ನವ ದೆಹಲಿ: ದೇಶ ವಿಭಜನೆಯ (India & Pakistan Partition) ಸಂದರ್ಭದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಮಹಿಳೆಯೊಬ್ಬರು, ಈಗ ತಮ್ಮ 92ನೇ ವಯಸ್ಸಿನಲ್ಲಿ ಪೂರ್ವಜರ ಮನೆಗೆ ಭೇಟಿ ನೀಡಿದ್ದಾರೆ.
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ತಮ್ಮ ಪೂರ್ವಜರ ನಿವಾಸಕ್ಕೆ ಒಮ್ಮೆ ಭೇಟಿ ನೀಡಬೇಕೆಂದು ರೀನಾ ಚಿಬರ್ ಸುದೀರ್ಘ ಕಾಲದಿಂದ ಪ್ರಯತ್ನಿಸುತ್ತಿದ್ದರು. ಆದರೆ ಉಭಯ ದೇಶಗಳ ನಡುವಿನ ವೀಸಾ ನಿಯಮದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನ ತೊರೆದ 75 ವರ್ಷಗಳ ನಂತರ, ಇದೇ ಮೊದಲ ಬಾರಿಗೆ ಎನ್ನುವಂತೆ, ಕಳೆದ ಶನಿವಾರ ಅವರು ವಾಘಾ-ಅಟ್ಟಾರಿ ಗಡಿಯನ್ನು ದಾಟಿದ್ದಾರೆ. ಸದ್ಭಾವನೆಯ ದ್ಯೋತಕವಾಗಿ, ರೀನಾ ಅವರಿಗೆ ಮೂರು ತಿಂಗಳ ವೀಸಾವನ್ನು ಪಾಕ್ ಹೈಕಮೀಷನ್ ನೀಡಿದ್ದರಿಂದ, ತಮ್ಮ ಪೂರ್ವಜರ ಮನೆ ʻಪ್ರೇಮ ನಿವಾಸʼಕ್ಕೆ ಭೇಟಿ ನೀಡುವ ಅವರ ಕನಸು ನನಸಾಗಿದೆ.
ʻನಿಜಕ್ಕೂ ರೋಮಾಂಚನಗೊಂಡಿದ್ದೇನೆ. ನಾ ಹುಟ್ಟಿದ ಮನೆಗೆ, ಆ ಬೀದಿಗೆ ಒಮ್ಮೆ ಹೋಗಬೇಕೆಂದು ಜೀವನವಿಡೀ ಕನಸು ಕಂಡಿದ್ದೆʼ ಎಂದು ರೀನಾ ಹೇಳಿದ್ದಾರೆ. ಮಾತ್ರವಲ್ಲ, ಉಭಯ ದೇಶಗಳ ನಡುವೆ ಸಂಚರಿಸುವವರಿಗೆ ಸುಲಭವಾಗುವಂಥ ವೀಸಾ ನಿಯಮಗಳನ್ನು ಹೊಂದಬೇಕೆಂದು ಎರಡೂ ದೇಶಗಳ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.
ದೇಶ ವಿಭಜನೆಗಿಂತ ಕೆಲವು ತಿಂಗಳುಗಳ ಮೊದಲು, ಅಂದರೆ 1946ರಲ್ಲಿ ರೀನಾ ವರ್ಮ, ತಮ್ಮ ಒಡಹುಟ್ಟಿದವರೊಂದಿಗೆ ಸೋಲನ್‌ಗೆ ಬಂದಿದ್ದರು. 1947ರಲ್ಲಿ ದೇಶ ವಿಭಜನೆ ಆದ ನಂತರ, ಅವರ ಹೆತ್ತವರೂ ಅಲ್ಲಿಗೆ ವಲಸೆ ಬಂದಿದ್ದರು. ನಾನಾ ಹಿನ್ನೆಲೆಯ ಜನರೊಂದಿಗೆ ಬೆರೆತು, ಅತ್ಯಂತ ಪ್ರಗತಿಪರ ಎನ್ನುವಂಥ ವಾತಾವರಣದಲ್ಲಿ ತಾನು ಬೆಳೆದಿದ್ದನ್ನು ರೀನಾ ನೆನಪಿಸಿಕೊಳ್ಳುತ್ತಾರೆ. 1965ರಲ್ಲಿ ಆಕೆ ಮೊದಲ ಬಾರಿಗೆ ಪಾಕ್‌ಗೆ ಭೇಟಿ ನೀಡುವ ಪ್ರಯತ್ನ ಮಾಡಿದ್ದರೂ ಅದು ಆಗಿರಲಿಲ್ಲ. ಆನಂತರ ಎಂದೂ ಸಾಧ್ಯವಾಗಿರಲಿಲ್ಲ.
2022ರಲ್ಲಿ, ಅಂದರೆ ತಮ್ಮ 92ನೇ ವಯಸ್ಸಿನಲ್ಲಿ ʻಇಂಡಿಯಾ-ಪಾಕಿಸ್ತಾನ್ ಹೆರಿಟೆಜ್ ಕ್ಲಬ್ʼ ಎಂಬ ಗುಂಪಿನ ಸದಸ್ಯೆಯಾದರು. ತಮ್ಮ ಬಾಲ್ಯದ ಮನೆಗೆ ಭೇಟಿ ನೀಡಬೇಕೆಂಬ ಆಸೆಯನ್ನು ಅಲ್ಲಿ ಆಕೆ ತೋಡಿಕೊಂಡಿದ್ದರು. ಆ ತಂಡದ ಸಜ್ಜದ್ ಹುಸೇನ್ ಎಂಬ ಸದಸ್ಯ ಇವರ ನೆರವಿಗೆ ಬಂದು, ಆಕೆ ನೀಡಿದ ಗುರುತುಗಳ ಆಧಾರದ ಮೇಲೆ, ಆ ಮನೆ ಎಲ್ಲಿದೆ ಎಂಬುದನ್ನು ಪತ್ತೆ ಮಾಡಿದರು. 2022ರ ಮಾರ್ಚ್‌ನಲ್ಲಿ ರೀನಾ ಸಲ್ಲಿಸಿದ್ದ ವೀಸಾ ಮತ್ತೆ ತಿರಸ್ಕೃತವಾಗಿತ್ತು. ಆದರೆ ಇದೇ ಮೇ ತಿಂಗಳಲ್ಲಿ ಆಕೆಯ ಬಗ್ಗೆ ʻಇಂಡಿಪೆಂಡೆಂಟ್ ಉರ್ದುʼದಲ್ಲಿ ಬಿತ್ತರಗೊಂಡಿದ್ದ ವರದಿಯನ್ನು ಗಮನಿಸಿದ ಪಾಕ್ ಹೈಕಮಿಷನ್, ಮೂರು ತಿಂಗಳ ಸದ್ಭಾವನಾ ವೀಸಾ ನೀಡಿತ್ತು.
ಇದನ್ನೂ ಓದಿ | ಪಾಕಿಸ್ತಾನದಲ್ಲಿ ಮೊಬೈಲ್, ಅಂತರ್ಜಾಲಕ್ಕೂ ವಿದ್ಯುತ್ ಇಲ್ಲ