Site icon Vistara News

Happiest Country: 2024ರಲ್ಲಿ ಅತಿ ಹೆಚ್ಚು ಸಂತೋಷದ ದೇಶವಿದು! ಭಾರತಕ್ಕೆ ಎಷ್ಟನೇ ಸ್ಥಾನ ನೋಡಿ

ಹೆಲ್ಸಿಂಕಿ: ಬುಧವಾರ ಪ್ರಕಟವಾದ ವಿಶ್ವಸಂಸ್ಥೆ ಪ್ರಾಯೋಜಿತ ವಾರ್ಷಿಕ `ವಿಶ್ವ ಸಂತೋಷದ ವರದಿ’ಯಲ್ಲಿ (World happiness report) ಫಿನ್‌ಲ್ಯಾಂಡ್ (Finland) ಸತತ ಏಳನೇ ವರ್ಷವೂ “ವಿಶ್ವದ ಅತ್ಯಂತ ಸಂತೋಷದಾಯಕ ದೇಶ’ವಾಗಿ (World’s Happiest Country, Happiest nation) ಉಳಿದಿದೆ.

ಸಂತೋಷ ಸೂಚ್ಯಂಕದಲ್ಲಿ (Happiness Index) ಭಾರತದ ಸ್ಥಾನ ಏನೂ ಬದಲಾಗಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ನಾವು 126ನೇ ಸ್ಥಾನದಲ್ಲಿದ್ದೇವೆ. ನಾರ್ಡಿಕ್ ದೇಶಗಳು 10 ಅತ್ಯಂತ ಹರ್ಷಚಿತ್ತ ದೇಶಗಳಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಡೆನ್ಮಾರ್ಕ್, ಐಸ್‌ಲ್ಯಾಂಡ್ ಮತ್ತು ಸ್ವೀಡನ್‌ಗಳು ಫಿನ್ಲೆಂಡ್‌ಗಿಂತ ಹಿಂದುಳಿದಿವೆ.

2020ರಲ್ಲಿ ತಾಲಿಬಾನ್ ನಿಯಂತ್ರಣವನ್ನು ಮರಳಿ ಪಡೆದ ನಂತರ ಮಾನವೀಯ ದುರಂತದಿಂದ ಪೀಡಿತವಾಗಿರುವ ಅಫ್ಘಾನಿಸ್ತಾನವು ಸಮೀಕ್ಷೆಗೆ ಒಳಪಟ್ಟ 143 ದೇಶಗಳಲ್ಲಿ ಅತ್ಯಂತ ಕೆಳಭಾಗದಲ್ಲಿದೆ. ಒಂದು ದಶಕದ ಹಿಂದೆ ಸಂತೋಷದ ವರದಿಯನ್ನು ಮೊದಲ ಬಾರಿಗೆ ಪ್ರಕಟಿಸಿದಾಗ ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳು ಮೊದಲ 30 ಸಂತೋಷದ ರಾಷ್ಟ್ರಗಳಲ್ಲಿ ಇರಲಿಲ್ಲ. ಈಗ ಕ್ರಮವಾಗಿ 23 ಮತ್ತು 24ನೇ ಸ್ಥಾನದಲ್ಲಿವೆ.

ಅಗ್ರ 20 ದೇಶಗಳಲ್ಲಿ ಕೋಸ್ಟರಿಕಾ ಮತ್ತು ಕುವೈತ್ 12 ಮತ್ತು 13ರಲ್ಲಿವೆ. ವಿಶ್ವದ ಯಾವುದೇ ದೊಡ್ಡ ದೇಶಗಳ ಹೆಸರನ್ನು ಈ 20ರ ಅಗ್ರ ಪಟ್ಟಿ ಒಳಗೊಂಡಿಲ್ಲ. ಟಾಪ್ 10 ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಮಾತ್ರ 1.5 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಟಾಪ್ 20ರಲ್ಲಿ ಕೆನಡಾ ಮತ್ತು ಯುಕೆ ಮಾತ್ರ 3 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ.

ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್‌ನಲ್ಲಿ 2006-10ರಿಂದ ಸಂತೋಷದ ತೀವ್ರ ಕುಸಿತವನ್ನು ಗುರುತಿಸಲಾಗಿದೆ. ಆದರೆ ಪೂರ್ವ ಯುರೋಪಿಯನ್ ದೇಶಗಳಾದ ಸೆರ್ಬಿಯಾ, ಬಲ್ಗೇರಿಯಾ ಮತ್ತು ಲಾಟ್ವಿಯಾಗಳು ಅತಿದೊಡ್ಡ ಹೆಚ್ಚಳವನ್ನು ವರದಿ ಮಾಡಿವೆ.

ಸಂತೋಷದ ಶ್ರೇಯಾಂಕವು ವ್ಯಕ್ತಿಗಳ ಜೀವನ ತೃಪ್ತಿಯ ಸ್ವಯಂ-ಮೌಲ್ಯಮಾಪನವನ್ನು ಆಧರಿಸಿದೆ. ಜೊತೆಗೆ GDP ತಲಾವಾರು, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರವನ್ನು ಆಧರಿಸಿದೆ.

ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ಸಂತೋಷದ ಸಂಶೋಧಕ ಜೆನ್ನಿಫರ್ ಡಿ ಪಾವೊಲಾ ಅವರು ಹೇಳುವ ಪ್ರಕಾರ, ಫಿನ್‌ಲ್ಯಾಂಡ್‌ ಪ್ರಜೆಗಳು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಮತ್ತು ಆರೋಗ್ಯಕರ ಕೆಲಸ- ಜೀವನ ಸಮತೋಲನ ಹೊಂದಿದ್ದು, ಇವು ಅವರ ಜೀವನ ತೃಪ್ತಿಗೆ ಪ್ರಮುಖ ಕೊಡುಗೆಯಾಗಿವೆ.

ಇದರ ಜೊತೆಯಲ್ಲಿ, ಯಶಸ್ವಿ ಜೀವನ ಎಂದರೇನು ಎಂಬುದರ ಕುರಿತು ಹೆಚ್ಚು ಸಾಧಿಸಬಹುದಾದ ತಿಳುವಳಿಕೆಯನ್ನು ಫಿನ್ಸ್‌ ಹೊಂದಿದ್ದಾರೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಶಸ್ಸನ್ನು ಸಾಮಾನ್ಯವಾಗಿ ಹಣಕಾಸಿನ ಲಾಭದೊಂದಿಗೆ ಸಮೀಕರಿಸಲಾಗುತ್ತದೆ. ಆದರೆ ಫಿನ್ಸ್‌ ಕಲ್ಪನೆ ಬೇರೆ. ಬಲಿಷ್ಠ ಕಲ್ಯಾಣ ಸಮಾಜ, ಸರ್ಕಾರಿ ಅಧಿಕಾರಿಗಳ ಮೇಲಿನ ನಂಬಿಕೆ, ಕಡಿಮೆ ಮಟ್ಟದ ಭ್ರಷ್ಟಾಚಾರ, ಉಚಿತ ಆರೋಗ್ಯ ಮತ್ತು ಶಿಕ್ಷಣ ಇವರ ನಂಬಿಕೆಯಲ್ಲಿ ಪ್ರಮುಖ. ಫಿನ್ನಿಷ್ ಸಮಾಜ ನಂಬಿಕೆ, ಸ್ವಾತಂತ್ರ್ಯ ಮತ್ತು ಉನ್ನತ ಮಟ್ಟದ ಸ್ವಾಯತ್ತತೆಯ ಪ್ರಜ್ಞೆಯಿಂದ ವ್ಯಾಪಿಸಿದೆ ಎನ್ನುತ್ತಾರೆ ಪಾವೊಲಾ ಹೇಳಿದರು.

ಈ ವರ್ಷದ ವರದಿಯ ಪ್ರಕಾರ ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿ ಕಿರಿಯ ಪೀಳಿಗೆಗಳು ತಮ್ಮ ಹಿಂದಿನವರಿಗಿಂತ ಹೆಚ್ಚು ಸಂತೋಷದಿಂದಿದ್ದಾರಂತೆ. ಆದರೆ ಕೆಲವಡೆ ಹಾಗಿಲ್ಲ. ಉತ್ತರ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ, 2006-10ರಿಂದ ನಡುವೆ ಜನಿಸಿದ 30 ವರ್ಷದೊಳಗಿನ ವಯೋಗುಂಪುಗಳ ಪ್ರಮಾಣ ಹಾಗೂ ಸಂತೋಷ ನಾಟಕೀಯವಾಗಿ ಕುಸಿದಿದೆ. ಇಲ್ಲಿ ಹಳೆಯ ತಲೆಮಾರುಗಳು ಯುವಕರಿಗಿಂತ ಹೆಚ್ಚು ಸಂತೋಷವಾಗಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ, ಎಲ್ಲಾ ವಯಸ್ಸಿನವರಲ್ಲಿ ಸಂತೋಷವು ಗಣನೀಯವಾಗಿ ಹೆಚ್ಚಾಗಿದೆ. ಯುರೋಪ್ ಹೊರತುಪಡಿಸಿ ಪ್ರತಿಯೊಂದು ಪ್ರದೇಶದಲ್ಲಿಯೂ ಸಂತೋಷದ ಅಸಮಾನತೆ ಹೆಚ್ಚಾಗಿದೆ.

ಇದನ್ನೂ ಓದಿ: Happiest Countries in the World: ಫಿನ್ಲೆಂಡ್‌ಗೆ ಅಗ್ರಸ್ಥಾನ, ಅಫಘಾನಿಸ್ತಾನಕ್ಕೆ ಕೊನೆ ಸ್ಥಾನ, ಭಾರತದ ಸ್ಥಾನ ಯಾವುದು?

Exit mobile version