Site icon Vistara News

ವಿಸ್ತಾರ Explainer: ರಾಜ್ಯಸಭೆ ಮೇಲುಗೈಗೆ ಬಿಗ್ ಫೈಟ್, ಮೇಲ್ಮನೆ ಕುರಿತ ಆಸಕ್ತಿಕರ ಸಂಗತಿ

Rajya sabha

ಲೋಕಸಭೆ ಚುನಾವಣೆ ಬಗ್ಗೆ ಶ್ರೀಸಾಮಾನ್ಯ ಪ್ರಜೆಗಳಿಗೆ ಚೆನ್ನಾಗಿಯೇ ಗೊತ್ತು. ಪ್ರತಿ ಐದು ವರ್ಷಕ್ಕೊಮ್ಮೆ ನಾವು ವೋಟ್‌ ಮಾಡ್ತೇವೆ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ, ಲೋಕಸಭೆಗೆ ಕಳಿಸುತ್ತೇವೆ. ಇವರಿಂದ ಪ್ರಧಾನಮಂತ್ರಿ ಆಯ್ಕೆ ಆಗುತ್ತಾರೆ. ಸಚಿವ ಸಂಪುಟ ರಚನೆಯಾಗುತ್ತದೆ, ಸರಕಾರ ಆಗುತ್ತದೆ. ಆದರೆ ರಾಜ್ಯಸಭೆ ಚುನಾವಣೆ ಎಷ್ಟು ವರ್ಷಕ್ಕೊಮ್ಮೆ ಆಗುತ್ತದೆ? ಅಲ್ಲಿ ಎಷ್ಟು ಸದಸ್ಯರಿದ್ದಾರೆ, ಅವರ ಕೆಲಸ ಏನು- ಈ ಮಾಹಿತಿ ಹೆಚ್ಚಿನ ಪ್ರಜೆಗಳಿಗೆ ಇಲ್ಲ. ಬನ್ನಿ, ಈ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯೋಣ.

ಈಗ ರಾಜ್ಯಸಭೆ ಚುನಾವಣೆ ಯಾಕೆ?

ಯಾಕೆಂದರೆ ಈ ವರ್ಷ ಜೂನ್‌ನಿಂದ ಆಗಸ್ಟ್‌ ನಡುವೆ 57 ರಾಜ್ಯಸಭೆ ಸದಸ್ಯರು ನಿವೃತ್ತರಾಗುತ್ತಿದ್ದು, ಅವರ ಸ್ಥಾನಗಳನ್ನು ತುಂಬಲು ಚುನಾವಣೆ ನಡೆಯುತ್ತಿದೆ. ರಾಜ್ಯಸಭೆ ಸದಸ್ಯತ್ವದ ಅವಧಿ ಲೋಕಸಭೆಯಂತೆ 5 ವರ್ಷ ಅಲ್ಲ, ಬದಲಾಗಿ 6 ವರ್ಷ. ನಾನಾ ಅವಧಿಗಳಲ್ಲಿ ಈ ರಾಜ್ಯಸಭೆ ಚುನಾವಣೆ ಹಾಗೂ ನೇಮಕಾತಿಗಳು ನಡೆಯುತ್ತವೆ. ಯಾಕೆಂದರೆ ಲೋಕಸಭೆಯಂತೆ ರಾಜ್ಯಸಭೆ ವಿಸರ್ಜಿಸಬೇಕಾದ ಸದನ ಅಲ್ಲ. ಅದು ಶಾಶ್ವತ ಸದನವಾಗಿದ್ದು, ಇಲ್ಲಿನ ಸದಸ್ಯರಲ್ಲಿ ಮೂರನೇ ಒಂದು ಭಾಗ ಮಂದಿ ಎರಡು ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ.

ಹೀಗಾಗಿ ಎರಡು ವರ್ಷಕ್ಕೊಮ್ಮೆ ಹೆಚ್ಚಿನ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಆದರೆ ಪ್ರತಿವರ್ಷವೂ ಕೆಲವರ ಮರಣ, ಅನರ್ಹತೆ, ರಾಜೀನಾಮೆ ಇತ್ಯಾದಿಗಳಿಂದಾಗಿ ಸಣ್ಣಪುಟ್ಟ ಚುನಾವಣೆಗಳೂ ನಡೆಯುತ್ತವೆ. ಈ ಬಾರಿ 57 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದು ಹಾಗೂ ಈ ವರ್ಷದಲ್ಲೇ ರಾಷ್ಟ್ರಪತಿಗಳ ಸ್ಥಾನಕ್ಕೂ ಚುನಾವಣೆ ನಡೆಯುತ್ತಿರುವುದರಿಂದ ಇದು ಮಹತ್ವ ಪಡೆದುಕೊಂಡಿದೆ. 1951 ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್‌154ರ ಪ್ರಕಾರ, ಅವಧಿ ಮಧ್ಯದಲ್ಲೇ ತೆರವಾದ ಸ್ಥಾನಗಳಿಗೆ ಆಯ್ಕೆಯಾದವರು, ಅವಧಿಯನ್ನು ಪೂರ್ಣಗೊಳಿಸುತ್ತಾರೆ.

ಚಿಂತಕರ ಚಾವಡಿ ಎನಿಸಿರುವ ರಾಜ್ಯಸಭೆಯನ್ನು ಮೇಲ್ಮನೆ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿಗೆ ಸಮಾಜದ ನಾನಾ ವಲಯಗಳ ತಜ್ಞರನ್ನು, ಚಿಂತಕರನ್ನು, ಹಿರಿಯರನ್ನು ಹೆಚ್ಚಾಗಿ ನಾಮಕರಣ ಮಾಡಲಾಗುತ್ತದೆ.

ಇನ್ನು ನಾಮ ನಿರ್ದೇಶಿತ ಸದಸ್ಯರನ್ನು ಕ್ರೀಡೆ, ಸಂಗೀತ, ಸಾಹಿತ್ಯ, ವಾಣಿಜ್ಯ ಮುಂತಾದ ಪ್ರಮುಖ ವಲಯಗಳಿಂದ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೂ ರಾಷ್ಟ್ರಪತಿಗಳು ಇವರ ನಾಮನಿರ್ದೇಶನ ಮಾಡುತ್ತಾರೆ. ಇನ್ನು ಕೆಲವೊಮ್ಮೆ ರಾಜಕೀಯದಲ್ಲಿ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿರುವ ತುಂಬಾ ಹಿರಿಯರನ್ನು ಆಯ್ಕೆ ಮಾಡಲಾಗುತ್ತದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ, ಆದರೆ ಸರಕಾರದ ನೀತಿ ನಿರೂಪಣೆಯಲ್ಲಿ ಇಂಥವರು ಇರಲೇಬೇಕು ಎನಿಸುವಂಥ ಮುತ್ಸದ್ಧಿಗಳನ್ನು ಕೂಡ ಆಯ್ಕೆ ಮಾಡಲಾಗುತ್ತದೆ. ಉಪ ರಾಷ್ಟ್ರಪತಿಗಳು ಈ ಸಭೆಯ ಸಭಾಧ್ಯಕ್ಷರಾಗಿರುತ್ತಾರೆ. ಸಂವಿಧಾನದ ಪ್ರಕಾರ ನಮ್ಮ ಮೇಲ್ಮನೆಯ ಸದಸ್ಯರ ಸಂಖ್ಯೆ 250 ಮೀರಬಾರದು. ಪ್ರತಿಯೊಂದು ರಾಜ್ಯಕ್ಕೂ ನಿರ್ದಿಷ್ಟ ಸಂಖ್ಯೆಯ ರಾಜ್ಯಸಭಾ ಸದಸ್ಯತ್ವವನ್ನು ನೀಡಿರಲಾಗುತ್ತದೆ.

ಚುನಾವಣೆ ನಡೆಯುವುದು ಹೇಗೆ?

ರಾಜ್ಯಸಭೆ ಸದಸ್ಯರನ್ನು ವಿಧಾನಸಭೆ ಶಾಸಕರು ಆಯ್ಕೆ ಮಾಡುತ್ತಾರೆ. ಹೀಗಾಗಿ ಹೆಚ್ಚಿನ ಶಾಸಕರನ್ನು ಹೊಂದಿರುವ ರಾಜ್ಯಗಳು ಹೆಚ್ಚಿನ ಎಂಪಿಗಳನ್ನು ರಾಜ್ಯಸಭೆಗೆ ಕಳಿಸುವುದು ಸಹಜ. ಪ್ರತಿ ಎಂಎಲ್‌ಎಗೂ ʼಸಿಂಗಲ್‌ ಟ್ರಾನ್ಸ್‌ಫರೇಬಲ್‌ ವೋಟ್‌ʼ ವ್ಯವಸ್ಥೆಯಲ್ಲಿ ಒಂದು ವೋಟ್‌ನಂತೆ ಕೌಂಟ್‌ ಮಾಡಲಾಗುತ್ತದೆ. ಆದರೆ ರಾಜ್ಯಸಭೆಯಲ್ಲಿ “ಪ್ರಿಫರೆನ್ಷಿಯಲ್‌ ವೋಟಿಂಗ್‌ʼ ಅಥವಾ ʼಆದ್ಯತೆಯ ಮತದಾನʼ ವ್ಯವಸ್ಥೆ ಇರುತ್ತದೆ. ಸದಸ್ಯರು ತಮ್ಮ ಮತವನ್ನು ಆದ್ಯತೆಯ ಪ್ರಕಾರ ಒಂದರಿಂದ ಹತ್ತರವರೆಗೆ ಪಟ್ಟಿ ಮಾಡಬೇಕು. ಹತ್ತು ಮತ್ತು ಹತ್ತಕ್ಕಿಂತ ಹೆಚ್ಚು ಸದಸ್ಯರ ಮತ ಒಬ್ಬರಿಗೆ ದಕ್ಕಿದರೆ ಅವರು ಆಯ್ಕೆಯಾಗುತ್ತಾರೆ. ಆದರೆ, ಒಬ್ಬ ವ್ಯಕ್ತಿ ಆಯ್ಕೆಯಾದ ಬಳಿಕ ಆತನಿಗೆ ಬಿದ್ದ ಹೆಚ್ಚುವರಿ ಮತಗಳು ಮುಂದಿನ ಕ್ಯಾಂಡಿಡೇಟ್‌ ಪಾಲಾಗುತ್ತವೆ. ಆದರೆ ಇವುಗಳ ಮೌಲ್ಯ ಕಡಿಮೆ ಇರುತ್ತದೆ. ಎಂಎಲ್‌ಎಗಳು ತಮ್ಮ ವಿರುದ್ಧ ಪಕ್ಷದ ಅಭ್ಯರ್ಥಿಗೂ ಆದ್ಯತೆಯ ಮತಗಳನ್ನು ಕೊಡುವುದರಿಂದಾಗಿ, ಈ ಹೆಚ್ಚುವರಿ ಮತ ಮೌಲ್ಯ ಗಣನೀಯವಾಗುತ್ತದೆ. ರಾಜ್ಯಸಭೆ ಸದಸ್ಯರ ಆಯ್ಕೆಯಲ್ಲಿ ವಿಚಿತ್ರಗಳು ಸಂಭವಿಸುವುದು ಇಂಥ ಚುನಾವಣೆ ವಿಧಾನದಿಂದಾಗಿ ಎಂದು ಹೇಳಬಹುದು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಹೊಸ ಟ್ವಿಸ್ಟ್‌: JDS ಶಾಸಕರಿಗೆ ʼಕೈʼ ಶಾಸಕಾಂಗ ನಾಯಕ ಸಿದ್ದು ಪತ್ರ!

ಚಲಾಯಿಸೋದು ರಹಸ್ಯ ಮತಗಳಲ್ಲ…

ರಾಜ್ಯಸಭೆ ಅಭ್ಯರ್ಥಿ ಆಯ್ಕೆಗೆ ನೀಡಲಾಗುವ ಮತಗಳು ರಹಸ್ಯ ಮತಗಳಲ್ಲ. ಕ್ರಾಸ್‌ ವೋಟಿಂಗ್‌ ತಡೆಗಟ್ಟಲು, ಸದಸ್ಯರು ತಮ್ಮ ಮತಗಳನ್ನು ತಮ್ಮ ಪಕ್ಷದ ಅಧಿಕೃತ ಏಜೆಂಟ್‌ಗೆ ತೋರಿಸಬೇಕಾಗುತ್ತದೆ. ಹಾಗೆ ತೋರಿಸದಿದ್ದರೆ ಅಂಥ ಮತಗಳು ಗಣನೆಗೆ ಒಳಪಡುವುದಿಲ್ಲ. ಸ್ವತಂತ್ರ ಅಭ್ಯರ್ಥಿಗಳು ತಮ್ಮ ಮತಗಳನ್ನು ಯಾರಿಗೂ ತೋರಿಸಬೇಕಾಗಿರುವುದಿಲ್ಲ.

ಇದೀಗ ರಾಜ್ಯಸಭೆಯಲ್ಲಿ 245 ಸದಸ್ಯ ಬಲ ಇದೆ. 15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಎಲ್ಲಾ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಕರ್ನಾಟಕದಿಂದ ಯಾವ ಪಕ್ಷದ ಮತಗಳು ಎಷ್ಟೆಷ್ಟಿವೆ ಎಂಬ ಲೆಕ್ಕಾಚಾರದ ಪ್ರಕಾರ, ಯಾರ್ಯಾರು ಗೆಲ್ಲುತ್ತಾರೆ ಎಂಬುದನ್ನು ಒಂದು ಮಟ್ಟಿಗೆ ಲೆಕ್ಕ ಹಾಕಬಹುದಾಗಿದೆ. ರಾಜ್ಯದಲ್ಲಿ ನಾಲ್ಕು ರಾಜ್ಯಸಭೆ ಸ್ಥಾನಗಳಿವೆ ಹಾಗೂ ಒಟ್ಟು ಆರು ಮಂದಿ ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದಾರೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌, ಲೆಹರ್‌ ಸಿಂಗ್‌ ಸಿರೊಯಾ, ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ಹಾಗೂ ಮನ್ಸೂರ್‌ ಖಾನ್‌, ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಅಭ್ಯರ್ಥಿಗಳಾಗಿದ್ದಾರೆ.

ಅವಿರೋಧವಾಗಿ ಆಯ್ಕೆ ಆದವರೆಷ್ಟು?

ರಾಜ್ಯಸಭೆಗೆ ಈಗಾಗಲೇ 41 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಹಾಕದೆ ಅಥವಾ ಬೇರೊಂದು ಪಕ್ಷಕ್ಕೆ ತಮ್ಮ ಸದಸ್ಯರ ಬೆಂಬಲವನ್ನು ಸೂಚಿಸುವುದರಿಂದ ಈ ಅವಿರೋಧ ಆಯ್ಕೆ ಉಂಟಾಗುತ್ತದೆ. ತಮ್ಮ ಪಕ್ಷದಲ್ಲಿ ತಮ್ಮದೇ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಕಷ್ಟು ಮತಗಳಿಲ್ಲ ಎಂದು ತಿಳಿದಾಗ ಪಕ್ಷಗಳು ಬೇರೊಂದು ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸುತ್ತವೆ. ಈ ಸಲ ಬಿಜೆಪಿಯಿಂದ 14 ಮಂದಿ, ಕಾಂಗ್ರೆಸ್‌ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ತಲಾ ನಾಲ್ಕು ಮಂದಿ, ಡಿಎಂಕೆ ಹಾಗೂ ಬಿಜೆಡಿಯೀಂದ ತಲಾ ಮೂರು ಮಂದಿ, ಆಪ್‌, ಆರ್‌ಜೆಡಿ, ಟಿಆರ್‌ಎಸ್‌, ಎಐಎಡಿಎಂಕೆಗಳಿಂದ ತಲಾ ಇಬ್ಬರು, ಜೆಎಂಎಂ, ಜೆಡಿಯು, ಎಸ್‌ಪಿ ಹಾಗೂ ಆರ್‌ಎಲ್‌ಡಿಗಳಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಪಿ.ಚಿದಂಬರಂ, ರಾಜೀವ್‌ ಶುಕ್ಲಾ, ಬಿಜೆಪಿಯಿಂದ ಸುಮಿತ್ರಾ ವಾಲ್ಮೀಕಿ, ಕವಿತಾ ಪಾಟೀದಾರ್‌, ಎಸ್‌ಪಿ ಬೆಂಬಲಿತ ಅಭ್ಯರ್ಥಿ ಮಾಜಿ ಕಾಂಗ್ರೆಸ್‌ನಾಯಕ ಕಪಿಲ್‌ಸಿಬಲ್‌, ಆರ್‌ಜೆಡಿಯ ಮೀಸಾ ಭಾರತಿ, ಆರ್‌ಎಲ್‌ಡಿಯ ಜಯಂತ್‌ ಚೌಧುರಿ ಈಗಾಗಲೇ ಗೆದ್ದಿರುವ ಪ್ರಮುಖರು. ಉತ್ತರ ಪ್ರದೇಶದ ಎಲ್ಲಾ 11 ಮಂದಿ, ತಮಿಳುನಾಡಿನ 6, ಬಿಹಾರದ 5, ಆಂಧ್ರಪ್ರದೇಶದ 4, ಮಧ್ಯಪ್ರದೇಶ ಮತ್ತು ಒಡಿಶಾದ ತಲಾ ಮೂವರು, ಛತ್ತೀಸ್‌ಗಢ, ಪಂಜಾಬ್‌, ತೆಲಂಗಾಣ, ಜಾರ್ಖಂಡ್‌ಗಳ ತಲಾ ಇಬ್ಬರು ಹಾಗೂ ಉತ್ತರಾಖಂಡದ ಒಬ್ಬರು ವಿರೋಧವಿಲ್ಲದೆ ಆಯ್ಕೆ ಆಗಿದ್ದಾರೆ. ಇನ್ನುಳುದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಜೆಡಿಎಸ್‌-ಕಾಂಗ್ರೆಸ್‌ Offer Closes Soon

ರಾಜ್ಯಸಭೆಗೆ ಸ್ಪರ್ಧಿಸಬೇಕಾದರೆ ಇರಬೇಕಾದ ಅರ್ಹತೆಗಳೇನು?

ಸಂವಿಧಾನದ 84ನೇ ವಿಧಿಯು ಸಂಸತ್ತಿನ ಸದಸ್ಯತ್ವಕ್ಕೆ ಇರಬೇಕಾದ ಅರ್ಹತೆಗಳ ಬಗ್ಗೆ ಹೇಳುತ್ತದೆ. ಅವರು ಕಡ್ಡಾಯವಾಗಿ-

ರಾಜ್ಯಸಭೆ ಸದಸ್ಯರಿಗೆ ಇರುವ ಸವಲತ್ತುಗಳೇನು?

ರಾಜ್ಯಸಭೆಯ ಸದಸ್ಯರು ಹಲವಾರು ಸವಲತ್ತುಗಳನ್ನು ಅನುಭವಿಸುತ್ತಾರೆ. ಅವರು ಸದನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಬಹುದು. ಇದಕ್ಕೆ ಅವರಿಗೆ ಸಂಪೂರ್ಣ ಅಧಿಕಾರ ಹಾಗೂ ಸುರಕ್ಷತೆ ಇದೆ. ರಾಜ್ಯಸಭೆಯ ಅಧಿವೇಶನದ 40 ದಿನಗಳ ಮೊದಲು, ಅಧಿವೇಶನದ ಅವಧಿಯಲ್ಲಿ ಹಾಗೂ ನಂತರದ 40 ದಿನಗಳಲ್ಲಿ ಯಾವುದೇ ಅಪರಾಧಕ್ಕೆ ಸಂಬಂಧಿಸಿ ಅವರನ್ನು ಬಂಧಿಸುವಂತಿಲ್ಲ. ಸದನದ ಸದಸ್ಯರ ಸವಲತ್ತುಗಳನ್ನು ರಕ್ಷಿಸಲು ವಿಶೇಷಾಧಿಕಾರಗಳ ಸಮಿತಿಯು ಅಸ್ತಿತ್ವದಲ್ಲಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!

ರಾಜ್ಯಸಭೆ ಸದಸ್ಯರ ಅಧಿಕಾರಗಳೇನಿರುತ್ತವೆ?

ಲೋಕಸಭೆ ಸದಸ್ಯರು ಹೊಂದಿರುವ ಅಧಿಕಾರಗಳನ್ನೇ ರಾಜ್ಯಸಭೆ ಸದಸ್ಯರೂ ಹೊಂದಿರುತ್ತಾರೆ. ರಾಜ್ಯಸಭೆಯಲ್ಲೂ ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಆದರೆ ಇದು ಕಾನೂನಾಗಲು ಲೋಕಸಭೆಯ ಅಂಗೀಕಾರ ಬೇಕು. ಹಾಗೇ ಲೋಕಸಭೆಯಲ್ಲಿ ಮಂಡಿಸಲಾದ ವಿಧೇಯಕ ಅಂತಿಮವಾಗಲು ರಾಜ್ಯಸಭೆಯ ಅಂಗೀಕಾರ ಬೇಕು. ಒಂದು ವೇಳೇ ಯಾವುದೇ ವಿಧೇಯಕದ ಬಗ್ಗೆ ಉಭಯ ಸದನಗಳ ನಡುವೆ ಭಿನ್ನಾಭಿಪ್ರಾಯ ಕಂಡುಬಂದು, ಆ ವಿಧೇಯಕ ಆರು ತಿಂಗಳಿಗಿಂತಲೂ ಅಧಿಕ ಕಾಲ ಪೆಂಡಿಂಗ್‌ ಆದಲ್ಲಿ, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಉಭಯ ಸದನಗಳ ಜಂಟಿ ಅಧಿವೇಶನವನ್ನು ಕರೆದು ಸಮಸ್ಯೆಯನ್ನು ಬಗೆಹರಿಸುವ ಉಪಕ್ರಮವನ್ನು ತೆಗೆದುಕೊಳ್ಳಬಹುದು. ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್‌ ವಹಿಸುತ್ತಾರೆ. ಜಂಟಿ ಅಧಿವೇಶನದಲ್ಲಿ ವಿಧೇಯಕ ಅಂಗೀಕೃತಗೊಂಡರೆ ರಾಷ್ಟ್ರಪತಿಗಳ ಸಮ್ಮತಿಗೆ ಹೋಗುತ್ತದೆ. ಜಂಟಿ ಅಧಿವೇಶನದಲ್ಲಿ ಸ್ವೀಕಾರಗೊಳ್ಳದೇ ಹೋದರೆ ಅಂಥ ವಿಧೇಯಕವನ್ನು ಕೈಬಿಡಲಾಗುತ್ತದೆ. ಹೀಗಾಗಿಯೇ ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಪಾತ್ರವೂ ಲೋಕಸಭೆಯಷ್ಟೇ ಮಹತ್ವದ್ದಾಗಿದೆ.

ಆದರೆ ಮನಿ ಬಿಲ್‌ಗಳು ಅಥವಾ ಆರ್ಥಿಕ ವಿಧೇಯಕಗಳ ಬಗ್ಗೆ ರಾಜ್ಯಸಭೆಗೆ ಯಾವುದೇ ಅಧಿಕಾರ ಇರುವುದಿಲ್ಲ. ಇದನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಲಾಗುತ್ತದೆ. ಕೇವಲ ರಾಜ್ಯಸಭೆಯ ಗಮನಕ್ಕಾಗಿ ಮಾತ್ರ ಅದರ ಮುಂದಿಡಲಾಗುತ್ತದೆ. 14 ದಿನಗಳಲ್ಲಿ ಮನಿ ಬಿಲ್‌ ಅನ್ನು ರಾಜ್ಯಸಭೆ ಅಂಗೀಕರಿಸಿದ್ದರೆ ಲೋಕಸಭೆ ಅದನ್ನು ತಾನೇ ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳಿಸಿಬಿಡಬಹುದು. ರಾಜ್ಯಸಭೆ ಯಾವುದಾದರೂ ತಿದ್ದುಪಡಿಗಳನ್ನು ಸೂಚಿಸಿದರೆ ಅದನ್ನು ಅಂಗೀಕರಿಸಬಹುದು, ಅಥವಾ ಬಿಡಬಹುದು.

ರಾಜ್ಯಸಭೆಗೆ ಇರುವ ಅಧಿಕಾರ ಏನು?

ಸಚಿವ ಸಂಪುಟ ಕುರಿತಾದ ಯಾವುದೇ ನಿರ್ಧಾರವನ್ನೂ ರಾಜ್ಯಸಭೆ ತೆಗೆದುಕೊಳ್ಳುವಂತಿಲ್ಲ. ಅವಿಶ್ವಾಸ ಗೊತ್ತುವಳಿ ಮುಂತಾದ ಮಹತ್ವದ ನಡೆಗಳನ್ನು ಲೋಕಸಭೆ ಮಾತ್ರ ಕೈಗೊಳ್ಳಬಹುದು ಹೊರತು ರಾಜ್ಯಸಭೆ ಅಲ್ಲ. ಸಚಿವ ಸಂಪುಟವು ಲೋಕಸಭೆಗೆ ಉತ್ತರದಾಯಿಯೇ ಹೊರತು ರಾಜ್ಯಸಭೆಗೆ ಅಲ್ಲ. ರಾಜ್ಯಸಭೆಯ ಸದಸ್ಯರು ಸಚಿವಸಂಪುಟದಲ್ಲಿ ಇರಬಹುದು; ರಾಜ್ಯಸಭೆಯ ಸದಸ್ಯರು ಸಚಿವ ಸಂಪುಟದ ನಿರ್ಧಾರಗಳನ್ನು ಟೀಕಿಸಬಹುದು, ವಿಮರ್ಶಿಸಬಹುದು. ಲೋಕಸಭೆಯ ಹೆಚ್ಚಿನ ಸದಸ್ಯರು ಒಪ್ಪುವುದಾದರೆ, ಪ್ರಧಾನ ಮಂತ್ರಿಯನ್ನು ಕೂಡ ರಾಜ್ಯಸಭೆಯಿಂದಲೇ ಆರಿಸಬಹುದು.

ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ವಿಧೇಯಕಗಳನ್ನು ರಾಜ್ಯಸಭೆ ಕೂಡ ಮಂಡಿಸಿ ಎರಡನೇ ಮೂರು ಬಹುಮತದಿಂದ ಅಂಗೀಕರಿಸಬಹುದು. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯರು ಮತ ಹಾಕುತ್ತಾರೆ ಹಾಗೂ ಹೆಚ್ಚಿನ ಮತಮೌಲ್ಯವನ್ನು ಹೊಂದಿರುತ್ತಾರೆ.

ಇದನ್ನೂ ಓದಿ: Explainer: ಆಪರೇಷನ್‌ ಬ್ಲೂ ಸ್ಟಾರ್‌ ಎಂಬ ಚಂಡಮಾರುತಕ್ಕೆ ಈಗ 38 ವರ್ಷ!

ರಾಜ್ಯಸಭೆಗೆ ಕೆಲವು ನ್ಯಾಯಾಂಗ ಅಧಿಕಾರಗಳಿರುತ್ತವೆ.

ವಿಶೇಷ ಅಧಿಕಾರಗಳು ಏನೇನು?

ಇನ್ನೂ ಕೆಲವು ವಿಶೇಷ ಅಧಿಕಾರಗಳು ಇರುತ್ತವೆ.

ಇದಲ್ಲದೆ ಎರಡು ವಿಶೇಷ ಅಧಿಕಾರಗಳು ರಾಜ್ಯಸಭೆಗೆ ಇವೆ-

ಒಂದು- ರಾಜ್ಯ ಪಟ್ಟಿಯಲ್ಲಿರುವ ಯಾವುದೇ ಒಂದು ವಿಷಯವನ್ನು ರಾಷ್ಟ್ರೀಯ ಆದ್ಯತೆಯ ಪಟ್ಟಿಯಲ್ಲಿರಬೇಕಾದ್ದು ಎಂದು ಘೋಷಿಸುವುದು. ಇದರಿಂದಾಗಿ, ಈ ವಿಷಯಕ್ಕೆ ಸಂಬಂಧಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲು, ಶಾಸನ ರೂಪಿಸಲು ಸಂಸತ್ತಿಗೆ ಸಾಧ್ಯವಾಗುತ್ತದೆ. ಇದು ಒಂದು ವರ್ಷಕ್ಕೆ ಜಾರಿಯಲ್ಲಿರುತ್ತದೆ ಹಾಗೂ ಅದನ್ನು ಮುಂದುವರಿಸಬಹುದು. ಅಂದರೆ, ರಾಜ್ಯಸಭೆಯ ಒಪ್ಪಿಗೆಯಿಲ್ಲದೆ ಲೋಕಸಭೆಯು ರಾಜ್ಯಪಟ್ಟಿಯ ಯಾವುದೇ ವಿಷಯಗಳಲ್ಲಿ ಮೂಗು ತೂರಿಸುವಂತಿಲ್ಲ. ಅಂದರೆ ರಾಜ್ಯಸಭೆಯು ರಾಜ್ಯಗಳ ಹಕ್ಕನ್ನು ಸಂರಕ್ಷಿಸುವ ಕೆಲಸವನ್ನೇ ಮಾಡುತ್ತದೆ ಎನ್ನಬಹುದು. ಹೀಗಾಗಿಯೇ ಇದನ್ನು ಕೌನ್ಸಿಲ್‌ಆಫ್‌ಸ್ಟೇಟ್ಸ್‌ಎಂದೂ ಕರೆಯಲಾಗುತ್ತದೆ.

ಎರಡು- ಅಖಿಲ ಭಾರತ ನಾಗರಿಕ ಸೇವೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿ ಬದಲಾವಣೆಗಳನ್ನು ಮಾಡಬಹುದು. ಹೊಸದೊಂದು ಸೇವೆಯನ್ನು ಆರಂಭಿಸಬಹುದು ಅಥವಾ ಇರುವುದನ್ನು ಕೈಬಿಡಬಹುದು.

ಒಂದು ಹೊಣೆಯರಿತ ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಸ್ಥಾನ ಕೂಡ ನಿರ್ಣಾಯಕವಾಗಿದೆ. ಇದಕ್ಕೆ ಲೋಕಸಭೆಗೆ ಇದ್ದಷ್ಟು ಅಧಿಕಾರಗಳು ಇಲ್ಲವಾದರೂ, ನಿರ್ಣಾಯಕ ಸಂದರ್ಭಗಳಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ, ಸಚಿವ ಸಂಪುಟದ ನಡೆಗಳನ್ನು ವಿಮರ್ಶಿಸುವ ಮೂಲಕ ಮಹತ್ವದ ಪಾತ್ರ ವಹಿಸಬಹುದು. ಹೀಗಾಗಿ ಮೊದಲಿನಿಂದಲೂ ರಾಜ್ಯಸಭೆಯನ್ನು ಚಿಂತಕರ ಚಾವಡಿ ಎನ್ನಲಾಗುತ್ತದೆ. ನಮ್ಮ ದೇಶದ ಮಹಾ ಮಹಾ ಮುತ್ಸದ್ಧಿಗಳು ಹಾಗೂ ಪ್ರತಿಭಾವಂತರನ್ನು ಈ ಸಭೆಗೆ ಮೊದಲು ಆಯ್ಕೆ ಮಾಡಲಾಗುತ್ತಿತ್ತು. ಸಚಿನ್‌ ತೆಂಡುಲ್ಕರ್‌, ಲತಾ ಮಂಗೇಶ್ಕರ್‌, ಜಾವೇದ್‌ ಅಖ್ತರ್‌ ಮೊದಲಾದವರು ಆಯ್ಕೆಯಾಗಿದ್ದುದನ್ನು ಇಲ್ಲಿ ನೆನೆಯಬಹುದು. ಆದರೆ ಇಂದು ಅಂಥವರ ಜಾಗದಲ್ಲಿ ಹಣವುಳ್ಳ ಶ್ರೀಮಂತರು, ಪಕ್ಷಗಳ ಸದಸ್ಯರ ಮತಗಳನ್ನು ಕೊಂಡುಕೊಳ್ಳಬಲ್ಲ ಕುಬೇರರು ಆಯ್ಕೆಯಾಗಿ ಬರುತ್ತಿದ್ದಾರೆ.

Exit mobile version