Site icon Vistara News

ಗದಾಧಾರಿ V/S ಘಂಟಾಧಾರಿ ಹಿಂದುತ್ವ: ಬಿಜೆಪಿ ವಿರುದ್ಧ ಹರಿಹಾಯ್ದ ಮಹಾರಾಷ್ಟ್ರ CM ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಇದೀಗ ಯಾರ ಹಿಂದುತ್ವ ಶ್ರೇಷ್ಠ ಎಂಬ ಚರ್ಚೆ ಬಿರುಸಾಗಿದೆ. ಎರಡು ದಶಕಗಳಿಗೂ ಹೆಚ್ಚುಕಾಲ ಒಟ್ಟಿಗೆ ಇದ್ದ ಹಾಗೂ ಹಿಂದುತ್ವವನ್ನೇ ಮುಖ್ಯವಾಗಿಸಿಕೊಂಡಿದ್ದ ಬಿಜೆಪಿ ಹಾಗೂ ಶಿವಸೇನೆ ನಡುವೆ ಇದೀಗ ಗದಾಧಾರಿ V/S ಘಂಟಾಧಾರಿ ಹಿಂದುತ್ವದ ಪೈಪೋಟಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಹಿಜಾಬ್‌ ವಿವಾದ ಇನ್ನೇನು ತಣ್ಣಗಾಯಿತು ಎನ್ನುವ ವೇಳೆಗೆ ಮಸೀದಿಗಳಲ್ಲಿ ಅಜಾನ್‌ ವಿವಾದ ಗೋಚರಿಸಿತು. ಅನೇಕ ವರ್ಷಗಳಿಂದ ಗುಪ್ತಗಾಮಿಯಂತಿದ್ದ ಈ ವಿವಾದ, ಹಿಜಾಬ್‌ ಕಾರಣಕ್ಕಾಗಿಯೇ ಮುನ್ನೆಲೆಗೆ ಬಂದಿತು. ಈ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದು, ರಾಜಕೀಯ ವಾಗ್ವಾದಗಳಿಗೂ ಕಾರಣವಾಯಿತು. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಧ್ವನಿವರ್ಧಕಗಳ ಮೂಲಕ ಆಜಾನ್‌ ಕೂಗುವುದು ತಮಗೆ ತೊಂದರೆಯಾಗುತ್ತಿದೆ ಹಾಗೂ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಹಿಂದು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು. ಆಜಾನ್‌ ಅನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗೆ ಅನುಗುಣವಾಗಿ ಹಾಗೂ ಇತರರಿಗೆ ತೊಂದರೆಯಾಗದಷ್ಟು ಡೆಡಿಬಲ್ಸ್‌ ವ್ಯಾಪ್ತಿಯಲ್ಲಿ ಕೂಗಲಾಗುತ್ತದೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿದವು.

ವಿವಾದದ ಮೂಲ ಕರ್ನಾಟಕ

ಇನ್ನೇನು ಕರ್ನಾಟಕದಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ, ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ, ಪಿಎಸ್‌ಐ ಹಗರಣಗಳತ್ತ ಚರ್ಚೆ ಮುಂದುವರಿದು ಹಿಜಾಬ್‌, ಆಜಾನ್‌, ಝಟ್ಕಾ ಕಟ್‌, ಹಲಾಲ್‌ ಕಟ್‌ ವಿವಾದಗಳು ಸ್ವಲ್ಪ ತಣ್ಣಗಾದವು. ಆದರೆ ಇದೇ ವೇಳೆ ಮಹಾರಾಷ್ಟ್ರದಲ್ಲಿ ಆಜಾನ್‌ ವಿವಾದ ಮುಗಿಲುಮುಟ್ಟಿದ್ದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೇ 3ರೊಳಗೆ ಮಹಾರಾಷ್ಟ್ರದ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು ಎಂದು ಗಡುವು ನೀಡಿರುವುದು ಈಗ ರಾಜ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ. ಆಜಾನ್‌ಗೆ ಪ್ರತಿಕ್ರಿಯೆಯಾಗಿ ಹನುಮಾನ್‌ ಚಾಲೀಸಾವನ್ನು ದೇವಸ್ಥಾನಗಳ ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುವುದಾಗಿ ಅನೇಕರು ಹೇಳಿದ್ದರು. ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರ ನಿವಾಸದೆದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ತೆರಳಿದ್ದ ಅಮರಾವತಿ ಲೋಕಸಭಾ ಕ್ಷೇತ್ರದ ಸ್ವತಂತ್ರ ಸಂಸದೆ ನವನೀತ್‌ ಕೌರ್‌ ರಾಣಾ ಹಾಗೂ ಆಕೆಯ ಪತಿ ಮತ್ತು ಶಾಸಕ ರವಿ ರಾಣಾ ಮುಂದಾಗಿದ್ದರು. ಇಬ್ಬರ ವಿರುದ್ಧ ದೇಶದ್ರೋಹದ ಮೊಕದ್ದಮೆ ಹೂಡಿರುವ ಮಹಾರಾಷ್ಟ್ರ ಸರ್ಕಾರ ಬಂಧಿಸಿದೆ.

ಆಜಾನ್‌ಗೆ ಬೆಂಬಲ ನೀಡುತ್ತಿರುವ ಹಾಗೂ ರಾಣಾ ದಂಪತಿಯನ್ನು ಬಂಧಿಸಿರುವುದರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿತ್ತು. ತಮ್ಮ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಇಷ್ಟೊಂದು ಧ್ವೇಷ, ಇಷ್ಟೊಂದು ಪ್ರಮಾಣದ ಸರ್ವಾಧಿಕಾರಿ ಧೋರಣೆ ತೋರುವ ಅಗತ್ಯವಿರಲಿಲ್ಲ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಮಾಜಿ ಸಿಎಂ ದೇವೇಂದ್ರ ಫಡಣವೀಸ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ

ಬಿಜೆಪಿ ವಿರುದ್ಧ ವಾಗ್ದಾಳಿ

ಇಲ್ಲಿವರೆಗೆ ಆಜಾನ್‌ ವಿಚಾರದಲ್ಲಿ ಉದ್ಧವ್‌ ಠಾಕ್ರೆ ಮೌನ ವಹಿಸಿದ್ದರು. ಸೋಮವಾರ ಈ ಮೌನವನ್ನು ಮುರಿದಿರುವ ಠಾಕ್ರೆ, ಬಿಜೆಪಿಯ ಹಿಂದುತ್ವವನ್ನೇ ಪ್ರಶ್ನಿಸಿದ್ದಾರೆ. ಬಾಬ್ರಿ ಮಸೀದಿ ಧ್ವಂಸವಾದಾಗ ಇವರೆಲ್ಲ ಬಿಲದಲ್ಲಿ ಅಡಗಿ ಕುಳಿತಿದ್ದರು. ನೀವೆಂತಹ ಹಿಂದುತ್ವವಾದಿ? ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಆದೇಶ ನೀಡಿತು. ಎಂಎನ್‌ಎಸ್‌ ಹಾಗೂ ಬಿಜೆಪಿ ದುರ್ಬಲ ಹಿಂದುತ್ವವಾದಿಗಳು. ಯಾರ ಅಂಗಿ ಹೆಚ್ಚು ಕೇಸರಿಯಾಗಿದೆ ಎಂಬ ಕುರಿತು ಇಬ್ಬರಲ್ಲೂ ಸ್ಪರ್ಧೆಯಿದೆ. ನಾವು ಗದಾಧಾರಿ ಹಿಂದುತ್ವವನ್ನು ಪಾಲಿಸುತ್ತೇವೆಯೇ ವಿನಃ ಘಂಟಾಧಾರಿ ಹಿಂದುತ್ವವನ್ನಲ್ಲ ಎಂದು ಛೇಡಿಸಿದ್ದಾರೆ. ಸದ್ಯದಲ್ಲೆ ಇವರಿಗೆಲ್ಲ ಉತ್ತರ ನೀಡಲು ರ‍್ಯಾಲಿಯನ್ನು ಆಯೋಜನೆ ಮಾಡುತ್ತೇನೆ ಎಂದಿದ್ದಾರೆ. ಗದಾಧಾರಿ ಹಾಗೂ ಘಂಟಾಧಾರಿಯನ್ನು ಉದ್ಧವ್‌ ವಿವರಿಸಿಲ್ಲ. ಆದರೆ, ಗದಾಧಾರಿ ಎಂದರೆ ಗದೆಯನ್ನು ಹಿಡಿದ ರಾಮ ಭಕ್ತ ಹನುಮನ ರೀತಿ ಎಂದು ತಮ್ಮನ್ನು ಹೋಲಿಸಿಕೊಂಡಿರಬಹುದು. ಘಂಟಾಧಾರಿ ಎಂದರೆ ಸುಮ್ಮನೆ ಶಬ್ದ ಮಾಡುತ್ತ ಅರಚಾಡುವವರು ಎಂದು ಪ್ರತಿಪಕ್ಷಗಳನ್ನು ಟೀಕಿಸಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಸರ್ವಪಕ್ಷ ಸಭೆ

ಆಜಾನ್‌ ಕುರಿತು ಮಾರ್ಗಸೂಚಿ ರಚಿಸಲು ಸರ್ವಪಕ್ಷ ಸಭೆಯನ್ನು ಸಿಎಂ ಉದ್ಧವ್‌ ಠಾಕ್ರೆ ಸೋಮವಾರ ಆಯೋಜಿಸಿದ್ದರು. ರಾಜ್‌ ಠಾಕ್ರೆ ಈ ಸಭೆಗೆ ಗೈರು ಹಾಜರಾಗುವುದಾಗಿ ಮೊದಲೆ ತಿಳಿಸಿದ್ದರು. ಆದರೆ ಅವರ ಪಕ್ಷದ ಪ್ರತಿನಿಧಿಯನ್ನು ಕಳಿಸಿದ್ದರು. ಬಿಜೆಪಿ ಈ ಸಭೆಯನ್ನು ಬಹಿಷ್ಕರಿಸಿತು. ಸಿಎಂ ಉದ್ಧವ್‌ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಆಜಾನ್‌ಗೆ ನಿಯಮ ರೂಪಿಸುವ ಬದಲಿಗೆ ಚೆಂಡನ್ನು ಕೇಂದ್ರದ ಅಂಗಳಕ್ಕೆ ವರ್ಗಾಯಿಸಿದೆ. ಈಗಾಗಲೆ ಅಜಾನ್‌ ಕುರಿತು ಸುಪ್ರೀಂಕೋರ್ಟ್‌ ಆದೇಶ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿಗಳು ಜಾರಿಯಲ್ಲಿವೆ. ಇದರ ಆಧಾರದಲ್ಲಿ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬಹುದು. ಆದರೆ ರಾಜಕೀಯ ವಿವಾದವನ್ನು ತನ್ನಿಂದ ವರ್ಗಾವಣೆ ಮಾಡುವ ಸಲುವಾಗಿ ವಿವಾದವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಿದೆ. “ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಮೊದಲು ನಿರ್ಧಾರ ಮಾಡಬೇಕು, ಅದನ್ನು ರಾಜ್ಯಗಳು ಜಾರಿ ಮಾಡುತ್ತವೆ” ಎಂದು ಸಭೆಯ ನಂತರ ಮಹಾರಾಷ್ಟ್ರ ಗೃಹಸಚಿವ ದಿಲೀಪ್‌ ವಾಲ್ಸೆ ಹೇಳಿದ್ದಾರೆ.

ಇದನ್ನೂ ಓದಿ | Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

Exit mobile version