Site icon Vistara News

India At UNGA: ‘ನಿಮ್ಮ ದೇಶ ನೋಡಿಕೊಳ್ಳಿ’; ವಿಶ್ವಸಂಸ್ಥೆಯಲ್ಲಿ ‘ಕಾಶ್ಮೀರ’ ಪ್ರಸ್ತಾಪಿಸಿದ ಪಾಕ್‌ಗೆ ಭಾರತ ಚಾಟಿ

Petal Gehlot At UNGA

India hits back after Pakistan caretaker PM raises Jammu Kashmir at UNGA

ನ್ಯೂಯಾರ್ಕ್‌: ವಿಶ್ವಸಂಸ್ಥೆ ಸಾಮಾನ್ಯ ಸಭೆಯ (UNGA) 78ನೇ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಅವರಿಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಭಾರತದ (India At UNGA) ಕಾರ್ಯದರ್ಶಿ ಪೆತಲ್‌ ಗೆಹ್ಲೋಟ್‌, “ಪಾಕಿಸ್ತಾನವು ಭಾರತದ ಅವಿಭಾಜ್ಯ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಚಾಟಿ ಬೀಸಿದ್ದಾರೆ.

“ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಚಾಳಿಯನ್ನು ಪಾಕಿಸ್ತಾನ ಬಿಡಬೇಕು. ಪಾಕಿಸ್ತಾನವು ತನ್ನ ದೇಶದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ದಮನದ ವಿಷಯವನ್ನು ಜಗತ್ತಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾವಾಗಲೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದೆ. ಆದರೆ, ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಾಗಿ, ನೆರೆರಾಷ್ಟ್ರವು ಮೊದಲು ತನ್ನ ದೇಶದ ಹುಳುಕನ್ನು ಸರಿಪಡಿಸಿಕೊಳ್ಳಬೇಕು” ಎಂದು ಪೆತಲ್‌ ಗೆಹ್ಲೋಟ್‌ ಹೇಳಿದ್ದಾರೆ.

“ಪಾಕಿಸ್ತಾನವು ಭಾರತದ ವಿಚಾರದಲ್ಲಿ ಮೂಗು ತೂರಿಸುವ ಬದಲು ಗಡಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳಬೇಕು. ಉಗ್ರರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಬಿಡಬೇಕು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಅನಿಷ್ಟಗಳನ್ನು ಪಾಕಿಸ್ತಾನ ನಿರ್ಮೂಲನೆ ಮಾಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: India retaliates to Pak | ಪ್ರಧಾನಿ ಮೋದಿ ಕಟುಕ ಎಂದ ಭುಟ್ಟೋಗೆ 1971ರ ನರಮೇಧ ನೆನಪಿಸಿ, ತಿರುಗೇಟು ನೀಡಿದ ಭಾರತ!

ಪಾಕ್‌ ಪ್ರಧಾನಿ ಹೇಳಿದ್ದೇನು?

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌, “ಭಾರತ ಹಾಗೂ ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ಜಮ್ಮು-ಕಾಶ್ಮೀರವೇ ನಿರ್ಣಾಯಕವಾಗಿದೆ. ಇದರಿಂದ ಉಭಯ ದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಹಾಗೆಯೇ, ಜಮ್ಮು-ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಮಿಲಿಟರಿ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಬೇಕು. ಹಾಗೆಯೇ, ಭಾರತ ಹಾಗೂ ಪಾಕಿಸ್ತಾನ ಮಾತುಕತೆಗೆ ಸಂಬಂಧಿಸಿದಂತೆ ಜಗತ್ತಿನ ರಾಷ್ಟ್ರಗಳು ಭಾರತಕ್ಕೆ ಮನವರಿಕೆ ಮಾಡಬೇಕು” ಎಂದು ಹೇಳಿದ್ದರು.

Exit mobile version