ಹೊಸದಿಲ್ಲಿ: ಎಲಾನ್ ಮಸ್ಕ್ (Elon Musk) ನೇತೃತ್ವದ ಸಾಮಾಜಿಕ ಜಾಲತಾಣ ಎಕ್ಸ್ (Social media X) ಕಾರ್ಪ್, ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದಲ್ಲಿ 2,12,627 ಖಾತೆಗಳನ್ನು (X Accounts ban) ನಿಷೇಧಿಸಿದೆ. ಈ ಮೂಲಕ ಎಕ್ಸ್ ಭಾರತದಲ್ಲಿ ಹೊಸ ಮಾದರಿಯನ್ನು ಸ್ಥಾಪಿಸಿದೆ. ಕಂಪನಿಯ ಪಾಲಿಸಿ ಉಲ್ಲಂಘಿಸಿ ಮಕ್ಕಳ ಲೈಂಗಿಕ ಶೋಷಣೆ, ಒಪ್ಪಿಗೆಯಿಲ್ಲದ ನಗ್ನತೆಯ ಕಂಟೆಂಟ್‌ಗಳನ್ನು ಹಾಕಿದ ಖಾತೆಗಳ ಮೇಲೆ ಏಕ್ಸ್ ಗಮನಾರ್ಹವಾದ ಶಿಸ್ತುಕ್ರಮವನ್ನು ತೆಗೆದುಕೊಂಡಿದೆ.
ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್, ದೇಶದಲ್ಲಿ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ 1,235 ಅಕೌಂಟ್‌ಗಳನ್ನು ತೆಗೆದುಹಾಕಿದೆ. ಮಕ್ಕಳ ಲೈಂಗಿಕ ಶೋಷಣೆ ಮತ್ತು ಭಯೋತ್ಪಾದನೆಯನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಎಕ್ಸ್ ಜಾರಿಗೆ ತಂದಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಇದೇ ಸಮಯದಲ್ಲಿ X, ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರರಿಂದ 5,158 ದೂರುಗಳನ್ನು ಸ್ವೀಕರಿಸಿದೆ ಎಂದು ತನ್ನ ಮಾಸಿಕ ವರದಿಯಲ್ಲಿ ಹೇಳಿದೆ. ಭಾರತದಿಂದ ಬಂದ ಹೆಚ್ಚಿನ ದೂರುಗಳು ವಂಚನೆ (3,074), ಸೂಕ್ಷ್ಮ ವಯಸ್ಕ ವಿಷಯ (953), ದ್ವೇಷಪೂರಿತ ನಡವಳಿಕೆ (412), ನಿಂದನೆ/ಕಿರುಕುಳ (359) ದೂರುಗಳನ್ನು ಹೊಂದಿವೆ.
ಹೆಚ್ಚುವರಿಯಾಗಿ 86 ಕುಂದುಕೊರತೆಗಳನ್ನು X ಪ್ರಕ್ರಿಯೆಗೊಳಿಸಿದ್ದು, ಅವುಗಳು ಖಾತೆಯನ್ನು ಅಮಾನತುಗೊಳಿಸಲು ಕೋರಿವೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ನಾವು ಇದರಲ್ಲಿ 7 ಖಾತೆಗಳನ್ನು ಉಳಿಸಿಕೊಂಡಿದ್ದೇವೆ. ಉಳಿದ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಖಾತೆಗಳ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಸಂಬಂಧಿಸಿದ 29 ವಿನಂತಿಗಳನ್ನು ನಾವು ಸ್ವೀಕರಿಸಿದ್ದೇವೆ ಎಂದು ಕಂಪನಿ ತಿಳಿಸಿದೆ.
ಎಕ್ಸ್‌ಮೇಲ್ ಮೂಲಕ ಜಿಮೇಲ್‌ಗೆ ಪೈಪೋಟಿ
ಚಾಟ್‌ಜಿಪಿಟಿಗೆ (ChatGPT) ಪ್ರತಿಯಾಗಿ ತನ್ನದೇ ಆದ ಎಐ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಎಕ್ಸ್‌ಮೇಲ್ (Xmail) ಸೇವೆ ಆರಂಭಿಸುವುದನ್ನು ಖಚಿತಪಡಿಸಿದ್ದಾರೆ. ಎಕ್ಸ್‌ಮೇಲ್, ಗೂಗಲ್‌ನ (Google) ಜನಪ್ರಿಯ ಜಿಮೇಲ್‌ಗೆ (Gmail) ಪೈಪೋಟಿ ನೀಡಲಿದೆ. ಈ ಮಧ್ಯೆ, ಗೂಗಲ್ ತನ್ನ ಜಿಮೇಲ್ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಗೂಗಲ್, ಜಿಮೇಲ್ ಸ್ಥಗಿತವಾಗುತ್ತಿಲ್ಲ. ಈ ಹಿಂದೆ ಎಚ್‌ಟಿಎಂಎಲ್ ಆಗಿದ್ದ ಡಿಫಾಲ್ಟ್ ಜಿಮೇಲ್ ಇಂಟರ್‌ಫೇಸ್ ಅನ್ನು ಮತ್ತಷ್ಟು ವರ್ಣರಂಜಿತಗೊಳಿಸಲಿದೆ. ಈ ಬದಲಾವಣೆ ಜನವರಿ 24ರಿಂದಲೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದೆ.
ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಸಂಭಾಷಣೆಯೊಂದರಲ್ಲಿ ಮಸ್ಕ್ ಅವರು ‘ಎಕ್ಸ್‌ಮೇಲ್’ ಎಂದು ಕರೆಯಲ್ಪಡುವ ಉತ್ಪನ್ನವು ‘ಬರುತ್ತಿದೆ’ ಎಂದು ಹೇಳಿದ್ದಾರೆ. ಗೂಗಲ್ ಜಿಮೇಲ್ ಸ್ಥಗಿತವಾಗಲಿದೆ ಎಂಬ ನಕಲಿ ದಾಖಲೆಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವಾಗಲೇ ಎಕ್ಸ್‌ಮೇಲ್ ಆರಂಭದ ಕುರಿತು ಮಸ್ಕ್ ಹೇಳಿಕೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇಷ್ಟಾಗಿಯೂ ಎಕ್ಸ್‌ಮೇಲ್ ಆರಂಭದ ಕುರಿತು ಹೆಚ್ಚೇನೂ ಅವರು ಮಾಹಿತಿಯನ್ನು ನೀಡಿಲ್ಲ. ಈ ಸೇವೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ. ಎಕ್ಸ್‌ನ ಸೆಕ್ಯುರಿಟಿ ಇಂಜಿನಿಯರಿಂಗ್ ತಂಡದ ಹಿರಿಯ ಸದಸ್ಯರಾದ ನಾಥನ್ ಮೆಕ್‌ಗ್ರಾಡಿ ಅವರು ಎಕ್ಸ್‌ಮೇಲ್ ಲಾಂಚ್ ದಿನಾಂಕದ ಬಗ್ಗೆ ಪ್ರಶ್ನಿಸಿದ ನಂತರ ಈ ದೃಢೀಕರಣವು ಬಂದಿದೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, ಎಕ್ಸ್ ಮೇಲ್ ಶೀಘ್ರವೇ ಚಾಲ್ತಿಗೆ ಬರಲಿದೆ ಎಂದು ದೃಢಿಕರಿಸಿದರು.
ಇದನ್ನೂ ಓದಿ: OpenAI ChatGPT: ಚಾಟ್‌ಜಿಪಿಟಿ VS ಇಲಾನ್ ಮಸ್ಕ್‌ನ ಗ್ರೋಕ್: ಏನು ವ್ಯತ್ಯಾಸ?