ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುಕ ಎಂದು ವೈಯಕ್ತಿಕ ದಾಳಿ ನಡೆಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರಿಗೆ ಭಾರತವು ತಿರುಗೇಟು ನೀಡಿದ್ದು, ”1971ರಲ್ಲಿ ಬಂಗಾಳಿಗಳು ಮತ್ತು ಹಿಂದೂಗಳ ವಿರುದ್ಧ ಪಾಕಿಸ್ತಾನದ ಆಡಳಿತಗಾರರ ನಡೆಸಿದ ನರಮೇಧವನ್ನು ಮರೆತಿರುವಂತೆ ಕಾಣುತ್ತಿದೆ,” ಎಂದು ಹೇಳಿದೆ(India retaliates to Pak).
ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆ ಖಂಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯವು, ಭುಟ್ಟೋ ಹೇಳಿಕೆ ಪಾಕಿಸ್ತಾನದ ಕೀಳುಮಟ್ಟತನವನ್ನು ತೋರಿಸುತ್ತದೆ. ಇದು ಪಾಕಿಸ್ತಾನದ ಹೊಸ ಕೆಳಮಟ್ಟದ ನಡವಳಿಕೆಯಾಗಿದೆ ಎಂದು ಹೇಳಿದೆ.
ಪೂರ್ವ ಪಾಕಿಸ್ತಾನದಲ್ಲಿ(ಇಂದಿನ ಬಾಂಗ್ಲಾದೇಶ) 1971ರಲ್ಲಿ ಪಾಕಿಸ್ತಾನವು ಬಂಗಾಳಿಗಳು, ಹಿಂದೂಗಳು ನರಮೇಧವನ್ನೇ ನಡೆಸಿತ್ತು. ದುರದೃಷ್ಟವಶಾತ್, ಪಾಕಿಸ್ತಾನವು ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುವ ನೀತಿಯಲ್ಲಿ ಈಗಲೂ ಹೆಚ್ಚಿನ ಬದಲಾವಣೆಯನ್ನು ತೋರುತ್ತಿಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಟೀಕಿಸುವ ಯಾವುದೇ ಹಕ್ಕಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವರ ಹತಾಶೆಯು, ಭಯೋತ್ಪಾದನೆಯನ್ನು ಸರ್ಕಾರಿ ನೀತಿಯನ್ನಾಗಿಸಿಕೊಂಡಿರುವ ಅವರ ಸ್ವಂತ ದೇಶದಲ್ಲೇ ಉಗ್ರಕೃತ್ಯಗಳ ರೂವಾರಿಗಳ ವಿರುದ್ಧ ತೋರಿಸುವುದು ಒಳ್ಳೆಯದು. ಪಾಕಿಸ್ತಾನವು ಈಗಲಾದರೂ ತನ್ನ ಮನೋಸ್ಥಿತಿಯನ್ನು ಬದಲಿಸಿಕೊಳ್ಳಬೇಕು, ಇಲ್ಲದಿದ್ದರೆ ಬಹಿಷ್ಕೃತ ರಾಷ್ಟ್ರವಾಗಿಯೇ ಉಳಿದುಬಿಡುತ್ತದೆ ಎಂದು ತಿಳಿಸಿದೆ.
ಬಿಲಾವಲ್ ಭುಟ್ಟೋ ಹೇಳಿದ್ದೇನು?
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಬಿಲಾವಲ್ ಭುಟ್ಟೋ ಅವರು, ”ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್ ಜನರ ಕಟುಕ ಬದುಕಿದ್ದಾರೆ ಮತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ,” ಎಂದು ಹೇಳಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡುವಾಗ ಭುಟ್ಟೋ ಪ್ರಧಾನಿ ಮೋದಿ ಅವರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದಾರೆ.
ಜೈಶಂಕರ್ ಏನು ಹೇಳಿದ್ದರು?
ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ್ದ ಹಾಗೂ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಆಶ್ರಯ, ಕುಮ್ಮಕ್ಕು ಕೊಟ್ಟಿದ್ದ ನೆರೆಯ ದೇಶಕ್ಕೆ, ವಿಶ್ವಸಂಸ್ಥೆಯಂಥ ವೇದಿಕೆಯಲ್ಲಿ ಇತರರಿಗೆ ಉಪದೇಶ ನೀಡುವ ವಿಶ್ವಾಸಾರ್ಹತೆ ಅಥವಾ ಯಾವುದೇ ಯೋಗ್ಯತೆಯೂ ಇಲ್ಲ. ಪಾಕಿಸ್ತಾನದ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಅವರು ಹೇಳಿದ್ದರು.
ಇದನ್ನೂ ಓದಿ | Jai Shankar | ಲಾಡೆನ್‌ಗೆ ಆತಿಥ್ಯ ನೀಡಿದ್ದ ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಉಪದೇಶ ನೀಡುವ ಯೋಗ್ಯತೆ ಇಲ್ಲ: ಭಾರತ ಕಿಡಿ