Site icon Vistara News

ಕ್ಯಾನ್ಸರ್‌, ಜ್ವರ ಸೇರಿ ಅಗತ್ಯ 19 ಔಷಧಗಳ ಬೆಲೆ ಇಳಿಸಿದ ಕೇಂದ್ರ; ದರ ಇಷ್ಟಿದೆ

Tablets

Drug pricing regulator NPPA fixes rates of 19 formulations from January 1

ನವದೆಹಲಿ: ದೇಶದ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರ (Central Government) ಮಹತ್ವದ ಹೆಜ್ಜೆ ಇರಿಸಿದೆ. ಕ್ಯಾನ್ಸರ್‌, ಜ್ವರ, ನೆಗಡಿ ಸೇರಿ ಹಲವು ಕಾಯಿಲೆಗಳಿಗೆ ಬಳಸುವ 19 ಅತ್ಯವಶ್ಯಕ ಔಷಧಗಳ ಬೆಲೆಯನ್ನು (Drugs Price Cut) ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಶೇ.50ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಬಡವರು ಅತಿ ಕಡಿಮೆ ಬೆಲೆಗೆ ಅಗತ್ಯ ಔಷಧಗಳನ್ನು ಖರೀದಿಸಲು ಸಾಧ್ಯವಾಗಲಿದೆ. ಜನವರಿ 1ರಿಂದಲೇ ನೂತನ ದರವು ಜಾರಿಗೆ ಬಂದಿದೆ.

ಸ್ತನ ಹಾಗೂ ಹೊಟ್ಟೆಯ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಟ್ರಸ್ಟುಜುಮಾಬ್‌ (Trastuzumab) ಬೆಲೆಯನ್ನು ಶೇ.50ರಷ್ಟು ಇಳಿಕೆ ಮಾಡಿರುವುದು ಪ್ರಮುಖ ತೀರ್ಮಾನವಾಗಿದೆ. ಮ್ಯಾನ್‌ಕೈಂಡ್‌ ಫಾರ್ಮಾ ಲಿಮಿಟೆಡ್‌, ಹೆಟೆರೊ ಬಯೋಫಾರ್ಮಾ ಲಿಮಿಟೆಡ್‌ ಕಂಪನಿಗಳು ಟ್ರಸ್ಟುಜುಮಾಬ್‌ ಔಷಧವನ್ನು ಉತ್ಪಾದಿಸುತ್ತಾರೆ. ಈಗ ಈ ಟ್ರಸ್ಟುಜುಮಾಬ್‌ ಬೆಲೆಯು 15,817 ರೂ. ಆಗಿದೆ. ಇದರಿಂದ ಬಡ ರೋಗಿಗಳು ಕ್ಯಾನ್ಸರ್‌ ಔಷಧಿ ಖರೀದಿಸಲು ಭಾರಿ ನೆರವಾಗಲಿದೆ.

ರಕ್ತದೊತ್ತಡಕ್ಕೆ ಬಳಸುವ ಬೈಸೊಪ್ರೊಲೊಲ್‌ ಫುಮಾರೇಟ್‌ ಹಾಗೂ ಅಮ್ಲೋಡಿಪೈನ್‌ ಮಾತ್ರೆಗಳ ಬೆಲೆಯನ್ನು 6.74 ರೂ.ಗೆ ಇಳಿಸಲಾಗಿದೆ. ಹೈಪರ್‌ಟೆನ್ಶನ್‌ಗೆ ಬಳಸುವ ಮೆಟೊಪ್ರೊಲೊಲ್‌ ಸಕ್ಸಿನೇಟ್‌ ಎಕ್ಸ್‌ಟೆಂಡೆಡ್‌ ರಿಲೀಸ್‌ & ಸಿಲ್ನಿಡಿಪೈನ್‌ ಮಾತ್ರೆಗೆ 10 ರೂ. ನಿಗದಿಪಡಿಸಲಾಗಿದೆ. ಬ್ಯಾಕ್ಟೀರಿಯಾಗಳಿಂದ ಹರಡಿದ ಸೋಂಕು ನಿರ್ಮೂಲನೆಗೆ ಬಳಸುವ ಅಮೊಕ್ಸಿಸಿಲಿನ್‌ ಹಾಗೂ ಪೊಟ್ಯಾಸಿಯಂ ಕ್ಲವುಲನೇಟ್‌ ಮಾತ್ರೆಗಳ ಬೆಲೆಯನ್ನು 40 ರೂ.ಗೆ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: Fuel Price Cut: ಪೆಟ್ರೋಲ್‌, ಡೀಸೆಲ್ ಬೆಲೆ ಇಳಿಕೆ ಆಗುತ್ತಾ? ಕೇಂದ್ರದಿಂದ ಮಹತ್ವದ ಅಪ್‌ಡೇಟ್‌

ಭಾರತದ ಎಲ್ಲ ಔಷಧ ಮಳಿಗೆಗಳಲ್ಲಿ ಒಂದೇ ಬೆಲೆಯಲ್ಲಿ ಔಷಧಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. “ನೂತನವಾಗಿ ನಿಗದಿಪಡಿಸಿರುವ ಬೆಲೆಗೇ ಮೆಡಿಕಲ್‌ ಶಾಪ್‌ಗಳು ಔಷಧಗಳನ್ನು ಮಾರಾಟ ಮಾಡಬೇಕು. ಚಿಲ್ಲರೆ ಮಾರುಕಟ್ಟೆ ಬೆಲೆಗೇ ಔಷಧಗಳನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ, ಉತ್ಪಾದಕ ಅಥವಾ ಮಾರ್ಕೆಟಿಂಗ್‌ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಔಷಧ ಬೆಲೆ ಇಳಿಕೆ ಕುರಿತಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version