ನವದೆಹಲಿ: ಪ್ರತಿ ವರ್ಷ ಮಾರ್ಚ್ 20 ಅಂತಾರಾಷ್ಟ್ರೀಯ ಸಂತೋಷ ದಿನವಾಗಿ ಆಚರಿಸಲಾಗುತ್ತದೆ. ಇದೇ ದಿನ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್(Happiest Countries in the World) ಕೂಡ ಬಿಡುಗಡೆ ಮಾಡಲಾಗುತ್ತದೆ. ಅದೇ ರೀತಿ, ಪ್ರಸಕ್ತ ಸಾಲಿನ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಫಿನ್ಲೆಂಡ್ ಅತ್ಯಂತ ಸಂತೋಷವಾಗಿರುವ ರಾಷ್ಟ್ರ ಎಂದು ಘೋಷಿಸಲಾಗಿದೆ. ಸತತ ಆರನೇ ವರ್ಷವೂ ಪಟ್ಟಿಯಲ್ಲಿ ಫಿನ್ಲೆಂಡ್(Finland) ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಂದ ಹಾಗೆ, ಈ ಪಟ್ಟಿಯಲ್ಲಿ ಭಾರತವು(India) 126ನೇ ಸ್ಥಾನದಲ್ಲಿದೆ. ಕೊನೆಯಲ್ಲಿ ಅಂದರೆ 137ನೇ ಸ್ಥಾನದಲ್ಲಿ ಅಫಘಾನಿಸ್ತಾನ(Afghanistan) ರಾಷ್ಟ್ರವಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ನೆಟ್ವರ್ಕ್ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಪ್ರಕಟಿಸಿದೆ. ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಫಿನ್ಲೆಂಡ್ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ನಂತರ ಎರಡು ಮತ್ತು ಮೂರು ಸ್ಥಾನಗಳಲ್ಲಿ ಕ್ರಮವಾಗಿ ಡೆನ್ಮಾರ್ಕ್ ಮತ್ತು ಐಸ್‌ಲ್ಯಾಂಡ್ ರಾಷ್ಟ್ರಗಳಿವೆ.
ಸಂತೋಷ ರಾಷ್ಟ್ರ ಘೋಷಿಸಲು ಇರುವ ಮಾನದಂಡ ಯಾವುದು?
ಆದಾಯ, ಆರೋಗ್ಯ, ಭಾವನಾತ್ಮಕ ಬೆಂಬಲ, ಆಯ್ಕೆಯ ಸ್ವಾತಂತ್ರ್ಯ, ಉದಾರ್ಯತೆ, ಶೂನ್ಯ ಭ್ರಷ್ಟಾಚಾರದಂಥ ಸಂಗತಿಗಳನ್ನು ಪರಿಗಣಿಸಿ ಅತಿ ಹೆಚ್ಚು ಸಂತೋಷ ಇರುವ ರಾಷ್ಟ್ರವನ್ನು ಪಟ್ಟಿ ಮಾಡಲಾಗುತ್ತದೆ. ಅದರ ಆಧಾರದ ಮೇಲೆ, 2020-2022 ರ ನಡುವೆ ಮೂರು ವರ್ಷಗಳ ಸರಾಸರಿಯಲ್ಲಿ ದೇಶಗಳನ್ನು ಮೇಲಿನಿಂದ ಕೆಳಕ್ಕೆ ಶ್ರೇಣೀಕರಿಸಲಾಗುತ್ತದೆ.
ಭಾರತದ ಪರಿಸ್ಥಿತಿ ಹೇಗಿದೆ?
ಟಾಪ್ ಟೆನ್ ಪಟ್ಟಿಯಲ್ಲಿ ಇಸ್ರೇಲ್ ಮತ್ತು ನ್ಯೂಜಿಲೆಂಡ್ ಮಾತ್ರ ಯುರೋಪಿಯನೇತರ ರಾಷ್ಟ್ರಗಳಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಸ್ರೇಲ್ ಐದು ಹೆಜ್ಜೆಗಳನ್ನು ಮೇಲಕ್ಕೆ ಏರಿದೆ. ಇನ್ನು ಭಾರತವು 126ನೇ ಸ್ಥಾನದಲ್ಲಿದೆ. ಸಂತೋಷದ ವಿಷಯದಲ್ಲಿ ನಮ್ಮ ನೆರೆಯ ರಾಷ್ಟ್ರಗಳಾದ ನೇಪಾಳ, ಚೀನಾ, ಪಾಕಿಸ್ತಾನಗಳು ನಮಗಿಂತಲೂ ಮುಂದಿವೆ. ಅಂದರೆ, ನೇಪಾಳ 78, ಚೀನಾ 64 ಮತ್ತು ಪಾಕಿಸ್ತಾನ 108ನೇ ಸ್ಥಾನದಲ್ಲಿವೆ. ಅಷ್ಟೇ ಯಾಕೆ, ಬಾಂಗ್ಲಾದೇಶ ಕೂಡ ಭಾರತಕ್ಕಿಂತ 5 ಪಾಯಿಂಟ್ ಮುಂದಿದೆ.
ಇದನ್ನೂ ಓದಿ: ಅಫಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳ ದಮನ: ವಿಶ್ವ ಸಂಸ್ಥೆ
ಇನ್ನು ಪಟ್ಟಿಯಲ್ಲಿ ಕೊನೆಯಲ್ಲಿ ಇರುವುದು ಅಫಘಾನಿಸ್ತಾನ. ವರದಿಯ ಪ್ರಕಾರ 137ನೇ ಸ್ಥಾನದಲ್ಲಿರುವ ಅಫಘಾನಿಸ್ತಾನ ಅತ್ಯಂತ ಅಸಂತೋಷ ರಾಷ್ಟ್ರವಾಗಿದೆ. ಉಕ್ರೇನ್ 92ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಪ್ರದರ್ಶನ ತೀರಾ ಹೇಳಿಕೊಳ್ಳುವಂತಿಲ್ಲ.