ಹೊಸದಿಲ್ಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಯಾರು ಮತ್ತು ಯಾವಾಗ ಪಡೆಯುತ್ತಾರೆ ಎಂಬ ಚರ್ಚೆ ತೀವ್ರಗೊಳ್ಳುತ್ತಿರುವಂತೆಯೇ ಈ ವಿವಾದದ ಜೊತೆಗೆ ʼ1991ರ ಪೂಜಾ ಸ್ಥಳಗಳ ಕಾಯಿದೆʼ ಕೂಡ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಹಿಂದೂ ಪರ ವಕೀಲರಾದ ಸುಭಾಷ್ ನಂದನ್ ಚತುರ್ವೇದಿ, ಸಮೀಕ್ಷೆಯ ವೇಳೆ ಜ್ಞಾನವಾಪಿ ಮಸೀದಿ ಸಂಕೀರ್ಣದ ಕೊಳದಲ್ಲಿ ‘ಶಿವಲಿಂಗ’ ಕಂಡು ಬಂದಿದೆ ಎಂದು ಪ್ರತಿಪಾದಿಸಿದರು. ಆದರೆ ಇದನ್ನು ಮುಸ್ಲಿಂ ಪಕ್ಷಗಳು ತಳ್ಳಿಹಾಕಿವೆ. ಮಸೀದಿ ಸಂಕೀರ್ಣವನ್ನು ವೀಡಿಯೋಗ್ರಫಿಕ್ ಸಮೀಕ್ಷೆ ನಡೆಸುವಂತೆ ವಾರಣಾಸಿ ನ್ಯಾಯಾಲಯವು ಆದೇಶ ನೀಡಿತ್ತು.
ಸಮೀಕ್ಷೆ ಪೂರ್ಣಗೊಂಡ ನಂತರ, ʼಶಿವಲಿಂಗ’ ಪತ್ತೆಯಾದ ಸ್ಥಳವನ್ನು ತಕ್ಷಣವೇ ಸೀಲ್ ಮಾಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಜನರು ಈ ಸ್ಥಳಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಿಯೋಜಿಸುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಶ್ರೀಕೃಷ್ಣ ಜನ್ಮಭೂಮಿ- ಈದ್ಗಾ ಮಸೀದಿ ಸೀಲ್‌ಡೌನ್ ಮಾಡಲು ಅರ್ಜಿ
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ- ಜ್ಞಾನವಾಪಿ ಮಸೀದಿಯ ವೀಡಿಯೋಗ್ರಫಿ ಸಮೀಕ್ಷೆ ನಡೆದ ಬೆನ್ನಿಗೇ ಮಥುರಾದ ಸ್ಥಳೀಯ ನ್ಯಾಯಾಲಯವು ಕೃಷ್ಣಜನ್ಮಭೂಮಿಯ ಪಕ್ಕದ ಶಾಹಿ ಈದ್ಗಾ ಮಸೀದಿಯ ವೀಡಿಯೊಗ್ರಫಿ ಕೋರಿದ ಇದೇ ರೀತಿಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದೆ.
“ಶಾಹಿ ಈದ್ಗಾ ಮಸೀದಿ ಆವರಣದಲ್ಲಿ ಹಿಂದೂ ಕಲಾಕೃತಿಗಳು ಮತ್ತು ಪುರಾತನ ಧಾರ್ಮಿಕ ಶಾಸನಗಳ ಅಸ್ತಿತ್ವವನ್ನು ನಿರ್ಧರಿಸಲು “ಜ್ಞಾನವಾಪಿ ಮಸೀದಿಯ ಮಾದರಿಯಲ್ಲೇ” ಅಡ್ವೊಕೇಟ್ ಕಮಿಷನರ್ ಒಬ್ಬರಿಂದ ನಿವೇಶನದ ಮೌಲ್ಯಮಾಪನ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
1991ರ ಪೂಜಾ ಸ್ಥಳಗಳ ಕಾಯಿದೆ ಜಾರಿಗೆ ಓವೈಸಿ ಆಗ್ರಹ
ಜ್ಞಾನವಾಪಿ ಮಸೀದಿಯ ʼವುಝು’ ಪ್ರದೇಶದಲ್ಲಿ ʼಶಿವಲಿಂಗ’ ಪತ್ತೆಯಾದ ನಂತರ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ʼಆರಾಧನಾ ಸ್ಥಳಗಳ’ ಕಾಯಿದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ. ಈ ಕಾಯಿದೆಯ ಪ್ರಕಾರ ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಬದಲಾಯಿಸುವುದನ್ನು ನಿಷೇಧಿಸಲಾಗಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಆದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ಇತರ ನಾಯಕರು, ಸಾರ್ವಜನಿಕ ಅಗತ್ಯಗಳಿಗೆ ತಕ್ಕಂತೆ ಈ ಕಾಯಿದೆಯಲ್ಲಿ ಬದಲಾವಣೆಗಳನ್ನು ಮಾಡಬಹುದು ಎಂದು ಪ್ರತಿಪಾದಿಸಿದ್ದಾರೆ.
ಏನಿದು ಪೂಜಾ ಸ್ಥಳಗಳ ಕಾಯಿದೆ, 1991?
1991ರ ಪೂಜಾ ಸ್ಥಳಗಳ ಕಾಯಿದೆ, ಜುಲೈ 11, 1991ರಿಂದ ಜಾರಿಯಲ್ಲಿದೆ. ಆರಾಧನಾ ಸ್ಥಳಗಳ ಕಾಯಿದೆ- 1991ರ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ಧಾರ್ಮಿಕ ಪಂಗಡದ ಅಥವಾ ಯಾವುದೇ ವಿಭಾಗದ ಯಾವುದೇ ಪೂಜಾ ಸ್ಥಳವನ್ನು ಅದೇ ಧಾರ್ಮಿಕ ಪಂಗಡದ ಅಥವಾ ಬೇರೆ ಧಾರ್ಮಿಕ ಪಂಗಡದ ಅಥವಾ ಯಾವುದೇ ವಿಭಾಗದ ಅನ್ಯ ಆರಾಧನಾ ಸ್ಥಳವಾಗಿ ಪರಿವರ್ತಿಸಲು ಸಾಧ್ಯವಿಲ್ಲ.
ಆಗಸ್ಟ್ 15, 1947ರಂದು ಸ್ವಾತಂತ್ರ್ಯದ ದಿನದಂದು ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಹೇಗಿತ್ತೋ ಅದನ್ನೇ ಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಆ ನಂಬಿಕೆಯಲ್ಲಿ ಮುಂದುವರಿಯಬೇಕು ಎಂದು ಕಾಯಿದೆ ಹೇಳುತ್ತದೆ.
ಆದಾಗ್ಯೂ, ಯಾವುದೇ ಪೂಜಾ ಸ್ಥಳವು ವಿವಾದಾಸ್ಪದವಾಗಿದ್ದರೆ, ಆಗಸ್ಟ್ 1947ರಲ್ಲಿ, ಅಥವಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೆ ಈ ಕಾಯಿದೆಯ ನಿಬಂಧನೆಗಳಿಂದ ವಿನಾಯಿತಿ ನೀಡಲಾಗುತ್ತದೆ ಮತ್ತು ಪೂಜಾ ಸ್ಥಳದ ಧಾರ್ಮಿಕ ಸ್ವರೂಪದ ಪರಿವರ್ತನೆಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ದಾವೆ ಹೂಡುವುದು ಮಾನ್ಯವಾಗುವುದಿಲ್ಲ.
ಕಾಯಿದೆಯ ಸೆಕ್ಷನ್ 4 (1) ಹೇಳುವಂತೆ: “ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿರುವ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಆ ದಿನದಂತೆಯೇ ಮುಂದುವರಿಯುತ್ತದೆ.”
ಕಾಯಿದೆಯ ಸೆಕ್ಷನ್ 4 (2) ರ ಪ್ರಕಾರ, ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಗುಣಲಕ್ಷಣಗಳ ಪರಿವರ್ತನೆಗೆ ಸಂಬಂಧಿಸಿದ ಯಾವುದೇ ದಾವೆ, ಮೇಲ್ಮನವಿ ಅಥವಾ ಇತರ ಪ್ರಕ್ರಿಯೆಗಳು ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಮುಂದೆ ಬಾಕಿ ಉಳಿದಿದ್ದರೆ, ಅಂತಹ ವಿಷಯಗಳ ಮೇಲೆ ಇತರ ಪ್ರಾಧಿಕಾರವು ಯಾವುದೇ ಹೊಸ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದು ಎಂದು ಹೇಳುತ್ತದೆ.
ಕಾಯಿದೆಯ ಸೆಕ್ಷನ್ 3 ಯಾವುದೇ ರೀತಿಯಲ್ಲಿ ಧಾರ್ಮಿಕ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ, ಧರ್ಮದ ನಿರ್ದಿಷ್ಟ ವಿಭಾಗವನ್ನು ಪೂರೈಸಲು ಸಹ. “ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಪಂಗಡದ ಯಾವುದೇ ಪೂಜಾ ಸ್ಥಳವನ್ನು ಅಥವಾ ಅದರ ಯಾವುದೇ ವಿಭಾಗವನ್ನು ಅದೇ ಧಾರ್ಮಿಕ ಪಂಗಡದ ಅಥವಾ ವಿಭಿನ್ನ ಧಾರ್ಮಿಕ ಪಂಗಡದ ಅಥವಾ ಅದರ ಯಾವುದೇ ವಿಭಾಗದ ಪೂಜಾ ಸ್ಥಳವಾಗಿ ಪರಿವರ್ತಿಸಬಾರದು” ಎಂದು ತಿಳಿಸುತ್ತದೆ.
ಕಾಯಿದೆ ಅಡಿಯಲ್ಲಿ ಏನೇನು ವಿನಾಯಿತಿಗಳಿವೆ ?
ಪೂಜಾ ಸ್ಥಳಗಳ ಕಾಯಿದೆ, 1991 ನಿರ್ದಿಷ್ಟವಾಗಿ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣಕ್ಕೆ ಕಾಯಿದೆಯಿಂದ ವಿನಾಯಿತಿ ನೀಡಿದೆ. ಆದ್ದರಿಂದ 2019ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ಸಂದರ್ಭದಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಇದು ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳು, ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಅಥವಾ 1958ರ ಪುರಾತನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆಯಡಿಯಲ್ಲಿ ಒಳಗೊಂಡಿರುವ ಯಾವುದೇ ಪೂಜಾ ಸ್ಥಳಗಳಿಗೆ ವಿನಾಯಿತಿ ನೀಡುತ್ತದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆ ಮಾಹಿತಿ ಲೀಕ್, ಕೋರ್ಟ್ ಕಮಿಷನರ್ ಮಿಶ್ರಾ ವಜಾ
ಈ ಕಾಯಿದೆಯನ್ನು ತಂದ ಹಿನ್ನೆಲೆಯೇನು ?
ಬಾಬರಿ ಮಸೀದಿ ಇರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ಮೇಲಿದ್ದ ಮಂದಿರವನ್ನು ಕೆಡವಿ ಮುಸ್ಲಿಂ ದಾಳಿಕೋರ ಬಾಬರ್ ನಿರ್ಮಿಸಿದ್ದ ಬಾಬರಿ ಮಸೀದಿಯ ಭೂಮಿಯ ಹಕ್ಕು ಹಿಂದೂಗಳಿಗೆ ಸೇರಿದ್ದು ಎಂದು ಪ್ರತಿಪಾದಿಸಿ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ದೇಶವ್ಯಾಪಿ ರಥಯಾತ್ರೆ ಪ್ರಾರಂಭಿಸಿದಾಗ ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಸಂಪುಟದಲ್ಲಿ ಗೃಹ ಸಚಿವ ಶಂಕರರಾವ್ ಚವಾಣ್ ಅವರು ಮಂಡಿಸಿದ ವಿಧೇಯಕದಿಂದ ಈ ಕಾಯಿದೆಯನ್ನು ತರಲಾಯಿತು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಸ್ಥಳ ಭಾರತದ ಅಸ್ಮಿತೆಯಾಗಿರುವ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಜನ್ಮಸ್ಥಳ ಎಂಬುದನ್ನು ಹಲವಾರು ಹಿಂದೂ ಸಂಘಟನೆಗಳು ಮತ್ತು ಬಿಜೆಪಿಯು ಕೂಡ ಅಂದೇ ಪ್ರತಿಪಾದಿಸಿದ್ದವು. ಇದನ್ನು ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣ ಎಂದು ಕರೆಯಲಾಯಿತು. ತರುವಾಯ 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಕಟ್ಟಡ ಧ್ವಂಸಗೊಂಡಿತು.
ಬಿಹಾರದಲ್ಲಿ ಆಡ್ವಾಣಿಯವರ ಬಂಧನ ಮತ್ತು ಉತ್ತರ ಪ್ರದೇಶದಲ್ಲಿ ಕರಸೇವಕರ ಮೇಲೆ ಗುಂಡಿನ ದಾಳಿ ನಡೆಸಲು ಮುಲಾಯಂ ಸಿಂಗ್ ಸರಕಾರವು ಆದೇಶಿಸಿದ ಹಿನ್ನೆಲೆಯಲ್ಲಿ, ಚವಾಣ್ ಅವರು ಈ ವಿಧೇಯಕ ಮೂಲಕ ಕೋಮುಗಲಭೆಯ ಘಟನೆಗಳನ್ನು ತಡೆಯಲು ಪ್ರಯತ್ನಿಸಿದರು.
1991ರ ಪೂಜಾ ಸ್ಥಳಗಳ ಕಾಯಿದೆಗೆ ತಗಾದೆ
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು 1991ರ ಪೂಜಾ ಸ್ಥಳಗಳ ಕಾಯಿದೆಯನ್ನು 2021ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಈ ಕಾನೂನು ಭಾರತದ ಸಂವಿಧಾನವು ರೂಪಿಸಿರುವ ಜಾತ್ಯತೀತ ತತ್ವದ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.
ಈ ಕಾಯಿದೆಯ ಮೂಲಕ ʼಕೇಂದ್ರವು ಧಾರ್ಮಿಕ ಸ್ಥಳಗಳು ಮತ್ತು ಯಾತ್ರಾಸ್ಥಳಗಳ ಮೇಲಿನ ಅಕ್ರಮ ಅತಿಕ್ರಮಣದ ವಿರುದ್ಧ ಪರಿಹಾರಗಳನ್ನು ನಿರ್ಬಂಧಿಸಿದೆ. ಇದರಿಂದಾಗಿ ಈಗ ಹಿಂದೂಗಳು, ಜೈನರು, ಬೌದ್ಧರು, ಸಿಖ್ಖರು ಆರ್ಟಿಕಲ್ 226ರ ಅಡಿಯಲ್ಲಿ ಮೊಕದ್ದಮೆ ಹೂಡಲು ಅಥವಾ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಆದ್ದರಿಂದ, ಆರ್ಟಿಕಲ್ 25-26ರ ಅನ್ವಯ ದೇವಾಲಯದ ದತ್ತಿಗಳನ್ನು ಒಳಗೊಂಡಂತೆ ಪೂಜೆ ಮತ್ತು ತೀರ್ಥಯಾತ್ರೆ ಕೈಗೊಳ್ಳುವುದು ಮತ್ತು ಪೂಜಾ ಸ್ಥಳಗಳನ್ನು ಪುನಃಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಆಕ್ರಮಣಕಾರರ ಅಕ್ರಮ, ಅನಾಗರಿಕ, ಘೋರ ಕೃತ್ಯಗಳು ಶಾಶ್ವತವಾಗಿ ಮುಂದುವರಿಯುತ್ತವೆ’ ಎಂದು ಉಪಾಧ್ಯಾಯ ಅವರ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
“ಮಥುರಾದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಳವನ್ನು ಮರಳಿ ಪಡೆಯಲು” ವಿಚಾರಣಾ ನ್ಯಾಯಾಲಯದಲ್ಲಿ ನಡೆಯುವ ಕಾನೂನು ಹೋರಾಟದ ಮೇಲೆ ಈ ಕಾಯಿದೆಯ ನಿರ್ಬಂಧಗಳು ನೇರ ಪರಿಣಾಮ ಬೀರುವುದರಿಂದ ಅದಕ್ಕೆ ಸಂಬಂಧಿಸಿದಂತೆ ಉಪಾಧ್ಯಾಯರು ಅರ್ಜಿ ಸಲ್ಲಿಸಿದ್ದರು.
ಒಂದು ಸ್ಥಳದ ಧಾರ್ಮಿಕ ಸ್ವರೂಪವನ್ನು ನಿರ್ಧರಿಸಲು ಆಗಸ್ಟ್ 15, 1947ರ “ಅನಿಯಂತ್ರಿತ” ಕಟ್ ಆಫ್ ದಿನಾಂಕವನ್ನು ನಿಗದಿ ಪಡಿಸಿರುವುದು ಈ ಕಾಯ್ದೆಯ ಕುರಿತಾದ ಮುಖ್ಯ ಆಕ್ಷೇಪಣೆಯಾಗಿದೆ. ಈ ಕಾಯ್ದೆಯು ನ್ಯಾಯಾಂಗ ಪರಾಮರ್ಶೆಯನ್ನು ತಡೆಯುವುದರಿಂದ ಇದು ಸಂವಿಧಾನಬಾಹಿರ ಕಾನೂನು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ಕೊಳದಲ್ಲಿ ಶಿವಲಿಂಗ, ಮಂದಿರ ಪರ ಇನ್ನೊಂದು ಪುರಾವೆ?
ಕಾಯಿದೆಯ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು ?
ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ತನ್ನ 2019ರ ಅಯೋಧ್ಯೆಯ ತೀರ್ಪಿನಲ್ಲಿ ಪೂಜಾ ಸ್ಥಳಗಳ ಕಾಯಿದೆಯನ್ನು “ಭಾರತೀಯ ರಾಜಕೀಯದ ಜಾತ್ಯತೀತ ವೈಶಿಷ್ಟ್ಯಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಶಾಸನ ಸಾಧನವಾಗಿದೆ, ಇದು ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದಾಗಿದೆ” ಎಂದು ಶ್ಲಾಘಿಸಿದೆ.