Site icon Vistara News

G20 Summit 2023: ಜಿ20 ಶೃಂಗಸಭೆಯ ʼಭಾರತ ಮಂಟಪʼ ಎಷ್ಟು ಅದ್ಭುತವಾಗಿದೆ ನೋಡಿ! ಇದಕ್ಕಿದೆ ಕರ್ನಾಟಕದ ಲಿಂಕ್!

bharat mandapam

ಹೊಸದಿಲ್ಲಿ: ಈ ವಾರಾಂತ್ಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ G20 ಶೃಂಗಸಭೆಗೆ (G20 Summit 2023) ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ʼಭಾರತ ಮಂಟಪʼ (bharat mandapam) ಎಂದು ಕರೆಯಲ್ಪಡುವ ಅಂತಾರಾಷ್ಟ್ರೀಯ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಸಿಂಗರಿಸಿಕೊಂಡು ಸಜ್ಜಾಗಿದೆ. ಅದ್ಭುತವಾದ ಈ ಸಂಕೀರ್ಣ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden), ಬ್ರಿಟನ್‌ ಪ್ರಧಾನಿ ರಿಷಿ ಸುನಕ್ (UK PM RIshi Sunak) ಮುಂತಾದ ಉನ್ನತ ವಿಶ್ವ ನಾಯಕರನ್ನು ಬರಮಾಡಿಕೊಳ್ಳಲಿದೆ.

ಇದೇ ಜುಲೈ 26ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಸಂಕೀರ್ಣವನ್ನು ಉದ್ಘಾಟಿಸಿದರು. ಇದು ಸಮಾವೇಶದ ಹಾಲ್‌, ಪ್ರದರ್ಶನ ಸಭಾಂಗಣಗಳು, ಆಂಫಿಥಿಯೇಟರ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. “ಸಂಸ್ಕೃತಿ ಕಾರಿಡಾರ್” ಎಂದೇ ಕರೆಯಲಾಗುವ ಇಲ್ಲಿ G20 ಶೃಂಗಸಭೆಯ ಹೊತ್ತಿಗೆ ವಿಶೇಷ ಆಹ್ವಾನಿತರು ಸೇರಿದಂತೆ ಆಗಮಿಸಲಿರುವ ಎಲ್ಲ 29 ದೇಶಗಳ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರದರ್ಶಿಸಲಾಗುತ್ತದೆ. ಭೌತಿಕ ಮತ್ತು ವರ್ಚುವಲ್ ಎರಡೂ ಬಗೆಯ ಪ್ರದರ್ಶನಗಳಿವೆ.

bharat mandapam

ಮಂಗಳವಾರ ಭಾರತ ಮಂಟಪದ ಎದುರುಗಡೆ 27 ಅಡಿ ಎತ್ತರದ, ಅಷ್ಟಧಾತುಗಳಿಂದ ನಿರ್ಮಿಸಲಾದ, ಸುಮಾರು 18 ಟನ್ ತೂಕದ ನಟರಾಜನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ತಮಿಳುನಾಡಿನ ಸ್ವಾಮಿಮಲೈ ಮೂಲದ ಖ್ಯಾತ ಶಿಲ್ಪಿ ರಾಧಾಕೃಷ್ಣನ್ ಸ್ಥಪತಿ ಮತ್ತು ಅವರ ತಂಡ ಈ ಶಿಲ್ಪವನ್ನು ದಾಖಲೆಯ ಏಳು ತಿಂಗಳಲ್ಲಿ ಪೂರ್ಣಗೊಳಿಸಿದೆ. ಪ್ರಧಾನಿ ಮೋದಿ ಎಕ್ಸ್‌ (ಟ್ವಿಟರ್) ನಲ್ಲಿ ಇದರ ಸ್ಥಾಪನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಭಾರತ ಮಂಟಪದಲ್ಲಿರುವ ಭವ್ಯವಾದ ನಟರಾಜ ಪ್ರತಿಮೆಯು ನಮ್ಮ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಅಂಶಗಳನ್ನು ಜೀವಂತಗೊಳಿಸುತ್ತದೆʼʼ ಎಂದಿದ್ದಾರೆ.

bharat mandapam

‘ಭಾರತ ಮಂಟಪ’ ಎಂದರೇನು?

ಸರ್ಕಾರದ ಹೇಳಿಕೆಯ ಪ್ರಕಾರ ಭಾರತ ಮಂಟಪವು “ಭಗವಾನ್ ಬಸವೇಶ್ವರರ ಅನುಭವ ಮಂಟಪದ ಪರಿಕಲ್ಪನೆ”ಯಿಂದ ಸ್ಫೂರ್ತಿ ಪಡೆದಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಇತರ ಶರಣರು ‌ಕರ್ನಾಟಕದಲ್ಲಿ ನಡೆಸಿದ ಶರಣ ಕ್ರಾಂತಿಯ ಸಂದರ್ಭದಲ್ಲಿ ಅನುಭವ ಮಂಟಪವು ಸಾವಿರಾರು ಶರಣರ ವಾಕ್ಯಾರ್ಥ ಗೋಷ್ಠಿಗಳಿಗೆ ನೆಲೆಯಾಗಿತ್ತು.

bharat mandapam

ಭಾರತ ಮಂಟಪ ವಿನ್ಯಾಸ

ಭಾರತ ಮಂಟಪ ಕಟ್ಟಡದ ವಾಸ್ತುಶಿಲ್ಪ ವಿನ್ಯಾಸ ದೇಶದ ಪಾರಂಪರಿಕ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದೆ. ಕಟ್ಟಡದ ಆಕಾರ ಶಂಖದ ಸೊಗಸಾದ ರೂಪದಿಂದ ಪ್ರೇರಿತವಾಗಿದೆ. ಕನ್ವೆನ್ಷನ್ ಸೆಂಟರ್‌ನ ವಿವಿಧ ಗೋಡೆಗಳು ಮತ್ತು ಮುಂಭಾಗಗಳು ಭಾರತದ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ಸಂಕೀರ್ಣವಾಗಿ ಚಿತ್ರಿಸುತ್ತವೆ. ಇವುಗಳಲ್ಲಿ ʻಸೂರ್ಯ ಶಕ್ತಿ’ ಸೌರ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಭಾರತದ ಬದ್ಧತೆಯನ್ನು ಸಂಕೇತಿಸುತ್ತದೆ. `Zero to ISRO’ ಬಾಹ್ಯಾಕಾಶ ಪರಿಶೋಧನೆಯಲ್ಲಿ ರಾಷ್ಟ್ರದ ಸಾಧನೆಗಳನ್ನು ಕೊಂಡಾಡುತ್ತದೆ. ಬ್ರಹ್ಮಾಂಡದ ಮೂಲಭೂತ ಅಂಶಗಳನ್ನು ಪ್ರತಿನಿಧಿಸುವ ʻಪಂಚ ಮಹಾಭೂತ’- ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ- ಜತೆಗೆ ಕನ್ವೆನ್ಷನ್ ಸೆಂಟರ್‌ನಲ್ಲಿ ದೇಶದ ನಾನಾ ಕಡೆಗಳ ವರ್ಣಚಿತ್ರಗಳು, ಬುಡಕಟ್ಟು ಕಲಾ ಪ್ರಕಾರಗಳ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.

ಇದನ್ನು ಓದಿ: G20 Summit 2023: ವಿಶ್ವನಾಯಕರಿಗೆ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ವಿಶಿಷ್ಟ ಕೆತ್ತನೆಯ ಬೆಳ್ಳಿ, ಚಿನ್ನಲೇಪಿತ ಪಾತ್ರೆಗಳಲ್ಲಿ ಭೋಜನ

Exit mobile version