Site icon Vistara News

ಪನ್ನುನ್ ಕೊಲೆ ಸಂಚು: ಭಾರತದ ಸುಪ್ರೀಂ ಕೋರ್ಟ್‌ ಬಗ್ಗೆ ಝೆಕ್ ಸರ್ಕಾರ ಹೇಳಿದ್ದೇನು?

Khalistani Separatist Gurpatwant Singh Pannun

ಪ್ರಾಗ್‌: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ (Khalistan terrorist) ಗುರುಪತ್‌ವಂತ್ ಸಿಂಗ್ ಪನ್ನುನ್‌ನನ್ನು (Gurpatwant Singh Pannun) ಕೊಲ್ಲಲು ಸಂಚು ರೂಪಿಸಿದ ಆರೋಪದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (Nikhil Gupta) ಅವರನ್ನು ಒಳಗೊಂಡ ಪ್ರಕರಣದಲ್ಲಿ ʼಭಾರತದ ನ್ಯಾಯಾಂಗ ಅಧಿಕಾರಿಗಳಿಗೆ ಅಧಿಕಾರ ವ್ಯಾಪ್ತಿಯಿಲ್ಲʼ ಎಂದು ಝೆಕ್ ಸರ್ಕಾರ ಹೇಳಿದೆ.

ನಿಖಿಲ್‌ ಗುಪ್ತಾ ಅವರ ಕುಟುಂಬವು ಗುಪ್ತಾ ಬಂಧನ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದು, ಈ ವಿಷಯದಲ್ಲಿ ಕೋರ್ಟ್‌ ಮಧ್ಯಸ್ಥಿಕೆಯನ್ನು ಕೋರುತ್ತಿದೆ. ನಿಖಿಲ್ ಗುಪ್ತಾ ಅವರು ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧನಕ್ಕೊಳಗಾದಾಗಿನಿಂದ ಪ್ರೇಗ್ ಜೈಲಿನಲ್ಲಿದ್ದಾರೆ. ಗುಪ್ತಾ ಅವರ ಹಸ್ತಾಂತರಕ್ಕಾಗಿ ಅಮೆರಿಕ ಸರ್ಕಾರ ಜೆಕ್ ಸರ್ಕಾರವನ್ನು ಸಂಪರ್ಕಿಸಿದೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ.

“ಭಾರತದ ಸುಪ್ರೀಂ ಕೋರ್ಟ್‌, ಭಾರತ ಗಣರಾಜ್ಯದ ಯಾವುದೇ ನ್ಯಾಯಾಂಗ ಅಧಿಕಾರಿಗಳು ಈ ವಿಷಯದಲ್ಲಿ ಯಾವುದೇ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ. ಈ ಪ್ರಕರಣವು ಜೆಕ್ ಗಣರಾಜ್ಯದ ಅಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿದೆ” ಎಂದು ಜೆಕ್ ನ್ಯಾಯ ಸಚಿವಾಲಯದ ವಕ್ತಾರ ವ್ಲಾಡಿಮಿರ್ ರೆಪ್ಕಾ ಹೇಳಿದ್ದಾರೆ.

ಕಳೆದ ವಾರ, ಗುಪ್ತಾ (52) ಕುಟುಂಬದ ಸದಸ್ಯರು, ಹಸ್ತಾಂತರ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಪ್ರಕರಣದಲ್ಲಿ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರಕ್ಕೆ ನಿರ್ದೇಶನವನ್ನು ನೀಡುವಂತೆ ಅವರ ಪರವಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಗುಪ್ತಾಗೆ ಮೂರು ಸಂದರ್ಭಗಳಲ್ಲಿ ಭಾರತೀಯ ಅಧಿಕಾರಿಗಳು ಸಹಾಯ ನೀಡಲು ಅವಕಾಶವನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಭಾರತದ ಕಡೆಯವರು ಗುಪ್ತಾ ಅವರಿಗೆ ಕಾನ್ಸುಲರ್ ಸಹಾಯವನ್ನು ಸಹ ವಿಸ್ತರಿಸಿದ್ದಾರೆ ಎಂದು ಬಾಗ್ಚಿ ಹೇಳಿದ್ದಾರೆ.

“ಭಾರತೀಯ ಪ್ರಜೆಯೊಬ್ಬರು ಪ್ರಸ್ತುತ ಝೆಕ್ ಅಧಿಕಾರಿಗಳ ವಶದಲ್ಲಿದ್ದಾರೆ. ಯುಎಸ್‌ಗೆ ಹಸ್ತಾಂತರಿಸುವ ವಿನಂತಿ ಬಾಕಿ ಇದೆ. ನಾವು ಕನಿಷ್ಠ ಮೂರು ಬಾರಿ ಕಾನ್ಸುಲರ್‌ ಪ್ರವೇಶವನ್ನು ಪಡೆದಿದ್ದೇವೆ. ನಾವು ಅಗತ್ಯಕ್ಕೆ ಅನುಗುಣವಾಗಿ ಗುಪ್ತಾಗೆ ಅಗತ್ಯ ಕಾನ್ಸುಲರ್ ಸಹಾಯವನ್ನು ವಿಸ್ತರಿಸುತ್ತಿದ್ದೇವೆ. ಕುಟುಂಬದ ಸದಸ್ಯರೊಬ್ಬರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ, ಇದು ಪ್ರತ್ಯೇಕ ವಿಷಯ” ಎಂದು ಬಾಗ್ಚಿ ಹೇಳಿದರು.

ಗುಪ್ತಾ ಅವರು ಪನ್ನುನ್ ಅವರನ್ನು ಕೊಲ್ಲುವ ಸಂಚಿನಲ್ಲಿ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ. ಪನ್ನುನ್‌ ಯುಎಸ್ ಮತ್ತು ಕೆನಡಾದ ದ್ವಿಪೌರತ್ವವನ್ನು ಹೊಂದಿದ್ದು, ಭಾರತದಲ್ಲಿ ʼಭಯೋತ್ಪಾದಕʼ ಎಂದು ಘೋಷಿಸಲ್ಪಟ್ಟಿದ್ದಾನೆ. ಆರೋಪಗಳ ತನಿಖೆಗೆ ಭಾರತ ಈಗಾಗಲೇ ತನಿಖಾ ಸಮಿತಿಯನ್ನು ರಚಿಸಿದೆ.

ಇದನ್ನೂ ಓದಿ: ಪನ್ನುನ್‌ ಹತ್ಯೆಗೆ ಸ್ಕೆಚ್‌; ಅಮೆರಿಕ ಆರೋಪಕ್ಕೆ ಭಾರತ ಪ್ರತಿಕ್ರಿಯೆ, ಉನ್ನತ ಸಮಿತಿ ರಚನೆ

Exit mobile version