Site icon Vistara News

G20 Summit 2023: ಭಾರತ ಈಗ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರ; ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಬಣ್ಣನೆ

Narendra Modi With Azali Assoumani

India now a global superpower, says African Union chairperson Azali Assoumani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನ, ಜಿ20 ರಾಷ್ಟ್ರಗಳ ನಾಯಕರ ಸಮ್ಮತಿಯ ಮೇರೆಗೆ ಆಫ್ರಿಕಾ ಒಕ್ಕೂಟ ಕೂಡ ಈಗ ಜಿ20 ಸದಸ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ (G20 Summit 2023) ಈ ಕುರಿತು ಘೋಷಣೆ ಮಾಡಿದ ಬಳಿಕ ಭಾರತ ಹಾಗೂ ನರೇಂದ್ರ ಮೋದಿ (Narendra Modi) ಅವರಿಗೆ ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಅಜಾಲಿ ಅಸೌಮನಿ (Azali Assoumani) ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ, “ಭಾರತವೀಗ ಜಗತ್ತಿನ ಸೂಪರ್‌ ರಾಷ್ಟ್ರವಾಗಿ ಹೊರಹೊಮ್ಮಿದೆ” ಎಂದು ತಿಳಿಸಿದ್ದಾರೆ.

ಜಿ20 ಶೃಂಗಸಭೆ ಸಮಾರೋಪದ ಬಳಿಕ ನರೇಂದ್ರ ಮೋದಿ ಅವರ ಜತೆ ದ್ವಿಪಕ್ಷೀಯ ಸಭೆ ಬಳಿಕ ಅಜಾಲಿ ಅಸೌಮನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಜಗತ್ತಿನಲ್ಲಿ ಭಾರತವೀಗ ಐದನೇ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಿದೆ. ಜಗತ್ತಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸಂಬಂಧಕ್ಕೆ ಪ್ರಾಧಾನ್ಯತೆ ಇದೆ. ಬಾಹ್ಯಾಕಾಶದಲ್ಲಿ ಮಹತ್ತರವಾದುದನ್ನು ಸಾಧಿಸಿದ ಭಾರತವೀಗ ಸೂಪರ್‌ ಪವರ್‌ ರಾಷ್ಟ್ರ ಎನಿಸಿದೆ. ಭಾರತ ಚೀನಾಕ್ಕಿಂತ ಮುಂದಿದೆ” ಎಂದು ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಹೇಳಿದ್ದಾರೆ.

ಭಾರತ, ಭಾರತೀಯರ ಜತೆ ಉತ್ತಮ ಸಂಬಂಧ

ಭಾರತ ಹಾಗೂ ಆಫ್ರಿಕಾ ಸಂಬಂಧದ ಕುರಿತು ಮಾತನಾಡಿದ ಅವರು, “ನಾವು ಭಾರತದೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದೇವೆ. ಕೊಮೊರೋಸ್‌ ದೇಶದಲ್ಲಂತೂ ಭಾರತೀಯರು ಶತಮಾನಗಳಿಂದ ನೆಲೆಸಿದ್ದಾರೆ. ಮುಂದೆಯೂ ಭಾರತ ಹಾಗೂ ಆಫ್ರಿಕಾ ಒಕ್ಕೂಟದ ಮಧ್ಯೆ ಉತ್ತಮ ಸಂಬಂಧ ಇರಲಿದೆ. ಕೊಮೊರೋಸ್‌ನಲ್ಲಿ ಭಾರತೀಯರ ಜತೆ ವ್ಯಾಪಾರ ಇದೆ. ಎಂದಿಗೂ ನಮಗೂ ಹಾಗೂ ಭಾರತೀಯರ ಮಧ್ಯೆ ಸಮಸ್ಯೆಯಾಗಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ: G20 Summit 2023: ನಿಮ್ಮ ನಾಯಕತ್ವದಲ್ಲಿ ನಾವು ಏಳಿಗೆ ಹೊಂದುತ್ತೇವೆ! ಪ್ರಧಾನಿ ಮೋದಿಗೆ ಶಾರುಖ್ ಮೆಚ್ಚುಗೆ

ಭಾರತವು ಜಿ20 ಶೃಂಗಸಭೆಯನ್ನು ಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಿ ಆಯೋಜನೆ ಮಾಡಿರುವುದಕ್ಕೆ ಜಾಗತಿಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಕೂಡ ಶ್ಲಾಘಿಸಿದ್ದಾರೆ. ಇನ್ನು ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರಂತೂ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. “ನಿಮ್ಮ ನೇತೃತ್ವದಲ್ಲಿ ದೇಶ ಏಳಿಗೆ ಹೊಂದುತ್ತಿದೆ” ಎಂದು ಶಾರುಖ್‌ ಖಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version