Site icon Vistara News

India Economy: 2027ರ ವೇಳೆಗೆ ಭಾರತದಲ್ಲಿ 10 ಕೋಟಿ ಶ್ರೀಮಂತರು !

ಹೊಸದಿಲ್ಲಿ: 2027ರ ವೇಳೆಗೆ ಬಲಿಷ್ಠಗೊಳ್ಳುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಭಾರತದ (India Economy) ಶ್ರೀಮಂತ ವರ್ಗದ ಜನಸಂಖ್ಯೆ (affluent citizens) 10 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್‌ನ ವರದಿ ಹೇಳಿದೆ.

ಗೋಲ್ಡ್‌ಮನ್ ವರದಿಯ ಪ್ರಕಾರ, ಬಲವಾದ ಆರ್ಥಿಕ ಬೆಳವಣಿಗೆ, ಸ್ಥಿರವಾದ ವಿತ್ತೀಯ ನೀತಿ ಮತ್ತು ಹೆಚ್ಚಿನ ಸಾಲದ ಬೆಳವಣಿಗೆಯಿಂದಾಗಿ ಕಳೆದ ದಶಕದಲ್ಲಿ ಉನ್ನತ ಆದಾಯ ಗಳಿಸುವ ಭಾರತೀಯರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಪ್ರೀಮಿಯಂ ಸರಕುಗಳನ್ನು ಮಾರಾಟ ಮಾಡುವ ಸ್ಥಳೀಯ ಕಂಪನಿಗಳು ಜಾಗತಿಕ ಪ್ರತಿಸ್ಪರ್ಧಿಗಳನ್ನೂ ಮೀರಿಸಲಿದೆ ಎಂದು ಹೇಳಿದೆ.

ಇದರ ಪರಿಣಾಮವಾಗಿ, ವರ್ಷಕ್ಕೆ $10,000 (₹8.28 ಲಕ್ಷ) ಕ್ಕಿಂತ ಹೆಚ್ಚು ಹಣ ಗಳಿಸುವ ಶ್ರೀಮಂತ ಭಾರತೀಯರ ಸಂಖ್ಯೆಯು 2015ರಲ್ಲಿ 2.4 ಕೋಟಿಯಿಂದ 6 ಕೋಟಿಗೆ ಏರಿದೆ. ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2027ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ತಿಳಿಸಿದೆ.

ಭಾರತದ ಮಧ್ಯಮ ವರ್ಗದವರಲ್ಲಿ ಖರ್ಚು ಮಾಡುವ ಶಕ್ತಿ ಹೆಚ್ಚುತ್ತಿದೆ. ಇದು ಆಭರಣಗಳು, ಮನೆಯಿಂದ ಹೊರಗೆ ಬಳಸುವ ವಸ್ತುಗಳು ಮತ್ತು ಆರೋಗ್ಯ ರಕ್ಷಣೆಯಲ್ಲಿ ಪ್ರೀಮಿಯಂ ಬ್ರ್ಯಾಂಡ್‌ಗಳನ್ನು ಹೊಂದಿರುವ ಸಂಸ್ಥೆಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಬ್ಲೂಮ್‌ಬರ್ಗ್ ಗೋಲ್ಡ್‌ಮನ್ ವರದಿಯನ್ನು ಉಲ್ಲೇಖಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಆರ್ಥಿಕ ಮತ್ತು ಭೌತಿಕ ಆಸ್ತಿಗಳ ಮೌಲ್ಯದಲ್ಲಿನ ಗಮನಾರ್ಹ ಏರಿಕೆಯು ಹೆಚ್ಚುತ್ತಿರುವ ಸಂಪತ್ತನ್ನು ಪ್ರೇರೇಪಿಸುತ್ತಿದೆ. ಚಿನ್ನ ಮತ್ತು ಆಸ್ತಿಯನ್ನು ಸಂಪತ್ತಿನ ಪ್ರಮುಖ ಹೂಡಿಕೆಯಾಗಿ ನೋಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ನೇರ ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಈಕ್ವಿಟಿಗಳಲ್ಲಿ ಹೂಡಿಕೆ ಹೆಚ್ಚು ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ಗೋಲ್ಡ್‌ಮನ್ ಸ್ಯಾಚ್ಸ್ ಉದಾಹರಿಸಿದ ಪ್ರಕಾರ, ಉನ್ನತ ಗಳಿಕೆದಾರರು ಮತ್ತು ಮಧ್ಯಮ ಆದಾಯದ ಗುಂಪುಗಳ ಖರ್ಚು ಮಾಡುವ ಸಾಮರ್ಥ್ಯದ ನಡುವಿನ ವಿಭಜನೆಯು ಭಾರತದಲ್ಲಿ ಸಮಸ್ಯೆಯಾಗಿ ಉಳಿದಿದೆ. ದೇಶದಲ್ಲಿ 96 ಕೋಟಿಗೂ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗಿದೆ ಮತ್ತು 9.30 ಕೋಟಿ ಭಾರತೀಯರು ಪೋಸ್ಟ್‌ಪೇಯ್ಡ್ ಸೆಲ್ ಫೋನ್ ಸಂಪರ್ಕಗಳನ್ನು ಹೊಂದಿದ್ದಾರೆ. ಆದರೆ 3 ಕೋಟಿ ಭಾರತೀಯರು ಮಾತ್ರ ವಾಹನವನ್ನು ಖರೀದಿಸಬಲ್ಲರು ಎಂದು ವರದಿ ಹೇಳಿದೆ.

Exit mobile version