Site icon Vistara News

G20 Summit 2023: ದೆಹಲಿ ಶೃಂಗಸಭೆಗೆ ಮೊದಲು ಹಂಪಿಯಲ್ಲೂ ನಡೆಯಲಿದೆ ಸಭೆ

hampi

ನವ ದೆಹಲಿ: ಸೆಪ್ಟೆಂಬರ್ 9 ಮತ್ತು 10ರಂದು ದೆಹಲಿಯಲ್ಲಿ G20 ದೇಶಗಳ ಶೃಂಗಸಭೆ ನಡೆಯಲಿದೆ. ಅದಕ್ಕೂ ಮುನ್ನ ದೇಶದ ವಿವಿಧ ಕಡೆ ನಾನಾ ದೇಶಗಳ ಪ್ರತಿನಿಧಿಗಳ 70ಕ್ಕೂ ಹೆಚ್ಚು ಸಭೆಗಳು ನಡೆಯಲಿದ್ದು, ಅದರಲ್ಲಿ ಕರ್ನಾಟಕದ ಹಂಪಿಯೂ ಸೇರಿದೆ.

ಮುಂದಿನ ತಿಂಗಳು ಹಂಪಿ, ಶ್ರೀನಗರ, ಕೆವಾಡಿಯಾ, ರಿಷಿಕೇಶ ಮತ್ತು ಮಹಾಬಲಿಪುರಂಗಳಲ್ಲಿ ಸಭೆಗಳನ್ನು ನಿಗದಿಪಡಿಸಲಾಗಿದೆ. ಜುಲೈ 10-12ರಂದು ಕರ್ನಾಟಕದ ಹಂಪಿಯಲ್ಲಿ ಮೂರನೇ ಶೆರ್ಪಾ ಸಭೆಯನ್ನು ನಿಗದಿಪಡಿಸಲಾಗಿದೆ. ಜುಲೈನಲ್ಲಿ ಸಂಸ್ಕೃತಿ ಗುಂಪಿನ ಸಭೆಯೂ ಇಲ್ಲಿ ನಡೆಯಲಿದೆ. ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ತಾಣವಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದ ಸ್ಮಾರಕಗಳ ಸಮೂಹಕ್ಕೆ ಹೆಸರುವಾಸಿಯಾಗಿದೆ. ಸಭೆಗೆ ಆಗಮಿಸಿದ ನಾನಾ ದೇಶಗಳ ಪ್ರತಿನಿಧಿಗಳು ಹಂಪಿಯ ಸ್ಮಾರಕಗಳ ಸೌಂದರ್ಯವನ್ನೂ ವೀಕ್ಷಿಸಲಿದ್ದಾರೆ.

ಹಲವಾರು ವರ್ಷಗಳ ಸುದೀರ್ಘ ಅಂತರದ ಶ್ರೀನಗರದಲ್ಲಿ ಮೇ 22ರಿಂದ ಮೇ 24ರವರೆಗೆ ಪ್ರವಾಸೋದ್ಯಮ ಕಾರ್ಯನಿರತ ಗುಂಪಿನ ಮೂರು ದಿನಗಳ G20 ಸಭೆಯನ್ನು ನಿಗದಿಪಡಿಸಿದೆ. ಆರ್ಟಿಕಲ್ 370 ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ನಡೆಯುತ್ತಿರುವ ದೊಡ್ಡ ಕಾರ್ಯಕ್ರಮ ಇದಾಗಿದೆ. ಶ್ರೀನಗರವು ದೇಶದ ಪ್ರಮುಖ ಪ್ರವಾಸಿ ತಾಣ ಹಾಗೂ ಇದು 2022ರಲ್ಲಿ ದಾಖಲೆಯ 1.84 ಕೋಟಿ ಪ್ರವಾಸಿಗರನ್ನು ಕಂಡಿದೆ. G20 ಪ್ರತಿನಿಧಿಗಳನ್ನು ಶ್ರೀನಗರ ಸುತ್ತಾಡಿಸಲಾಗುತ್ತದೆ.

ಮುಂಬರುವ ಇತರ ಪ್ರಮುಖ G20 ಸಭೆಗಳು ಹೀಗಿವೆ: ಜೂನ್ 19-21ರಂದು ಗುಜರಾತ್‌ನ ಕೆವಾಡಿಯಾದಲ್ಲಿ ವ್ಯಾಪಾರ ಮತ್ತು ಹೂಡಿಕೆ ಗುಂಪಿನ ಸಭೆ ನಡೆಯಲಿದೆ. ರಿಷಿಕೇಶ ಪಟ್ಟಣವು ಜೂನ್ 26-28ರವರೆಗೆ ಮೂಲಸೌಕರ್ಯ ಕಾರ್ಯಕಾರಿ ಗುಂಪಿನ G20 ಸಭೆಗೆ ಸಾಕ್ಷಿಯಾಗಲಿದೆ. UNESCO ವಿಶ್ವ ಪರಂಪರೆಯ ತಾಣವಾಗಿರುವ ಮಹಾಬಲಿಪುರಂನ ದೇವಸ್ಥಾನದ ಬಳಿ ಜೂನ್ 19-21ರಂದು ಸುಸ್ಥಿರ ಹಣಕಾಸು ಕಾರ್ಯ ಸಮೂಹ ಆಯೋಜನೆಯಾಗಿದೆ. ವಾರಣಾಸಿ, ಗೋವಾ, ಪುಣೆ, ಇಂದೋರ್, ಚೆನ್ನೈ ಮತ್ತು ಗಾಂಧಿನಗರದಲ್ಲಿ ಶೃಂಗಸಭೆಯವರೆಗೂ G20 ಸಭೆಗಳ ಇತರ ಮೀಟಿಂಗ್‌ಗಳು ಸೇರಲಿವೆ. ಜಿ20ಯ ಹಿಂದಿನ ಎರಡು ಶೆರ್ಪಾ ಸಭೆಗಳು ಉದಯಪುರ ಮತ್ತು ಕುಮಾರಕೋಮ್‌ನಲ್ಲಿ ನಡೆದಿದ್ದವು.

ಸೆಪ್ಟೆಂಬರ್ 9-10ರಂದು ಎಲ್ಲಾ G20 ಸಭೆಗಳನ್ನು ಮುಖ್ಯ ಶೃಂಗಸಭೆಯ ಮೊದಲು ದೆಹಲಿಯಲ್ಲಿ ನಿಗದಿಪಡಿಸಲಾಗಿದೆ. ಇವುಗಳಲ್ಲಿ 4ನೇ ಶೆರ್ಪಾ ಸಭೆ, ಜಂಟಿ ಶೆರ್ಪಾಗಳು ಮತ್ತು ಹಣಕಾಸು ನಿಯೋಗಿಗಳ ಸಭೆ, ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ನಿಯೋಗಿಗಳ ಸಭೆ ಮತ್ತು ಜಂಟಿ ಹಣಕಾಸು ಮತ್ತು ಇಂಧನ ನಿಯೋಗಿಗಳ ಸಭೆ ಇವೆಲ್ಲವೂ ಸೆಪ್ಟೆಂಬರ್ 3 ಮತ್ತು 8ರ ನಡುವೆ ನಿಗದಿಯಾಗಿದೆ.

ಇದನ್ನೂ ಓದಿ: G20 Summit | ಬೆಂಗಳೂರಲ್ಲಿ ಜಿ20 ರಾಷ್ಟ್ರಗಳ ವಿತ್ತ ಸಚಿವರು, ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆ

Exit mobile version