Site icon Vistara News

Hafiz Saeed: ಮುಂಬೈ ದಾಳಿ ಉಗ್ರ ಹಫೀಜ್‌ ಸಯೀದ್‌ ಹಸ್ತಾಂತರಿಸಿ; ಪಾಕ್‌ಗೆ ಭಾರತ ಆಗ್ರಹ

Hafiz Saeed

India asks Pakistan to hand over 26/11 terror attack mastermind Hafiz Saeed

ನವದೆಹಲಿ: 2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ಸರಣಿ ದಾಳಿ (Mumbai Terror Attack) ರೂವಾರಿ, ಲಷ್ಕರೆ ತಯ್ಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕ ಹಫೀಜ್‌ ಸಯೀದ್‌ನನ್ನು (Hafiz Saeed) ಹಸ್ತಾಂತರಿಸಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಆಗ್ರಹಿಸಿದೆ. ಹಸ್ತಾಂತರಿಸಬೇಕು ಎಂಬ ಭಾರತದ ಆಗ್ರಹದ ಕುರಿತು ಪಾಕಿಸ್ತಾನವು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.

ಹಫೀಜ್‌ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಮೊದಲಿನಿಂದಲೂ ಕೇಂದ್ರ ಸರ್ಕಾರ ಆಗ್ರಹಿಸುತ್ತಿದೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ 2019ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್‌ ಸಯೀದ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಇದುವರೆಗೆ ಹಫೀಜ್‌ ಸಯೀದ್‌ಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ಯಾವುದು? ವಿಚಾರಣೆ ಯಾವ ಹಂತಕ್ಕೆ ಬಂದಿದೆ? ಆತ ಎಲ್ಲಿದ್ದಾನೆ ಎಂಬುದರ ಕುರಿತು ಪಾಕಿಸ್ತಾನ ಮಾಹಿತಿ ನೀಡಿಲ್ಲ.

Mumbai terror Attack

ಮೂಲಗಳ ಪ್ರಕಾರ, ಹಫೀಜ್‌ ಸಯೀದ್‌ ಪಾಕಿಸ್ತಾನದ ಜೈಲಿನಲ್ಲಿಲ್ಲ. ಆತ ಅಡಗುತಾಣದಲ್ಲಿ ಸುರಕ್ಷಿತವಾಗಿದ್ದಾನೆ ಹಾಗೂ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. 2020ರ ಬಳಿಕ ಉಗ್ರರಿಗೆ ಹಣಕಾಸು ನೆರವು ಸೇರಿ ಐದು ಕೃತ್ಯಗಳಲ್ಲಿ ಅಪರಾಧಿ ಎಂದು ಸಾಬೀತಾದರೂ ಆತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈಗ ಭಾರತವು ಆತನನ್ನು ಹಸ್ತಾಂತರಿಸಬೇಕು ಎಂದು ಆಗ್ರಹಿಸಿದೆ.

ಹಫೀಜ್‌ ಸಯೀದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೂ ಸೇರಿಸಲಾಗಿದೆ. ಈತನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ಆಗ್ರಹದ ಬಗ್ಗೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮುಮ್ತಾಜ್‌ ಜಹ್ರಾ ಬಲೋಚ್‌ ಪ್ರತಿಕ್ರಿಯಿಸಿದ್ದು, “ಇದೊಂದು ವದಂತಿಗಳನ್ನು ಆಧರಿಸಿ ಬಹಿರಂಗವಾದ ವರದಿಯಾಗಿದೆ. ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದಷ್ಟೇ ಹೇಳಿದ್ದಾರೆ. ಭಾರತದ ಅಧಿಕಾರಿಗಳು ಕೂಡ ಈ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಮುಂಬೈ ದಾಳಿ ರೂವಾರಿ ಹಫೀಜ್‌ ಪುತ್ರನ ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಮತ್ತೆ ಅಡ್ಡಿ

ಮುಂಬೈ ದಾಳಿ ಕರಾಳ ಅಧ್ಯಾಯ

ಮುಂಬೈನಲ್ಲಿರುವ ತಾಜ್​ ಹೋಟೆಲ್​ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ. ಆದಾಗ್ಯೂ, ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಯಾವುದೇ ರೀತಿಯಲ್ಲಿ ಭಾರತಕ್ಕೆ ಸಹಕಾರ ನೀಡಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version