Site icon Vistara News

ವಿಸ್ತಾರ Explainer: ಏನಿದು ಎಚ್‌3ಎನ್‌2 ವೈರಸ್?‌ ಲಕ್ಷಣಗಳು ಯಾವವು? ಮುನ್ನೆಚ್ಚರಿಕೆ ಕ್ರಮ ಏನು?

H3N2

H3N2

ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ದೇಶ ಹೊರಬರುತ್ತಿರುವ, ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಎಚ್‌3ಎನ್‌2 ಇನ್‌ಫ್ಲುಯೆಂಜಾ ಸೋಂಕು ಜನರನ್ನು ಭೀತಿಗೊಳಗಾಗಿಸಿದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಒಬ್ಬರು ಹಾಗೂ ಹರಿಯಾಣದಲ್ಲಿ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಎಚ್‌3ಎನ್‌2 ಸೋಂಕಿನ 90 ಪ್ರಕರಣಗಳಿವೆ ಎಂಬುದಾಗಿ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಸೋಂಕಿನ ಪರಿಣಾಮ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದೆ. ಹಾಗಾದರೆ, ಏನಿದು ಎಚ್‌3ಎನ್‌2 ವೈರಸ್‌? ಇದರ ಪರಿಣಾಮ ಏನು? ಲಕ್ಷಣಗಳು ಯಾವವು ಎಂಬುದರ ಮಾಹಿತಿ ಹೀಗಿದೆ.

ಏನಿದು ಎಚ್‌3ಎನ್‌2?

ಎಚ್‌3ಎನ್‌2 ಸೋಂಕು ಇನ್‌ಫ್ಲುಯೆಂಜಾ ಎ ವೈರಸ್‌ನ ಉಪ ತಳಿಯಾಗಿದೆ. ವಯಸ್ಸಾದವರು ಹಾಗೂ ಮಕ್ಕಳಲ್ಲಿ ಇದು ಜಾಸ್ತಿ ಕಾಣಿಸುತ್ತಿದೆ. ಗಾಳಿಯಿಂದ ಹರಡುವ ಸೋಂಕು ಇದಾಗಿದ್ದು, ಜ್ವರ ಸೇರಿ ಹಲವು ರೀತಿಯಲ್ಲಿ ಮನುಷ್ಯನನ್ನು ಬಾಧಿಸುತ್ತದೆ. ಆರ್ಥೋಮಿಕ್ಸೊವೈರಿಡೆ ಪ್ರಭೇದಕ್ಕೆ ಸೇರಿರುವ (Orthomyxoviridae) ಸೋಂಕು ಮೊದಲ ಬಾರಿಗೆ 1968ರಲ್ಲಿ ಪತ್ತೆಯಾಗಿದೆ. ಆದರೆ, ಕೆಲ ತಿಂಗಳಿಂದ ಇದು ಭಾರತದಲ್ಲಿ ಹೆಚ್ಚು ಬಾಧಿಸುತ್ತಿದೆ. ಈಗ ಜನ ಸೋಂಕಿಗೆ ಬಲಿಯಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ.

ಇದೆಷ್ಟು ಅಪಾಯಕಾರಿ?

ಎಚ್‌3ಎನ್‌2 ವೈರಸ್‌ ಇತ್ತೀಚೆಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಸೋಂಕಿತರಲ್ಲಿ ಹೆಚ್ಚಿನ ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಇದಿನ್ನೂ ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಮ್ಮು, ಸೀನುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕು ತಗುಲಿದವರಲ್ಲಿ ಶೇ.92ರಷ್ಟು ಜನರಿಗೆ ಜ್ವರ, ಶೇ.86ರಷ್ಟು ಮಂದಿಗೆ ಕೆಮ್ಮು, ಶೇ.27ರಷ್ಟು ಸೋಂಕಿತರಿಗೆ ಉಸಿರಾಟದ ತೊಂದರೆ ಕಾಣಿಸಿದೆ. ಈ ಸೋಂಕು 50 ವರ್ಷ ದಾಟಿದವರು ಹಾಗೂ 15 ವರ್ಷದೊಳಗಿನವರಿಗೆ ಹೆಚ್ಚು ಬಾಧಿಸುತ್ತಿದೆ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ವರದಿ ತಿಳಿಸಿದೆ.

ಐಸಿಎಂಆರ್‌ ಸೂಚನೆಗಳು ಹೀಗಿವೆ

ಲಕ್ಷಣಗಳು ಯಾವುವು?

ಜ್ವರ, ಕೆಮ್ಮು, ನೆಗಡಿ ಸೇರಿ ಎಚ್‌3ಎನ್‌2 ಹಲವು ಲಕ್ಷಣಗಳನ್ನು ಹೊಂದಿದೆ. ಮೈ ಕೈ ನೋವು, ತಲೆನೋವು, ಅತಿಯಾದ ಸುಸ್ತು, ವಾಂತಿಯಾಗುವುದು, ಭೇದಿ, ಪದೇಪದೆ ಸೀನುವುದು ಸೋಂಕಿನ ಲಕ್ಷಣಗಳಾಗಿವೆ. ಕೆಲವೊಂದು ಸಲ ನ್ಯುಮೋನಿಯಾ, ಉಸಿರಾಟದ ತೊಂದರೆಯಂತಹ ಸಮಸ್ಯೆಯೂ ಎದುರಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಒಂದು ವಾರದವರೆಗೆ ಲಕ್ಷಣಗಳು ಇರಲಿದ್ದು, ಜನರಿಗೆ ಈ ಲಕ್ಷಣಗಳು ಕಂಡುಬಂದ ಕೂಡಲೇ ಆಸ್ಪತ್ರೆಗೆ ತೆರಳಬೇಕು ಎಂದು ಸೂಚಿಸಿದ್ದಾರೆ.

ಸೋಂಕು ನಿಗ್ರಹ ಹೇಗೆ?

ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಎಚ್‌3ಎನ್‌2 ಸೋಂಕಿನಿಂದ ಮುಕ್ತರಾಗಬಹುದಾಗಿದೆ. ಒಸೆಲ್ಟಾಮಿವಿರ್‌ (Oseltamivir), ಜನಾಮಿವಿರ್‌ (Zanamivir), ಪೆರಾಮಿವಿರ್‌ (Peramivir) ಹಾಗೂ ಬೊಲಾಕ್ಸೇವಿರ್‌ (Bolaxavir) ಮಾತ್ರೆಗಳನ್ನು ಸೇವಿಸಬಹುದಾಗಿದೆ. ಆದರೆ, ವೈದ್ಯರು ಸೂಚಿಸಿದರೆ ಮಾತ್ರೆ ಈ ಮಾತ್ರಗಳನ್ನು ಮೆಡಿಕಲ್‌ ಶಾಪ್‌ಗಳಲ್ಲಿ ನೀಡಲಾಗುತ್ತದೆ. ಹಾಗಾಗಿ, ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ತಪಾಸಣೆ ಮಾಡಿಸಿ, ವೈದ್ಯರ ಸೂಚನೆ ಮೇರೆಗೆ ಈ ಮಾತ್ರೆಗಳನ್ನು ಸೇವಿಸಬಹುದಾಗಿದೆ.

ಯಾರೆಲ್ಲ ಹೆಚ್ಚಿನ ಜಾಗ್ರತರಾಗಿರಬೇಕು?

ಐದು ವರ್ಷಕ್ಕಿಂತ ಕಡಿಮೆ ಹಾಗೂ 65 ವರ್ಷ ದಾಟಿದವರು ಹೆಚ್ಚಿನ ಪ್ರಮಾಣದಲ್ಲಿ ಜಾಗ್ರತರಾಗಿ ಇರಬೇಕು. ಸುದೀರ್ಘ ಅವಧಿಯಿಂದ ಅಸ್ತಮಾ, ಸಕ್ಕರೆ ಕಾಯಿಲೆ, ಹೃದ್ರೋಗ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ಷಿಪ್ರವಾಗಿ ಎಚ್‌3ಎನ್‌2 ಸೋಂಕು ತಗುಲುವ ಸಾಧ್ಯತೆ ಇದೆ. ಹಾಗಾಗಿ, ಇವರು ಸಾಧ್ಯವಾದಷ್ಟು ಜನಸಂದಣಿ ಇರುವ ಕಡೆ ತೆರಳದೆ, ಮದುವೆಯಂತಹ ಸಮಾರಂಭಗಲ್ಲಿ ಭಾಗವಹಿಸದೆ, ಮನೆಯಲ್ಲಿಯೇ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: H3N2 Virus: ಎಚ್‌3ಎನ್‌2ಗೆ ಮೊದಲ ಬಲಿ ರಾಜ್ಯದಲ್ಲಿ; ಕೋವಿಡ್‌ ಮೊದಲ ಸಾವು ನೆನಪಿಸಿದ ವೈರಸ್

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಕೊರೊನಾದಂರೆ ಎಚ್‌3ಎನ್‌2 ಕೂಡ ಸಾಂಕ್ರಾಮಿಕ ವೈರಸ್‌ ಆದ ಕಾರಣ ಜನರು ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.
-ಆಗಾಗ ಕೈ ತೊಳೆಯಬೇಕು. ಅದರಲ್ಲೂ, ಊಟ ಮಾಡುವ ಮೊದಲು ಸಾಬೂನು ಹಚ್ಚಿ ಕೈ ತೊಳೆಯಬೇಕು.
-ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು.
-ಆಗಾಗ ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳಬಾರದು
– ಹೆಚ್ಚು ನೀರು ಕುಡಿಯುವುದು
– ಸ್ಯಾನಿಟೈಸರ್‌ ಬಳಸುವುದು

Exit mobile version