Site icon Vistara News

Deepfake Video: ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ಪ್ರಕರಣ; ನಾಲ್ವರು ಶಂಕಿತರ ವಿಚಾರಣೆ

deefake

deefake

ಮುಂಬೈ: ಕೆಲವು ದಿನಗಳ ಹಿಂದೆ ಬಹುಭಾಷಾ ನಟಿ, ಕನ್ನಡ ಮೂಲದ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಕಲಿ ವಿಡಿಯೊ ಭಾರೀ ವೈರಲ್‌ ಆಗಿತ್ತು. ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ (Zara Patel) ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು. ಡೀಪ್‌ಫೇಕ್‌ ತಂತ್ರಜ್ಞಾನದ ನೆರವಿನಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದರು. ಇದೀಗ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ (Deepfake Video) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರು ಶಂಕಿತರನ್ನು ವಿಚಾರಣೆ ನಡೆಸಿದ್ದಾರೆ. ನಟಿಯ ಡೀಪ್‌ಫೇಕ್‌ ವಿಡಿಯೊವನ್ನು ಈ ನಾಲ್ವರು ಅಪ್‌ಲೋಡ್‌ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಮಾಹಿತಿಯನ್ನು ಮೆಟಾ ಒದಗಿಸಿತ್ತು.

ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೊಗಳನ್ನು ನಕಲಿ ಗುರುತು ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (Virtual Private Network-VPN) ಬಳಸಿ ಅಪ್ ಲೋಡ್ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಶಂಕಿತರು ಡೀಪ್‌ಫೇಕ್ ವಿಡಿಯೊವನ್ನು ಸೃಷ್ಟಿಸಿಲ್ಲ. ಕೇವಲ ಅಪ್‌ಲೋಡ್‌ ಮಾಡಿದ್ದಾರೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ಪ್ರಕರಣ?

ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೊ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ರಶ್ಮಿಕಾ ಅವರ ಮುಖವನ್ನು ಹೊಂದಿರುವ, ಟೈಟ್‌ ಫಿಟ್ ಉಡುಪನ್ನು ಧರಿಸಿರುವ ಮಹಿಳೆ ಲಿಫ್ಟ್‌ ಹತ್ತುತ್ತಿರುವುದು ಕಂಡುಬಂದಿತ್ತು. ಬಳಿಕ ಈ ವಿಡಿಯೊ ಡೀಪ್‌ಫೇಕ್ ಎನ್ನುವುದು ತಿಳಿದುಬಂತು. ಸೂಪರ್ ಸ್ಟಾರ್ ಅಮಿತಾಭ್‌ ಬಚ್ಚನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ ನಂತರ ಇದು ಎಲ್ಲರ ಗಮನ ಸೆಳೆಯಿತು. ಬಳಿಕ ಕಲಾವಿದರಾದ ನಾನಿ, ವಿಜಯ್ ದೇವರಕೊಂಡ, ನಾಗ ಚೈತನ್ಯ ಮತ್ತು ಮೃಣಾಲ್ ಠಾಕೂರ್ ಮತ್ತಿತರರು ಡೀಪ್‌ಫೇಕ್‌ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ತಮ್ಮ ವೈರಲ್ ಡೀಪ್‌ಫೇಕ್ ವಿಡಿಯೊದಿಂದ ಆಘಾತಗೊಂಡಿದ್ದರು. ಇದನ್ನು ‘ಭಯಾನಕ’ ಎಂದು ಕರೆದಿದ್ದರು.

ದೂರು ದಾಖಲು

ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ಫೋರ್ಜರಿ), 469 (ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದ ಫೋರ್ಜರಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಮತ್ತು 66 ಇ ಅಡಿಯಲ್ಲಿ ದೆಹಲಿ ಪೊಲೀಸರ ಐಎಫ್ಎಸ್ಒ ಘಟಕದಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ನಟಿಯ ಡೀಪ್‌ಫೇಕ್‌ ವಿಡಿಯೊ ಯಾವ ಖಾತೆಯಿಂದ ಬಂದಿದೆ ಎಂಬುದರ ಯುಆರ್‌ಎಲ್‌ ಒದಗಿಸುವಂತೆ ದೆಹಲಿ ಪೊಲೀಸರು ಮೆಟಾಗೆ ಪತ್ರ ಬರೆದಿದ್ದರು. ಅದರಂತೆ ಮೆಟಾ ಮಾಹಿತಿ ಹಂಚಿಕೊಂಡಿತ್ತು.

ಇದನ್ನೂ ಓದಿ: Deepfake: ಡೀಪ್‌ಫೇಕ್‌ ವಿಡಿಯೊ ಮಾಡುವವರೇ ಎಚ್ಚರ; ಕಠಿಣ ಕ್ರಮಕ್ಕೆ ಕೇಂದ್ರ ನಿರ್ಧಾರ

ಡೀಪ್‌ಫೇಕ್‌ ಅಂದರೇನು?

‘ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವಿಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್‌ ಆಗಿ ಕಾಣುವಂತೆ ಮಾಡಲಾಗುತ್ತದೆ.

Exit mobile version