Site icon Vistara News

Explainer: ಹಿಮಾಚಲದಲ್ಲಿ ಖಲಿಸ್ತಾನ್‌ ಹೆಜ್ಜೆ: ಏನಿದರ ಹಕೀಕತ್?‌

ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗಳು ನಡೆಯಲು ಇನ್ನು ಆರು ತಿಂಗಳು ಬಾಕಿ ಇದೆ. ಇದೇ ಸಂದರ್ಭದಲ್ಲಿ ಇಲ್ಲಿನ ಧರ್ಮಶಾಲಾದಲ್ಲಿರುವ ವಿಧಾನಸಭೆ ಕಟ್ಟಡದ ಮುಂದೆ ಖಲಿಸ್ತಾನ ಚಳವಳಿಯ ಪರವಾದ ಧ್ವಜಗಳು ತೂಗಾಡಿವೆ. ವಿಧಾನಸಭೆಯ ಗೇಟ್‌ನಲ್ಲಿ ಈ ಧ್ವಜಗಳನ್ನು ಕಟ್ಟಲಾಗಿದೆ. ಹಿಮಾಚಲ ಪ್ರದೇಶದ ವಿಶೇಷ ತನಿಖಾ ದಳ ಈ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಈ ಘಟನೆಗೆ ಸಂಬಂಧಿಸಿ ಖಲಿಸ್ತಾನ ಚಳವಳಿಯ ಪರ ಒಲವುಳ್ಳ ʼಸಿಖ್ಸ್‌ ಫಾರ್‌ ಜಸ್ಟಿಸ್‌ʼ ಸಂಘಟನೆಯ ನಾಯಕ ಗುರುಪತವಂತ್‌ ಸಿಂಗ್‌ ಪನ್ನು ಎಂಬಾತನ ಮೇಲೆ ಕೇಸು ದಾಖಲಿಸಲಾಗಿದೆ. ಈ ಸಂಘಟನೆಯನ್ನು ಈ ಹಿಂದೆಯೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ನಿಷೇಧಿಸಲಾಗಿತ್ತು. ಜೂನ್‌ 6ರಂದು ಹಿಮಾಚಲ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವುದಾಗಿ ಪನ್ನು ಬೆದರಿಕೆ ಒಡ್ಡಿದ ಬಳಿಕ, ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

ಪಕ್ಕದ ರಾಜ್ಯದ ಕಂಪನ
ಪಂಜಾಬ್‌ಗೆ ಒತ್ತಿಕೊಂಡೇ ಇರುವ ಹಿಮಾಚಲ ಪ್ರದೇಶದಲ್ಲಿ ಖಲಿಸ್ತಾನ ಚಳವಳಿಯ ಕುರುಹುಗಳು ಹಾಗೂ ಕಂಪನಗಳು ಕಂಡುಬರುತ್ತಿರುವುದು ಇದೇ ಮೊದಲಲ್ಲ.

2021ರಲ್ಲಿ ಇದೇ ಪನ್ನು, ರಾಜ್ಯದಲ್ಲಿ ತ್ರಿವರ್ಣಧ್ವಜ ಹಾರಿಸಲು ಬಿಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಜೈರಾಮ್ ಠಾಕೂರ್‌ ಅವರಿಗೆ ಬೆದರಿಕೆ ಒಡ್ಡಿದ್ದ. ಹಿಮಾಚಲ ಪ್ರದೇಶ ರಾಜ್ಯವು ಅವಿಭಜಿತ ಪಂಜಾಬ್‌ನ ಭಾಗ ಎಂದೇ ಖಲಿಸ್ತಾನ್‌ ಚಳವಳಿಗಾರರು ಪ್ರತಿಪಾದಿಸುತ್ತಾರೆ. ಅದೇ ತಿಂಗಳು, ಪಂಜಾಬ್-‌ ಹಿಮಾಚಲ ಗಡಿಪ್ರದೇಶದಿಂದ ಹತ್ತು ಕಿಲೋಮೀಟರ್‌ ದೂರದಲ್ಲಿರುವ ನೈನಾದೇವಿ ದೇವಸ್ಥಾನದ ಬಳಿಯ ಮೈಲಿಗಲ್ಲುಗಳನ್ನು ಒಡೆದು ಹಾಕಿದ್ದ ಖಲಿಸ್ತಾನಿ ಉಗ್ರರು, ʼವೆಲ್‌ಕಮ್‌ ಟು ಖಲಿಸ್ತಾನ್‌ʼ ʼಖಲಿಸ್ತಾನ್‌ ಗಡಿ ಇಲ್ಲಿಂದ ಆರಂಭವಾಗುತ್ತದೆʼ ಇತ್ಯಾದಿ ಬರಹಗಳನ್ನು ಬರೆದಿದ್ದರು.

ಈ ವರ್ಷ ಮಾರ್ಚ್‌ನಲ್ಲಿ ಹಿಮಾಚಲ ಪ್ರದೇಶ ಸರಕಾರ, ಖಲಿಸ್ತಾನ ಚಳವಳಿಯ ಮುಖಂಡನಾಗಿದ್ದ ಜರ್ನೈಲ್‌ಸಿಂಗ್‌ ಭಿಂದ್ರಾನ್‌ವಾಲೆಯ ಚಿತ್ರಗಳನ್ನು ಹೊಂದಿರುವ ಧ್ವಜಗಳನ್ನು ಪ್ರದರ್ಶಿಸುವ ವಾಹನಗಳಿಗೆ ಪ್ರವೇಶ ನಿಷೇಧಿಸಿತ್ತು. ಇದಕ್ಕೆ ಪ್ರತಿಯಾಗಿ, ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು, ಶಿಮ್ಲಾದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಏಪ್ರಿಲ್‌ 29ರಂದು ಖಲಿಸ್ತಾನ ಧ್ವಜವನ್ನು ಹಾರಿಸುವುದಾಗಿ ಬೆದರಿಕೆ ಒಡ್ಡಿತ್ತು. ಏಪ್ರಿಲ್‌ 29, ಖಲಿಸ್ತಾನದ ಘೋಷಣೆ ದಿನ.

ಪ್ರವಾಸೋದ್ಯಮಕ್ಕೆ ಧಕ್ಕೆ
ಹಿಮಾಚಲ ಪ್ರದೇಶದ ಸೃಷ್ಟಿಯಾದುದು ಪಂಜಾಬ್‌ನ ವಿಭಜನೆಯಿಂದ. 1966ರಲ್ಲಿ ಪಂಜಾಬ್‌ನ್ನು ಎರಡಾಗಿಸಿ ಹಿಮಾಚಲ ಪ್ರದೇಶ ಸೃಷ್ಟಿಸಲಾಯಿತು. ಅಲ್ಲಿಂದಾಚೆಗೆ ಪಂಜಾಬ್‌ನಲ್ಲಿ ಹುಟ್ಟಿಕೊಂಡ ಖಲಿಸ್ತಾನ ಚಳವಳಿ, ಉಗ್ರವಾದದತ್ತ ತಿರುಗಿ 1980- 1990ರ ದಶಕಗಳಲ್ಲಿ ತೀವ್ರ ಚಟುವಟಿಕೆಗಳನ್ನು ದಾಖಲಿಸಿತು. ಆದರೆ ಹಿಮಾಚಲದಲ್ಲಿ ಇವರ ಹೆಚ್ಚಿನ ಹಾವಳಿಯೇನೂ ಇರಲಿಲ್ಲ. ಆದರೆ ಇಲ್ಲಿನ ಆದಾಯದ ಮೂಲಾಧಾರವಾದ ಪ್ರವಾಸೋದ್ಯಮವನ್ನು ಅಸ್ತವ್ಯಸ್ತಗೊಳಿಸಿ ಅದರಿಂದ ಲಾಭ ಮಾಡಿಕೊಳ್ಳುವ ಬಯಸುವ ಕೆಲವು ಕಿಡಿಗೇಡಿ ಶಕ್ತಿಗಳು ತಮ್ಮ ಕಾರ್ಯಾಚರಣೆಗೆ ಖಲಿಸ್ತಾನದ ಹೆಸರನ್ನು ಬಳಸಿಕೊಳ್ಳುತ್ತಿವೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ.

ಇತ್ತೀಚೆಗಷ್ಟೇ ಆಮ್‌ ಆದ್ಮಿ ಪಾರ್ಟಿ ಪಕ್ಷದ ರಾಜ್ಯ ಸೋಶಿಯಲ್‌ ಮೀಡಿಯಾ ಮುಖ್ಯಸ್ಥ ಹರ್‌ಪ್ರೀತ್‌ ಸಿಂಗ್‌ ಬೇಡಿ ಎಂಬಾತನನ್ನು ಹೊರಹಾಕಿತ್ತು. ಖಲಿಸ್ತಾನ ಬೇಡಿಕೆಯನ್ನು ಟ್ವಿಟ್ಟರ್‌ನಲ್ಲಿ ಬಹಿರಂಗವಾಗಿ ಈತ ಬೆಂಬಲಿಸಿದ್ದೇ ಇದಕ್ಕೆ ಕಾರಣ.

ಹಿಮಾಚಲಪ್ರದೇಶದಲ್ಲಿ ಖಲಿಸ್ತಾನ ಚಳವಳಿಯ ಕೂಗು ಅಷ್ಟೇನೂ ಪರಿಣಾಮಕಾರಿ ಆಗಲಾರದು ಎಂಬ ವಾದ ಇದೆ. ಯಾಕೆಂದರೆ ಇಲ್ಲಿರುವವರಲ್ಲಿ ಶೇ.95 ಮಂದಿ ಹಿಂದೂಗಳು. ಆದ್ದರಿಂದ ಇಲ್ಲಿ ಪ್ರತ್ಯೇಕತಾವಾದ ಪರಿಣಾಮಕಾರಿ ಆಗಲಾರದು ಎನ್ನಲಾಗುತ್ತಿದೆ.

ಆದರೆ ಪಂಜಾಬ್‌ನಲ್ಲಿ ಖಲಿಸ್ತಾನ ಚಳವಳಿ ಮತ್ತೆ ಜೀವ ತುಂಬಿಕೊಳ್ಳಲು ಯತ್ನಿಸುತ್ತಿರುವುದಂತೂ ನಿಜ. ಇದಕ್ಕೆ ಪಾಕಿಸ್ತಾನ ಹಾಗೂ ಕೆನಡಾಗಳಿಂದ ಕಾರ್ಯಾಚರಿಸುತ್ತಿರುವ ಪ್ರತ್ಯೇಕತಾವಾದಿ ಶಕ್ತಿಗಳು ಬೆಂಬಲ ನೀಡುತ್ತಿವೆ.

ಖಲಿಸ್ತಾನ ಉಗ್ರವಾದದ ಜನನ


ಖಲಿಸ್ತಾನ ಹೋರಾಟದ ಬೀಜಗಳು 1947ರಿಂದಲೂ ಇದ್ದವು. ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ರಕ್ತಪಾತ, ಹಿಂಸೆ, ಸಿಕ್ಖರ ವಲಸೆಗಳು ಸಿಕ್ಖರ ಮನದಲ್ಲಿ ಸೃಷ್ಟಿಸಿದ ಕ್ಷೋಭೆ ಇದಕ್ಕೆ ಮೂಲ ಕಾರಣ. ನಂತರದ ದಿನಗಳಲ್ಲಿ, ಭಾರತ ಸರಕಾರ ಪಂಜಾಬ್‌ನ ಸಿಕ್ಖರಿಗೆ ಸೂಕ್ತವಾದ ರಕ್ಷಣೆ, ಅಭಿವೃದ್ಧಿ ಕಲ್ಪಿಸುತ್ತಿಲ್ಲ ಎಂಬ ಆಕ್ಷೇಪದೊಂದಿಗೆ, ಖಲಿಸ್ತಾನಕ್ಕಾಗಿ ಪ್ರತ್ಯೇಕ ರಾಷ್ಟ್ರ ಬೇಕೆಂಬ ಸಿದ್ಧಾಂತದೊಂದಿಗೆ ಈ ಹೋರಾಟ ಹುಟ್ಟಿಕೊಂಡಿತು. ಬಹುಬೇಗ ಉಗ್ರವಾದಕ್ಕೆ ತಿರುಗಿತು.

ಭಿಂದ್ರಾನ್‌ವಾಲೆ ಎಂಬ ರಾಕ್ಷಸ
80ರ ದಶಕದಲ್ಲಿ ಜರ್ನೈಲ್‌ಸಿಂಗ್‌ ಭಿಂದ್ರಾನ್‌ವಾಲೆ ಎಂಬ ಭಯೋತ್ಪಾದಕ ಈ ಚಳವಳಿಗೆ ಹಿಂಶಾತ್ಮಕ ಸ್ವರೂಪ ನೀಡಿದ. ನಿರುದ್ಯೋಗಿ ಸಿಖ್‌ ಯುವಕರನ್ನು ಒಟ್ಟುಗೂಡಿಸಿ ಅವರಿಗೆ ಬಂದೂಕು ತರಬೇತಿ ನೀಡಿ, ಭಯೋತ್ಪಾದನೆಗೆ ಇಳಿಸಿದ. 1982-83ರ ಅವಧಿಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ನಾನೂರಕ್ಕೂ ಹೆಚ್ಚು ಜನ ಅಸುನೀಗಿದರು. ಅತ್ತ ಪಾಕಿಸ್ತಾನ ಇದನ್ನು ಲಾಭಕರವಾಗಿ ಬಳಸಿಕೊಂಡು, ಶಸ್ತ್ರಾಸ್ತ್ರಗಳನ್ನು ಈ ಭಯೋತ್ಪಾದಕರಿಗೆ ಪೂರೈಸತೊಡಗಿತು.

ಭಿಂದ್ರಾನ್‌ವಾಲೆ ಕಾಲದಲ್ಲಿ ಪಂಜಾಬ್‌ನಲ್ಲಿ ಹಲವಾರು ರಾಜಕೀಯ ನಾಯಕರ ಕಗ್ಗೊಲೆ ನಡೆಯಿತು. ಆರಂಭದಲ್ಲಿ ಶಿರೋಮಣಿ ಅಕಾಲಿ ದಳವನ್ನು ಮಟ್ಟ ಹಾಕಲು ಭಿಂದ್ರಾನ್‌ವಾಲೆಯನ್ನು ಬಳಸಿಕೊಂಡ ಕೆಲವು ರಾಜಕೀಯ ನಾಯಕರು, ನಂತರ ಆತನನ್ನು ಹಣಿಯಲು ಮುಂದಾದರು. ಭಿಂದ್ರಾನ್‌ವಾಲೆ ಸಿಕ್ಖರ ಪವಿತ್ರ ತಾಣ ಅಮೃತಸರದ ಸ್ವರ್ಣಮಂದಿರದಲ್ಲಿ ಜೊತೆಗಾರರ ಜೊತೆ ಬಿಡಾರ ಹೂಡಿದ. ಆತನನ್ನು ಮಟ್ಟಹಾಕಲು ಇಂದಿರಾ ಗಾಂಧಿ ಸರಕಾರ 1984ರಲ್ಲಿ ಆಪರೇಶನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ನಡೆಸಿತು. ಸ್ವರ್ಣಮಂದಿರ ರಕ್ತಸಿಕ್ತವಾಯಿತು. ಭಿಂದ್ರಾನ್‌ವಾಲೆ ಮತ್ತು ಸಹಚರರನ್ನು ಪೂರ್ತಿಯಾಗಿ ಸಾಯಿಸಲಾಯಿತು.

ಇದನ್ನೂ ಓದಿ: Explainer: ನೀಟ್‌ ಪರೀಕ್ಷೆ ತಮಿಳುನಾಡಿಗೆ ಬೇಡವಂತೆ, ರಾಷ್ಟ್ರಪತಿಗಳತ್ತ ವಿಧೇಯಕ

ಈ ಕಾರ್ಯಾಚರಣೆಯಿಂದ ಸಿಕ್ಖರಲ್ಲಿ ಮಡುಗಟ್ಟಿದ ಆಕ್ರೋಶದ ಪರಿಣಾಮವೇ 1984ರಲ್ಲಿ ಸಂಭವಿಸಿದ ಇಂದಿರಾ ಗಾಂಧಿಯವರ ಹತ್ಯೆ ಮತ್ತು ಅದನ್ನು ಅನುಸರಿಸಿ ದಿಲ್ಲಿಯಲ್ಲಿ ನಡೆದ ಸಿಖ್‌ ಹತ್ಯಾಕಾಂಡ.

ಮತ್ತೆ ಚಿಗುರಿದ ದುಷ್ಟಬೀಜ
ಇದರ ನಂತರ ಖಲಿಸ್ತಾನ ಚಳವಳಿ ಬಹುತೇಕ ತಣ್ಣಗಾಗಿತ್ತು. ಆದರೆ ಕೆನಡಾದಲ್ಲಿ ನೆಲೆಯೂರಿ ಕುಳಿತ ಕೆಲವು ಖಲಿಸ್ತಾನ ಸಹಾನುಭೂತಿಪರ ನಾಯಕರು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಇತ್ತೀಚಿನ ಉದಾಹರಣೆ ಎಂದರೆ ಸಿಖ್‌ ರೈತರು ದಿಲ್ಲಿಯಲ್ಲಿ ನಡೆಸಿದ ರೈತಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಸೇರಿಕೊಂಡ ಖಲಿಸ್ತಾನ ಶಕ್ತಿಗಳು. ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಖಲಿಸ್ತಾನ್ ಧ್ವಜ ಹಾಗೂ ಭಿಂದ್ರಾನ್‌ವಾಲೆ ಪೋಷ್ಟರ್‌ಗಳು ರಾರಾಜಿಸಿದವು.

ಇದನ್ನೂ ಓದಿ: Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ

Exit mobile version