Site icon Vistara News

ಡಿಜಿಟಲ್‌ ಸೇವೆಗಳ ರಫ್ತಿನಲ್ಲಿ ಭಾರತಕ್ಕೆ 4ನೇ ರ‍್ಯಾಂಕ್‌; ಚೀನಾವನ್ನೇ ಹಿಂದಿಕ್ಕಿ ಸಾಧನೆ!

Digital Services Export

India Ranks 4th In Digital Services Exports; Surpasses China: Says WTO

ನವದೆಹಲಿ: ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ದಾಖಲೆ ನಿರ್ಮಿಸಿರುವ ಭಾರತ ಈಗ ಡಿಜಿಟಲ್‌ ಸೇವೆಗಳ ರಫ್ತಿನಲ್ಲೂ (Digital Services Export) ಮೈಲುಗಲ್ಲು ಸಾಧಿಸಿದೆ. ಡಿಜಿಟಲ್‌ ಸೇವೆಗಳ ರಫ್ತಿನಲ್ಲಿ ಶೇ.17ರಷ್ಟು ಗಣನೀಯ ಪ್ರಗತಿ ಸಾಧಿಸಿರುವ ಭಾರತವು, ವಿಶ್ವದಲ್ಲೇ ಅತಿ ಹೆಚ್ಚು ಡಿಜಿಟಲ್‌ ಸೇವೆಗಳನ್ನು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಅಷ್ಟೇ ಅಲ್ಲ, ಗಡಿ ತಂಟೆಯ ಚೀನಾವನ್ನೇ (China) ಹಿಂದಿಕ್ಕಿ ಭಾರತವು (India) ನಾಲ್ಕನೇ ಸ್ಥಾನ ಪಡೆದಿರುವುದು ಮಹತ್ವದ ಸಂಗತಿಯಾಗಿದೆ.

ವಿಶ್ವ ವ್ಯಾಪಾರ ಸಂಸ್ಥೆಯು (WTO) ಬಿಡುಗಡೆ ಮಾಡಿರುವ ಗ್ಲೋಬಲ್‌ ಟ್ರೇಡ್‌ ಔಟ್‌ಲುಕ್‌ & ಸ್ಟ್ಯಾಟಿಸ್ಟಿಕ್ಸ್‌ ವರದಿಯಲ್ಲಿ ಭಾರತವು ಅಗ್ರ ನಾಲ್ಕನೇ ಸ್ಥಾನ ಪಡೆದಿದೆ. ಭಾರತವು 2023ರಲ್ಲಿ ಸುಮಾರು 21 ಸಾವಿರ ಕೋಟಿ ರೂ. ಮೌಲ್ಯದ ಡಿಜಿಟಲ್‌ ಸೇವೆಗಳನ್ನು ರಫ್ತು ಮಾಡಿದೆ. ಇದು 2022ಕ್ಕಿಂತ ಶೇ.17ರಷ್ಟು ಏರಿಕೆಯಾಗಿದೆ. ಭಾರತವು ಡಿಜಿಟಲ್‌ ಸೇವೆಗಳ ರಫ್ತಿನಲ್ಲಿ ಚೀನಾ ಹಾಗೂ ಜರ್ಮನಿಗಿಂತ ಮುಂದಿದೆ. ಚೀನಾ ಹಾಗೂ ಜರ್ಮಿನಿಯು ರಫ್ತಿನಲ್ಲಿ ಶೇ.4ರಷ್ಟು ಮಾತ್ರ ಪ್ರಗತಿ ಕಂಡಿವೆ.

ವಿಶ್ವ ವ್ಯಾಪಾರ ಸಂಸ್ಥೆ ವರದಿ ಪ್ರಕಾರ, 2023ರಲ್ಲಿ ಜಗತ್ತಿನಾದ್ಯಂತ 4.25 ಲಕ್ಷ ಕೋಟಿ ಡಾಲರ್‌ ಮೌಲ್ಯದ ಸೇವೆಗಳನ್ನು ಡಿಜಿಟಲ್‌ ಮೂಲಕವೇ ಒದಗಿಸಲಾಗಿದೆ. ಇದು 2022ಕ್ಕೆ ಹೋಲಿಸಿದರೆ ಶೇ.9ರಷ್ಟು ಏರಿಕೆಯಾಗಿದೆ. ಡಿಜಿಟಲ್‌ ಸೇವೆಗಳ ರಪ್ತಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಬಳಸಿರುವುದು ಪ್ರಮುಖ ಸಂಗತಿಯಾಗಿದೆ. ಭಾರತದಲ್ಲಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾಗೆ ಒತ್ತು ನೀಡಿರುವುದು ರಫ್ತು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಏನಿದು ಡಿಜಿಟಲ್‌ ಸೇವೆಗಳ ರಫ್ತು?

ಡಿಜಿಟಲ್‌ ವ್ಯವಸ್ಥೆಯ ಮೂಲಕ ಅಂದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (Information And Communications Technology-ICT) ಆಧರಿಸಿ ಸೇವೆಗಳನ್ನು ಒದಗಿಸುವುದಾಗಿದೆ. ಐಸಿಟಿ ಸೇವೆಗಳಲ್ಲಿ ಸೇಲ್ಸ್‌, ಮಾರುಕಟ್ಟೆ ಸೇವೆಗಳು, ಹಣಕಾಸು ಸೇವೆಗಳು, ವೃತ್ತಿಪರ ಸೇವೆಗಳು, ಶಿಕ್ಷಣ ಹಾಗೂ ತರಬೇತಿ ಸೇವೆಗಳು ಸೇರಿ ಹತ್ತಾರು ಸೇವೆಗಳು ಪ್ರಮುಖವಾಗಿವೆ.

ರಕ್ಷಣಾ ರಫ್ತು ಕೂಡ ದಾಖಲೆ

ದೇಶದ ರಕ್ಷಣಾ ರಫ್ತು ಇದೇ ಮೊದಲ ಬಾರಿಗೆ 21 ಸಾವಿರ ಕೋಟಿ ರೂ. ಗಡಿ ದಾಟಿದೆ. 2023-24 ರ ಹಣಕಾಸು ವರ್ಷದಲ್ಲಿ ರಕ್ಷಣಾ ರಫ್ತು ದಾಖಲೆಯ ರೂ.21,083 ಕೋಟಿಗಳನ್ನು ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಅಂಕಿ ಅಂಶವು ರೂ.15,920 ಕೋಟಿ ಇತ್ತು. ಇದು 32.5% ರಷ್ಟು ಬೆಳವಣಿಗೆಯಾಗಿದೆ. ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿಅಂಶಗಳು ಸೂಚಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಾರ, 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂ. ದಾಟಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ದಾಖಲೆ ದೇಶದ ಅಗ್ಗಳಿಕೆ

Exit mobile version