ನಾಗ್ಪುರ್, ಮಹಾರಾಷ್ಟ್ರ: 1999ರ ಕಾರ್ಗಿಲ್ ಯುದ್ಧದಲ್ಲಿ (Kargil War) ಲ್ಯಾನ್ಸ್ ನಾಯಕ್ ಕೃಷ್ಣಾಜೀ ಸಮ್ರಿತ್ ಅವರು ಹುತಾತ್ಮರಾಗಿದ್ದರು. ಅವರಿಗೊಂದು ಆಸೆಯಿತ್ತು. ತಮ್ಮ ಮಗ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕೆಂಬ ಕನಸಿತ್ತು. ಮಹಾರಾಷ್ಟ್ರದ ಪುಲ್ಗಾಂವ್‌ನ ಕೃಷ್ಣಾಜೀ ಹುತಾತ್ಮರಾಗುವ ಹೊತ್ತಿಗೆ ಅವರ ಹಿರಿಯ ಮಗನಿಗೆ ಆಗ 2.5 ವರ್ಷ. ಕೃಷ್ಣಾಜೀ ಹುತಾತ್ಮರಾದ 45 ದಿನಗಳ ಬಳಿಕ ಕಿರಿಯ ಮಗ ಪ್ರಜ್ವಲ್ ಜನಿಸಿದ. ಈಗ ತಂದೆಯ ಆಸೆಯನ್ನು ಹಿರಿಯ ಮಗ ಈಡೇರಿಸದಿದ್ದರೂ, ಅವರ ಕಿರಿಯ ಪುತ್ರ ಪ್ರಜ್ವಲ್ ನೆರವೇರಿಸುತ್ತಿದ್ದಾರೆ.
ಹೌದು, 23 ವರ್ಷದ ಪ್ರಜ್ವಲ್ ಸೇನೆಯನ್ನು ಸೇರುವುದಕ್ಕಾಗಿ, ಡೆಹ್ರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿ(IMA)ಯನ್ನು ಜೂನ್ ಮೊದಲ ವಾರದಲ್ಲಿ ಸೇರ್ಪಡೆಯಾಗಲಿದ್ದಾರೆ. ಕೃಷ್ಣಾಜೀ ಅವರ ಹಿರಿಯ ಪುತ್ರ ಕುನಾಲ್ ಅವರು ಸೇನೆಗೆ ಬದಲಾಗಿ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಂದೆಯ ಆಸೆಯನ್ನು ಪ್ರಜ್ವಲ್ ನೆರವೇರಿಸಲು ಹೊರಟಿದ್ದಾರೆ. ಕುಟುಂಬದವರು ಪ್ರಜ್ವಲ್ ಆಸೆಗೆ ನೀರೆರದು ಪೋಷಿಸಿದ್ದಾರೆ.
ಪ್ರಜ್ವಲ್ ಅವರಿಗೆ ತಮ್ಮ ಗುರಿಯನ್ನು ಸಾಧಿಸುವುದು ತೀರಾ ಸರಳವಾಗಿರಲಿಲ್ಲ. ಅವರು ಒಂಬತ್ತು ಬಾರಿ ಸೇವಾ ಆಯ್ಕೆ ಮಂಡಳಿ ಸಂದರ್ಶನವನ್ನು ಎದುರಿಸಬೇಕಾಯಿತು. ಈ ಬಾರಿ ಅವರದ್ದು ಕೊನೆಯ ಪ್ರಯತ್ನವಾಗಿತ್ತು. ಒಂದೊಮ್ಮೆ ಅಕಾಡೆಮೆ ಸೇರುವುದು ವಿಫಲವಾದರೆ, ಬ್ಯಾಕ್‌ಅಪ್ ಪ್ಲ್ಯಾನ್ ಆಗಿ, ಪ್ರಜ್ವಲ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಎಟಿ) ಪಾಸು ಮಾಡಿಕೊಂಡಿದ್ದರು. ಇದರಿಂದಾಗಿ ಅವರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(IIM) ಇಂಧೋರ್ ಮತ್ತು ಕೋಯಿಕ್ಕೋಡ್‌ನಿಂದ ಆಫರ್ ಕೂಡಾ ಬಂದಿತ್ತು. ಅಂತಿಮವಾಗಿ ಐಐಎಂ ಬದಲಿಗೆ ಐಎಂಎಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು
ತಂದೆಯ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಜ್ವಲ್ ಪ್ರತಿಷ್ಠಿತ ಐಐಎಂ ಕಾಲೇಜ್‌ಗಳನ್ನು ತ್ಯಾಗ ಮಾಡಿ, ಭಾರತೀಯ ಸೇನಾ ಅಕಾಡೆಮಿ ಸೇರಲು ರೆಡಿಯಾಗಿದ್ದಾರೆ. ಬಹುಶಃ ಅವರ ಹಿರಿಯ ಸಹೋದರ ಸೇನೆ ಸೇರಲು ಮನಸ್ಸು ಮಾಡಿದ್ದರೆ, ಪ್ರಜ್ವಲ್ ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರೇನೋ. ಏನೇ ಇರಲಿ. ಪ್ರಜ್ವಲ್ ಅವರ ತ್ಯಾಗಕ್ಕೆ, ತಂದೆಯ ಮೇಲಿನ ಪ್ರೀತಿಗೆ ನಾವು ಸಲಾಮ್ ಮಾಡಲೇಬೇಕು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.