ಲಕ್ನೋ: ಚುನಾವಣೆ ಮುಗಿಯುತ್ತಿದ್ದಂತೆ ಯೋಗಿ(Yogi adityanath)ನಾಡು ಉತ್ತರಪ್ರದೇಶ(Uttar Pradesh)ದಲ್ಲಿ ಗುಂಡಿನ ಸದ್ದು ಮೊಳಗಿದೆ. ಗ್ಯಾಂಗ್‌ಸ್ಟರ್(Gangster)ವೊಬ್ಬನನ್ನು ಎನ್‌ಕೌಂಟರ್(Encounter in UP) ಮಾಡಲಾಗಿದೆ. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ವಿಶೇಷ ಕಾರ್ಯಪಡೆಗಳು ಜಂಟೀ ಕಾರ್ಯಾಚರಣೆ ನಡೆಸಿ ನೀಲೇಶ್ ರೈ ಎಂಬಾತನನ್ನು ಹೊಡೆದುರುಳಿಸಿದೆ. ಮುಜಾಫರ್‌ನಗರದ ರತನ್‌ಪುರಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇನ್ನು ನೀಲೇಶ್ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.
ಇನ್ನು ಈತ ರತನ್‌ಪುರಿ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬಿಹಾರ, ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರ ಗುಂಡೇಟು ಬಿದ್ದು ನೀಲೇಶ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.
ಐದು ತಿಂಗಳ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್, ಶಾರ್ಪ್ ಶೂಟರ್ ವಿನೋದ್ ಕುಮಾರ್ ಉಪಾಧ್ಯಾಯ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ. ಸುಲ್ತಾನ್‌ಪುರದ ದೆಹತ್ ಕೊಟ್ವಾಲಿ ಪ್ರದೇಶದ ಎಸ್‌ಟಿಎಫ್ ಪ್ರಧಾನ ಕಚೇರಿಯ ಡಿವೈಎಸ್ಪಿ ದೀಪಕ್ ಕುಮಾರ್ ಸಿಂಗ್ ನೇತೃತ್ವದ ತಂಡ ಈ ಎನ್‌ಕೌಂಟರ್ ನಡೆಸಿತ್ತು.
ವಿನೋದ್ ಕುಮಾರ್ ವಿರುದ್ಧ ಲಕ್ನೋ ಮತ್ತು ಗೋರಖ್‌ಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಅಪಹರಣ, ದರೋಡೆ, ಸುಲಿಗೆಯ ಅನೇಕ ಪ್ರಕರಣಗಳು ದಾಖಲಾಗಿವೆ. ಆತನನ್ನು ಬಂಧಿಸುವವರಿಗೆ ಗೋರಖ್‌ಪುರ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು. ಈತ ಗೋರಖ್‌ಪುರ, ಬಸ್ತಿ, ಸಂತ ಕಬೀರ್ ನಗರ ಮತ್ತು ಲಕ್ನೋದಲ್ಲಿ ಆತ ಹಲವು ಕೊಲೆಗಳನ್ನು ನಡೆಸಿದ್ದ. ಇದಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್‌ಪುರದ ಗೋರಖನಾಥ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ವಿನೋದ್ ಕುಮಾರ್ ಹೆಸರಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 31 ಪ್ರಕರಣಗಳಿವೆ.
ಸುಲ್ತಾನ್‌ಪುರ ಜಿಲ್ಲೆಯ ಕೊಟ್ವಾಲಿ ಪ್ರದೇಶದಲ್ಲಿ ವಿನೋದ್ ಕುಮಾರ್ ಮತ್ತು ಯುಪಿ ಎಸ್‌ಟಿಎಫ್ ನಡುವೆ ಎನ್ ಕೌಂಟರ್ ನಡೆದಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ವಿನೋದ್ ಕುಮಾರ್‌ನನ್ನು ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದರು. ನಿಖರವಾದ ಗುರಿಗೆ ಹೆಸರುವಾಸಿಯಾದ ವಿನೋದ್ ಕುಮಾರ್ ಅಪರಾಧ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದ. ಹೀಗಾಗಿ ಈತನ ಹತ್ಯೆ ಎಸ್‌ಟಿಎಫ್ ಸಿಕ್ಕ ಯಶಸ್ಸು ಎಂದು ಪರಿಗಣಿಸಲಾಗಿದೆ. ಎನ್‌ಕೌಂಟರ್ ಬಳಿಕ 30 ಚೀನಿ ಕಂಪನಿ ನಿರ್ಮಿತ ಪಿಸ್ತೂಲ್, ಕಾರ್ಖಾನೆ ನಿರ್ಮಿತ 9 ಎಂಎಂ ಸ್ಟೆನ್ ಗನ್ ಮತ್ತು ಖಾಲಿ ಕಾರ್ಟಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪೊಲೀಸರು ಸ್ವಿಫ್ಟ್ ಕಾರನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: Narendra Modi: ಜೂ.8ರಂದು ಮೋದಿ ಪ್ರಮಾಣವಚನ; ದೇಶ ವಿದೇಶಗಳ ಗಣ್ಯರು ಭಾಗಿ