Site icon Vistara News

ಭಾರತವು ಅಮೆರಿಕ, ರಷ್ಯಾ, ಚೀನಾ ರೀತಿ ದಬ್ಬಾಳಿಕೆ ನಡೆಸುವ ರಾಷ್ಟ್ರವಲ್ಲ ಎಂದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್

India is not authoritative nation like America, Russia and China, Says RSS

ನವದೆಹಲಿ: ಭಾರತವು ತನ್ನ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಂಬಿಕೆಯನ್ನು ಹೊಂದಿದೆ. ಈ ವಿಷಯದಲ್ಲಿ ಭಾರತವು ಅಮೆರಿಕ, ರಷ್ಯಾ ಅಥವಾ ಚೀನಾ ರೀತಿಯಲ್ಲಿ ದಬ್ಬಾಳಿಕೆ ನಡೆಸುವ ರಾಷ್ಟ್ರವಾಗಲು ಇಷ್ಟಪಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಭಾರತವು ಉಳಿದವರಿಗೆ ಸೇವೆ ಮಾಡುವುದರಲ್ಲಿ ನಂಬಿಕೆ ಹೊಂದಿದೆ ಮತ್ತು ಇದು ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಮ್ಮ ದೇಶವು ನೀತಿವಂತ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತನ್ನ ದಾರಿಯನ್ನು ಸುಗಮಗೊಳಿಸುತ್ತಿರುವಾಗ ಅದರ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ ಎಂದು ಮೋಹನ್ ಭಾಗವತ್ ಅವರು, ವೇದ ಸಂಸ್ಕೃತ ಜ್ಞಾನ ಗೌರವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಹೇಳಿದರು.

ಅಭಿವೃದ್ಧಿ ಹೊಂದಿದೆ ರಾಷ್ಟ್ರಗಳು ಇತರ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುತ್ತವೆ. ಸೋವಿಯತ್ ರಷ್ಯಾ ಬಲಿಷ್ಠವಾಗಿದ್ದಾಗ ಅದನ್ನು ಬಲಹೀನಗೊಳಿಸಲು ಅಮೆರಿಕ ಮುಂದಾಯಿತು. ಈಗ ಚೀನಾ ಅಮೆರಿಕವನ್ನು ಸದೆಬಡಿಯಲು ಮುಂದಾಗುತ್ತಿದೆ. ಆದರೆ ಅಮೆರಿಕ ಮತ್ತು ರಷ್ಯಾಗಳೆರಡೂ ಉಕ್ರೇನ್ ದೇಶವನ್ನು ಕಾಯಿಯಾಗಿ ಬಳಸುತ್ತಿವೆ. ಸಂಬಂಧ ಯಾವ ರೀತಿಯಲ್ಲಿದೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಅಗತ್ಯ ಬಿದ್ದಾಗ ಇತರ ರಾಷ್ಟ್ರಗಳಿಗೆ ಭಾರತವು ಯಾವಾಗಲೂ ನೆರವು ನೀಡುತ್ತಾ ಬಂದಿದೆ ಎಂದು ಭಾಗವತ್ ಅವರು ಹೇಳಿದರು. ಭಾರತವು ಈಗಲೂ ಉಕ್ರೇನ್‌ಗೆ ನೆರವು ನೀಡಲು ಇಚ್ಛಿಸುತ್ತದೆ. ಇದು ನಮ್ಮ ರಾಷ್ಟ್ರ ಎಂದು ಅವರು ಹೇಳಿದರು.

ಇದನ್ನೂ ಓದಿ: ಬ್ರಿಟಿಷ್​ ಆಳ್ವಿಕೆಗೂ ಪೂರ್ವ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಶೇ.70ರಷ್ಟಿತ್ತು, ಇಂಗ್ಲಿಷರಿಂದಲೇ ವ್ಯವಸ್ಥೆ ಹಾಳಾಯ್ತು: ಮೋಹನ್ ಭಾಗವತ್​

ಇದೇ ವೇಳೆ, ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಮೋಹನ್ ಭಾಗವತ್ ಅವರು, ಈ ಹಿಂದೆ ಭಾರತವು ಈಗಿನಂತೆ ತನ್ನದೇ ಆದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾದ ಉದಾಹರಣೆ ನೀಡಿದ ಅವರು, ಶ್ರೀಲಂಕಾ ಯಾವಾಗಲೂ ಪಾಕಿಸ್ತಾನ ಇಲ್ಲವೇ ಚೀನಾದ ಬೆಂಬಲಕ್ಕೆ ನಿಲುತ್ತಿತ್ತು. ತನ್ನ ಆಂತರಿಕ ವಿಷಯಗಳಿಗೆ ಭಾರತವನ್ನು ಯಾವಗಲೂ ದೂರವೇ ಇಟ್ಟಿತ್ತು. ಆದರೆ, ಅದು ಅಪಾಯಕ್ಕೆ ಸಿಲುಕಿಕೊಂಡಿತೋ ಆಗ ಶ್ರೀಲಂಕಾ ನೆರವಿಗೆ ಬಂದಿದ್ದೇ ಭಾರತ. ನಮ್ಮ ರಾಷ್ಟ್ರವು ಎಂದಿಗೂ ಇತರ ರಾಷ್ಟ್ರಗಳ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು. ಭಾರತವು ಈಗ ಧಾರ್ಮಿಕ ನಂಬಿಕೆಗಳೊಂದಿಗೆ ಮುಂದುವರಿಯುತ್ತಿದೆ. ಧರ್ಮಕ್ಕಾಗಿ ಹೋರಾಡುವ ದೇಶವು ಬೇರೆ ಯಾವುದೇ ದೇಶದಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಅವರು ಹೇಳಿದರು.

Exit mobile version