ನವ ದೆಹಲಿ: ರಷ್ಯಾ -ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದಲೂ ವಿಶ್ವದ ಹಲವು ರಾಷ್ಟ್ರಗಳು ರಷ್ಯಾ ವಿರುದ್ಧ ತಿರುಗಿಬಿದ್ದಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ಹಿಂದೆ ಹಲವು ಬಾರಿ ರಷ್ಯಾ ವಿರುದ್ಧ ನಿರ್ಣಯವನ್ನು ಅಂಗೀಕಾರ ಮಾಡಿವೆ. ಹೀಗೆ ವಿಶ್ವಸಂಸ್ಥೆಯಲ್ಲಿ ಬಹುತೇಕ ರಾಷ್ಟ್ರಗಳು ರಷ್ಯಾ ವಿರುದ್ಧವೇ ಮತಹಾಕುತ್ತ ಬಂದಿದ್ದರೂ ಭಾರತ ಅಂತರ ಕಾಯ್ದುಕೊಳ್ಳುತ್ತಲೇ ಇದೆ. ಮತದಾನದಿಂದ ದೂರವೇ ಉಳಿದಿತ್ತು. ಅದೇ ನಿಲುವನ್ನು ಈಗ ಮತ್ತೊಮ್ಮೆ ಪ್ರಸ್ತುತ ಪಡಿಸಿದೆ.
ರಷ್ಯಾವು ಉಕ್ರೇನ್ನ ನಾಲ್ಕು ಭೂಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಘೋಷಿಸಿದ್ದರು. ಹೀಗೆ ಉಕ್ರೇನ್ನ ಭೂಭಾಗಗಳನ್ನು ರಷ್ಯಾ ಅತಿಕ್ರಮಿಸಿಕೊಂಡಿದ್ದು ಕಾನೂನು ಬಾಹಿರ ಮತ್ತು ಅಕ್ರಮ ಎಂದು ಅಮೆರಿಕ ಸೇರಿ ಎಲ್ಲ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ-NATO) ರಾಷ್ಟ್ರಗಳೂ ಪ್ರತಿಪಾದಿಸಿದ್ದಲ್ಲದೆ, ರಷ್ಯಾದ ಈ ಸ್ವಾಧೀನದ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವನ್ನು ಅಂಗೀಕಾರ ಮಾಡಿವೆ. ಈ ನಿರ್ಣಯಕ್ಕೆ ಕೂಡ ಭಾರತ ಮತ ಹಾಕಲಿಲ್ಲ.
ಮತದಾನದಿಂದ ದೂರ ಉಳಿದಿದ್ದಕ್ಕೆ ಭದ್ರತಾ ಮಂಡಳಿಯಲ್ಲಿ ವಿವರಣೆ ನೀಡಿದ ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ‘ಪರಸ್ಪರ ಮಾತುಕತೆ, ಚರ್ಚೆಯ ಮೂಲಕವಷ್ಟೇ ಎಲ್ಲ ಭಿನ್ನಾಭಿಪ್ರಾಯಗಳು, ಸಂಘರ್ಷಗಳು ಕೊನೆಗಾಣಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಹಿಂಸಾಚಾರ, ಹಗೆತನವನ್ನು ನಿಲ್ಲಿಸಬೇಕು ಎಂದು ನಾವು ಎರಡೂ ದೇಶಗಳಿಗೆ ಒತ್ತಾಯ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ರಾಜತಾಂತ್ರಿಕತೆಯ ಎಲ್ಲ ಮಾರ್ಗಗಳನ್ನೂ ಮುಕ್ತವಾಗಿ ಇಡಬೇಕು ಎಂದರೆ ಅಲ್ಲಿ ಬಹುಮುಖ್ಯವಾಗಿ ಶಾಂತಿ ಇರಬೇಕು. ಉದ್ವಿಗ್ನತೆ ಹೆಚ್ಚಿಸಲು ನಮಗ್ಯಾರಿಗೂ ಆಸಕ್ತಿ ಇಲ್ಲ. ಹೀಗಾಗಿ ಎಷ್ಟಾಗತತ್ತೋ, ಅಷ್ಟು ಬೇಗ ಸಮಾಲೋಚನೆ ಹಾದಿ ಕಂಡುಕೊಳ್ಳುವುದು ಒಳ್ಳೆಯದು. ಸದ್ಯ ಇರುವ ಹದಗೆಟ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಮತದಾನದಿಂದ ದೂರ ಇರಲು ನಿರ್ಧಾರ ಮಾಡಿದೆ ಎಂದು ರುಚಿರಾ ಕಾಂಬೋಜ್ ಸಮರ್ಥಿಸಿಕೊಂಡಿದ್ದಾರೆ.