Site icon Vistara News

API-Ipsos Survey: ಬೆಂಗಳೂರಿನಲ್ಲಿ ಕೇವಲ ಶೇ.12ರಷ್ಟು ಮಂದಿಗೆ ವಯಸ್ಕ ರೋಗ ನಿರೋಧಕ ಲಸಿಕೆ!

In Bangalore only 12 percent of the adult vaccine Says API-Ipsos Survey

ಬೆಂಗಳೂರು: ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ (association of physicians of India – API) ಮತ್ತು Ipsos ಸಂಸ್ಥೆಗಳು ಜಂಟಿಯಾಗಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯು ಭಾರತದ 16 ನಗರಗಳಲ್ಲಿರುವ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ವಯಸ್ಕರಲ್ಲಿ ರೋಗನಿರೋಧಕ ಶಕ್ತಿಯನ್ನು (Immunity Power) ಏಕೆ ಕಡಿಮೆ ಇದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ. ಈ ಸಮೀಕ್ಷೆಯ ಪ್ರಕಾರ 50 ವರ್ಷ ವಯಸ್ಸಿನ ಶೇ.71 ರಷ್ಟು ವಯಸ್ಕರು ಅಡಲ್ಟ್ ವ್ಯಾಕ್ಸಿನೇಷನ್ (Adult Vaccination) ಅಂದರೆ ವಯಸ್ಕರಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ರೋಗನಿರೋಧಕ ಲಸಿಕೆಗಳ ಬಗ್ಗೆ ಅರಿವು ಇದ್ದರೂ ಸಹ ಕೇವಲ ಶೇ.16 ರಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಈ ಅತ್ಯಂತ ಕಡಿಮೆ ಪ್ರಮಾಣದ ಲಸಿಕೆ ಪಡೆದುಕೊಂಡಿರುವುದಕ್ಕೆ ರೋಗಿಗಳು ಮತ್ತು ವೈದ್ಯರು ಗಮನಾರ್ಹವಾದ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ.

ಅಧಿಕೃತ ಮಾರ್ಗಸೂಚಿಗಳ ಕೊರತೆ ಪರಿಣಾಮ ರೋಗಿಗಳು ರೋಗನಿರೋಧಕ ಲಸಿಕೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ವೈದ್ಯರು (ಶೇ.90) ಹೇಳಿದ್ದಾರೆ. ವೈದ್ಯರು ತಮ್ಮ ರೋಗಿಗಳೊಂದಿಗೆ ವಯಸ್ಕ ಲಸಿಕೆ ಬಗ್ಗೆ ಚರ್ಚಿಸಲು ಹಿಂದೇಟು ಹಾಕುತ್ತಾರೆ. ಏಕೆಂದರೆ, ಅವರಿಗೆ ಸಮಯದ ಮಿತಿಗಳಿರುತ್ತವೆ ಮತ್ತು ರೋಗಿಗಳು ಲಸಿಕೆ ಶಿಫಾರಸುಗಳ ಬಗ್ಗೆ ಕಡಿಮೆ ಮಟ್ಟದ ಗ್ರಹಿಕೆಯನ್ನು ಹೊಂದಿರುತ್ತಾರೆ ಎಂದು ಭಾವಿಸುತ್ತಾರೆ. ಅಲ್ಲದೇ, ವಯಸ್ಕ ರೋಗಿಗಳು ರೋಗವನ್ನು ತಡೆಗಟ್ಟುವುದಕ್ಕೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ದುಬಾರಿ ಎಂಬ ಕಾರಣಕ್ಕೆ ಹೆಚ್ಚು ಆದ್ಯತೆ ನೀಡದೇ ಚಿಕಿತ್ಸೆಗೆ ಆದ್ಯತೆ ನೀಡುತ್ತಾರೆ ಎಂಬುದನ್ನು ವೈದ್ಯರು ಮನವರಿಕೆ ಮಾಡಿಕೊಂಡಿದ್ದಾರೆ. ವೈದ್ಯರಿಂದ ದೃಢವಾದ ಮತ್ತು ನಿಖರವಾದ ಶಿಫಾರಸು ಅಥವಾ ಸಲಹೆಗಳು ಬಾರದ ಹೊರತು ವಯಸ್ಕ ಲಸಿಕೆಗಳನ್ನು ಪಡೆದುಕೊಳ್ಳಲು ಬಯಸುವುದಿಲ್ಲ ಎಂದು ರೋಗಿಗಳು ಹೇಳಿಕೊಂಡಿದ್ದಾರೆ. 50 ವರ್ಷ ಮತ್ತು ಅದಕ್ಕಿಂತ ಮೇಲಿನ ವಯೋಮಾನದ ಬಹುತೇಕ ವಯಸ್ಕರು (ಶೇ.69) ಮತ್ತು ಅವರನ್ನು ಆರೈಕೆ ಮಾಡುವ ಶೇ.76 ರಷ್ಟು ಜನರು ವಯಸ್ಕ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ತಮ್ಮ ವೈದ್ಯರ ಬಳಿ ಕೇಳುವುದೇ ಇಲ್ಲ. ಏಕೆಂದರೆ, ಅಗತ್ಯವಿದೆ ಎಂದು ತಿಳಿದು ಸ್ವತಃ ವೈದ್ಯರೇ ಲಸಿಕೆ ಹಾಕಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ ಎಂದು ಭಾವಿಸಿದ್ದಾರೆ. ವಯಸ್ಕರ ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಏನು ಮಾಡಬೇಕು ಎಂದು ಕೇಳಲಾದ ಪ್ರಶ್ನೆಗೆ, ಕೋವಿಡ್-19 ಸಂದರ್ಭದಲ್ಲಿ ಲಸಿಕೆ ತೆಗೆದುಕೊಳ್ಳುವಂತೆ ಜನರಲ್ಲಿ ಮೂಡಿಸಿದ ಜಾಗೃತಿ ಮತ್ತು ಇದಕ್ಕಾಗಿ ತೆಗೆದುಕೊಂಡ ಕ್ರಮಗಳನ್ನು ವಯಸ್ಕ ಲಸಿಕೆಗೂ ಅಳವಡಿಸಿಕೊಂಡಾಗ ಲಸಿಕೆ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಶೇ.55 ರಷ್ಟು ವಯಸ್ಕರು ಮತ್ತು ಶೇ.48 ರಷ್ಟು ಮಂದಿ ಅವರ ಆರೈಕೆದಾರರು ಹೇಳಿದ್ದಾರೆ.

ಬೆಂಗಳೂರಿನಲ್ಲಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಶೇ.84 ರಷ್ಟು ಜನರಿಗೆ ವಯಸ್ಕ ಲಸಿಕೆ ಬಗ್ಗೆ ಮಾಹಿತಿ ಇದೆ. ಆದರೆ, ಶೇ.12 ರಷ್ಟು ಜನರು ಮಾತ್ರ ವಯಸ್ಕ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಶೇ.89 ರಷ್ಟು ವಯಸ್ಕರು ಮತ್ತು ಅವರ ಆರೈಕೆ ಮಾಡುವ ಶೇ.93 ರಷ್ಟು ಜನರು ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ತಮ್ಮ ವೈದ್ಯರ ಮೇಲೆ ವಿಶ್ವಾಸವಿಟ್ಟಿದ್ದಾರೆ. ವೈದ್ಯರು ಲಸಿಕೆ ಹಾಕಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದಾಗ ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ವೈದ್ಯರು ಕೇವಲ ಶೇ.12 ರಷ್ಟು ವಯಸ್ಕರಿಗೆ ಲಸಿಕೆ ಹಾಕಿಸಿಕೊಳ್ಳುವಂತಯೆ ಶಿಫಾರಸು ಮಾಡಿರುವುದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಒಟ್ಟಾರೆ, ದಕ್ಷಿಣ ವಲಯದ ವೈದ್ಯರು ಶೇ.10 ಕ್ಕಿಂತ ಕಡಿಮೆ ಸಂಖ್ಯೆಯ ವಯಸ್ಕ ಲಸಿಕೆಗೆ ಶಿಫಾರಸು ಮಾಡಿದ್ದಾರೆ. ಈ ಪ್ರಮಾಣ ರಾಷ್ಟ್ರ ಮಟ್ಟದ ಸರಾಸರಿ ಶೇ.16 ರಷ್ಟಿರುವುದು ಗಮನಾರ್ಹವಾಗಿದೆ.

ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ (API)ದ ಕಾರ್ಯದರ್ಶಿ ಡಾ.ಅಗಂ ವೋರಾ ಅವರು ಮಾತನಾಡಿ, “ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಲಸಿಕೆಯನ್ನು ಶಿಫಾರಸು ಮಾಡವು ವಿಚಾರದಲ್ಲಿ ವೈದ್ಯರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ವಯಸ್ಕರ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕುರಿತು ಅಗತ್ಯವಾದ ಮಾರ್ಗಸೂಚಿಗಳನ್ನು ಹೊರಡಿಸಬೇಕು ಮತ್ತು ಈ ಮಾರ್ಗಸೂಚಿಗಳ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಿದರೆ ವಯಸ್ಕ ಲಸಿಕೆ ಪ್ರಮಾಣ ಹೆಚ್ಚಾಗಲು ಸಾಧ್ಯವಾಗುತ್ತದೆ. ವಯಸ್ಕ ಲಸಿಕೆ ಬಗ್ಗೆ ಜನರಲ್ಲಿರುವ ಆತಂಕ, ಮಿಥ್ಯೆಗಳನ್ನು ತೊಡೆದುಹಾಕಿ, ವಯಸ್ಕರು ಮತ್ತು ಅವರ ಆರೈಕೆದಾರರು ವಯಸ್ಕ ಲಸಿಕೆ ಬಗ್ಗೆ ವೈದ್ಯರಲ್ಲಿ ಕೇಳಿ ತಿಳಿದುಕೊಳ್ಳುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ವಯಸ್ಕ ಲಸಿಕೆ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಭಾರತದಲ್ಲಿ ಸರ್ಪಸುತ್ತುಗಳಂತಹ ರೋಗಗಳನ್ನು ತಡೆಗಟ್ಟುವ ಲಸಿಕೆ ಬಗ್ಗೆ ಅರಿವು ತುಂಬಾ ಕಡಿಮೆ ಇರುವುದನ್ನು ನಮ್ಮ ಸಮೀಕ್ಷೆಯಲ್ಲಿ ಪತ್ತೆ ಮಾಡಲಾಗಿದೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ VPD ಗಳ ಋಣಾತ್ಮಕ ಪರಿಣಾಮಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನೀಡಿದಾಗ ಮಾತ್ರ ಅವರು ರೋಗ ನಿರೋಧಕ ಶಕ್ತಿಯ ಬಗೆಗಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದನ್ನು ನಾವು ನಂಬುತ್ತೇವೆ. ವಯಸ್ಕರ ಲಸಿಕೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಆರೈಕೆದಾರರು ವಹಿಸಬಹುದಾದ ಪಾತ್ರವನ್ನು ನಾವು ಒಪ್ಪಿಕೊಳ್ಳಬೇಕು ಮತ್ತು ಅವರಿಗೆ ಪೂರಕವಾದ ಜಾಗೃತಿ ಕಾರ್ಯಕ್ರಮಗಳನ್ನು ಪರಿಚಯಿಸಬೇಕು’’ ಎಂದರು.

ಕೆಲವು ತಪ್ಪು ಕಲ್ಪನೆಗಳು ಸಹ ವಯಸ್ಕರು ವಯಸ್ಕ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಲು ಕಾರಣವಾಗಿವೆ. 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಅರ್ಧಕ್ಕಿಂತ ಹೆಚ್ಚು ವಯಸ್ಕರು (ಶೇ.58) ಮತ್ತು ಅವರನ್ನು ಆರೈಕೆ ಮಾಡುತ್ತಿರುವವರು (ಶೇ.62) ತಮ್ಮನ್ನು ಅಥವಾ ಪೋಷಕರು/ಅಳಿಯಂದಿರನ್ನು ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳಿಗಿಂತ ಇನ್ನೂ ಕೆಲವು ಉತ್ತಮ ಮಾರ್ಗಗಳಿವೆ ಎಂದು ಭಾವಿಸುತ್ತಾರೆ. ಶೇ.50 ಕ್ಕಿಂತ ಹೆಚ್ಚಿನ ಜನರು ಬಹು ಡೋಸ್ ಲಸಿಕೆಗಳು ಲಸಿಕೆಗಳ ಮೇಲೆ ಹೆಚ್ಚು ಅವಲಂಬಿತರನ್ನಾಗಿ ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಶೇ.61 ರಷ್ಟು ವಯಸ್ಕರು ಕೋವಿಡ್ ಹೊರತುಪಡಿಸಿ ಇತರ ಕಾಯಿಲೆಗಳು ಲಸಿಕೆ ಹಾಕಿಸಿಕೊಳ್ಳುವಷ್ಟು ಗಂಭೀರವಾಗಿಲ್ಲ ಎಂದು ನಂಬಿದ್ದಾರೆ.

50 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯೋಮಾನದ ವಯಸ್ಕರಲ್ಲಿ ಪ್ರಮುಖವಾಗಿ ಲಸಿಕೆಯಿಂದ ತಡೆಗಟ್ಟಬಹುದಾದ ರೋಗ (VPD) ಸರ್ಪಸುತ್ತು ಆಗಿರುವುದರಿಂದ ಮತ್ತು ಈ ರೋಗವನ್ನು ಲಸಿಕೆ ಮೂಲಕ ತಡೆಗಟ್ಟಬಹುದೆಂಬುದರ ಬಗ್ಗೆ ಅರಿವು ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯೋಮಾನದ ವಯಸ್ಕರಲ್ಲಿ ಸರ್ಪಸುತ್ತು ರೋಗದ ಬಗ್ಗೆ ಅವರಿಗಿರುವ ಅರಿವಿನ ಬಗ್ಗೆ ಅರ್ಥ ಮಾಡಿಕೊಳ್ಳಲು ಸಮೀಕ್ಷೆಯ ಎರಡನೇ ಭಾಗವನ್ನು ಮೀಸಲಿಡಲಾಗಿತ್ತು. 50 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ವಾಸಿಸುವ ಚಿಕನ್ ಪಾಕ್ಸ್ ವೈರಸ್ ಪುನಃ ಹೆಚ್ಚು ಸಕ್ರಿಯವಾಗುವ ಕಾರಣದಿಂದ ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟರ್ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ನೋವಿನಿಂದ ಕೂಡಿರುತ್ತದೆ ಮತ್ತು ಈ ನೋವು ವಾರಗಳು ಅಥವಾ ತಿಂಗಳುಗಟ್ಟಲೇ ಬಾಧಿಸುತ್ತದೆ.

ಈ ಸುದ್ದಿಯನ್ನೂ ಓದಿ: World Breastfeeding Week: ಮಗುವಿಗೆ ತಾಯಿಯ ಎದೆ ಹಾಲೇ ಅಮೃತ! ಇದುವೇ ಮಗುವಿನ ಆರೋಗ್ಯದ ಗುಟ್ಟು

ಸಮೀಕ್ಷೆಯ ಪ್ರಕಾರ ದೇಶದಲ್ಲಿ ಸರ್ಪಸುತ್ತಿನ ಬಗ್ಗೆ ಜಾಗೃತಿ ಅಥವಾ ಅರಿವು ತೀರಾ ಕಡಿಮೆ ಇದೆ. ಸರ್ಪಸುತ್ತಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಸರ್ಪಸುತ್ತು ಮತ್ತು ಇತರ ಚರ್ಮ ರೋಗಗಳ ವ್ಯತ್ಯಾಸವನ್ನು ಪತ್ತೆ ಮಾಡುವುದು ಕಷ್ಟಕರವಾಗಿರುತ್ತದೆ. ಇದರ ಪರಿಣಾಮ ರೋಗವನ್ನು ಪತ್ತೆ ಮಾಡುವಲ್ಲಿ ವಿಳಂಬ ಉಂಟಾಗಿ ಪರಿಣಾಮಕಾರಿ ಚಿಕಿತ್ಸೆ ಪಡೆಯುವ ಪ್ರಮಾಣ ಕಡಿಮೆಯಾಗಿರುತ್ತದೆ. ಶೇ.79 ರಷ್ಟು ರೋಗಿಗಳಿಗೆ ನೋವನ್ನು ತಡೆದುಕೊಳ್ಳುವುದು ತೀರಾ ಕಷ್ಟವೆನಿಸುತ್ತದೆ ಮತ್ತು ಶೇ.72 ರಷ್ಟು ಜನರು ಸರ್ಪಸುತ್ತು ಬರುವ ಮೊದಲು ಅದರ ಲಕ್ಷಣಗಳ ಬಗ್ಗೆ ತಿಳಿದಿರುವುದೇ ಇಲ್ಲ. ಈ ಸರ್ಪಸುತ್ತು ಕಾಣಿಸಿಕೊಂಡ ನಂತರವೂ ಶೇ.73 ರಷ್ಟು ರೋಗಿಗಳಿಗೆ ಸರ್ಪಸುತ್ತು ಬಂದಿದೆ ಎಂಬುದೇ ತಿಳಿದಿರುವುದಿಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದ ರೋಗಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಶೇ.66 ರಷ್ಟು ರೋಗಿಗಳು ಸರ್ಪಸುತ್ತು ಅವರ ಆರೋಗ್ಯ ಸ್ಥಿತಿಯನ್ನು ಗಂಭೀರವನ್ನಾಗಿ ಮಾಡಿದೆ ಮತ್ತು ಇಂತಹ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಇನ್ನಷ್ಟು ಆರೋಗ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version