Site icon Vistara News

India- Canada relations: ಮುಯ್ಯಿಗೆ ಮುಯ್ಯಿ: ಕೆನಡಾ ರಾಯಭಾರಿಗೂ ಭಾರತದಿಂದ ಗೇಟ್‌ಪಾಸ್

narendra modi justi Trudeau

Indian Students Skip Canada Amid Political Row, Minister Says 86% Drop

ಹೊಸದಿಲ್ಲಿ: ಕೆನಡಾದಿಂದ ಭಾರತೀಯ ರಾಯಭಾರಿಯನ್ನು (Indian diplomat) ಉಚ್ಛಾಟಿಸಿದ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರುಡೊ (justin trudeau) ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾದ ರಾಯಭಾರಿಯನ್ನು (Canada diplomat) ಭಾರತ ಆಚೆಗಟ್ಟಿದೆ. ಇದರೊಂದಿಗೆ ಭಾರತ- ಕೆನಡಾ ಸಂಬಂಧ (India- Canada relations) ಇನ್ನಷ್ಟು ಬಿಗಡಾಯಿಸಿದೆ.

ಇಂದು ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistan terrorist) ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ಹಿನ್ನೆಲೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ್ದರು. ಇದಾಗಿ ಒಂದು ದಿನದಲ್ಲಿ ಭಾರತದ ರಾಜತಾಂತ್ರಿಕರನ್ನು ಅಲ್ಲಿಂದ ಹೊರಗೆಹಾಕಿ ವಿದೇಶಾಂಗ ಇಲಾಖೆ ಆದೇಶ ನೀಡಿತ್ತು. ಅದಕ್ಕೆ ಪ್ರತಿಯಾಗಿ ಕಟುವಾದ ಪ್ರಕಟಣೆಯ ತಿರುಗೇಟು ನೀಡಿರುವ ಭಾರತ, ಕೆನಡಾದ ರಾಯಭಾರಿಗೆ ಗೇಟ್‌ಪಾಸ್‌ ನೀಡಿದೆ.

ತನ್ನ ರಾಯಭಾರಿಯನ್ನು ಹೊರಹಾಕಿರುವ ಕ್ರಮವನ್ನು ಭಾರತ ವಿದೇಶಾಂಗ ಇಲಾಖೆ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದು, ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ ಎಂದಿದೆ.

ಭಾರತ ಸರ್ಕಾರ ಕೆನಡಾದ ಪ್ರಧಾನಿಯ ಮಾತುಗಳನ್ನು ತಿರಸ್ಕರಿಸಿದೆ. ಕೆನಡಾವೇ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿದೆ. ಅವರ ವಿರುದ್ಧ ಪರಿಣಾಮಕಾರಿ ಮತ್ತು ತ್ವರಿತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಜಿ20 ಶೃಂಗಸಭೆಗೆ (G20 summit delhi) ಜಸ್ಟಿನ್‌ ಬಂದಿದ್ದಾಗಲೂ, ಪ್ರಧಾನಿ ನರೇಂದ್ರ ಮೋದಿ (pm narendra modi) ತಮ್ಮ ಈ ಕಳವಳವನ್ನು ವ್ಯಕ್ತಪಡಿಸಿದ್ದರು. ಪ್ರತಿಯಾಗಿ ಟ್ರುಡೊ, ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆಯ ಹಕ್ಕನ್ನು ತಾನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ನುಣುಚಿಕೊಂಡಿದ್ದರು.

ಕೆನಡಾಗೆ ತೆರಳಿದ ಬಳಿಕ ಜಸ್ಟಿನ್‌, ಈ ಬಗ್ಗೆ ತಮ್ಮ ʼಆಳವಾದ ಕಳವಳ’ವನ್ನು ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ʼವೈಯಕ್ತಿಕವಾಗಿ ಮತ್ತು ನೇರವಾಗಿ’ ಆ ಕಳವಳ ವ್ಯಕ್ತಪಡಿಸಿದ್ದೇನೆ ಎಂದಿದ್ದರು. ʼನಮ್ಮ ನೆಲದಲ್ಲಿ ಕೆನಡಾದ ಪ್ರಜೆಯನ್ನು ಕೊಂದಿರುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆ’ ಎಂದಿದ್ದರು.

ಭಾರತ- ಕೆನಡಾ ವ್ಯಾಪಾರ ವ್ಯವಹಾರ ಒಪ್ಪಂದ ಮಾತುಕತೆಗಳೂ ಇದರಿಂದಾಗಿ ನನೆಗುದಿಗೆ ಬಿದ್ದಿವೆ.

ಇದನ್ನೂ ಓದಿ: Justin Trudeau: ಟ್ರುಡೊ ಆರೋಪ ಅಸಂಬದ್ಧ; ಕೆನಡಾವೇ ಭಾರತ ವಿರೋಧಿಗಳಿಗೆ ಆಶ್ರಯ ನೀಡಿದೆ: ಭಾರತ ಕಟು ಪ್ರತಿಕ್ರಿಯೆ

Exit mobile version