ಟ್ರಸ್ಟ್ ಎಂಬ ಎನ್‌ಜಿಒ ಕಚೇರಿಯಿಂದ ಸಿವಿಲ್ ಆಸ್ಪತ್ರೆ ಬಳಿ ತೆರಳಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮಾರಣಾಂತಿಕ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಥಾಪರ್‌ನನ್ನು ಸ್ಥಳೀಯ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಅವರನ್ನು ಸ್ಥಳೀಯ ದಯಾನಂದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು. ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.

ಘಟನೆಯ ನಂತರ, ಶಿವಸೇನಾ ಪಂಜಾಬ್ ನಾಯಕರು ಸಿವಿಲ್ ಆಸ್ಪತ್ರೆಯ ಹೊರಗೆ ಜಮಾಯಿಸಿ ಪಂಜಾಬ್ ಸರ್ಕಾರ ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಥಾಪರ್‌ಗೆ ಮೂವರು ಬಂದೂಕುಧಾರಿಗಳ ಭದ್ರತೆ ನೀಡಲಾಗಿತ್ತು. ಪೊಲೀಸರು ಒಂದು ವಾರದ ಹಿಂದೆ ಅವರ ಭದ್ರತೆಯನ್ನು ಹಿಂತೆಗೆದುಕೊಂಡರು. ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಥಾಪರ್‌ ಮೇಲಿನ ದಾಳಿಗೆ ಹಿಂದೂ ಸಂಘಟನೆ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮುಖಂಡರಿಗೆ ಸರ್ಕಾರ ಭದ್ರತೆ ನೀಡುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೇಲೆ ಇಂತಹ ಕ್ರೂರ ದಾಳಿ ಖಂಡನೀಯ. ಇದು ನಿವಾಸಿಗಳಲ್ಲಿ ಭೀತಿ ಮೂಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Exit mobile version