ನವದೆಹಲಿ: ಖಲಿಸ್ತಾನಿ ಉಗ್ರ, ಖಲಿಸ್ತಾನಿ ಟೈಗರ್ ಫೋರ್ಸ್‌ನ (Khalistani Tiger Force) ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಹತ್ಯೆಗೀಡಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸಂಸತ್‌ನಲ್ಲಿಯೇ ಆತನಿಗೆ ‘ಮೌನಾಚರಣೆ’ ಮೂಲಕ ಗೌರವ ಸಲ್ಲಿಸಿರುವುದನ್ನು ಭಾರತ ಸರ್ಕಾರವು (India) ತೀರ್ವವಾಗಿ ಖಂಡಿಸಿದೆ. ಕೆನಡಾದ (Canada) ಹೌಸ್ ಆಫ್ ಕಾಮನ್ಸ್‌ನಲ್ಲಿ ಕಳೆದ ಮಂಗಳವಾರ (ಜೂನ್ 18) ಎಲ್ಲರೂ ಎದ್ದು ನಿಂತು, ಮೌನಾಚರಣೆ ಮೂಲಕ ನಿಜ್ಜಾರ್‌ಗೆ ಗೌರವ ಸಲ್ಲಿಸಿದ್ದರು. ಇದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.
“ತೀವ್ರವಾದಕ್ಕೆ ರಾಜಕೀಯ ವ್ಯವಸ್ಥೆಯಲ್ಲಿ ಜಾಗ ನೀಡುವುದನ್ನು ನಾವು ನಿಶ್ಚಿತವಾಗಿಯೂ ಖಂಡಿಸುತ್ತೇವೆ. ಯಾರು ಹಿಂಸಾಚಾರದ ಪರವಾಗಿದ್ದಾರೋ, ಯಾರು ತೀವ್ರವಾದದಲ್ಲಿ ನಂಬಿಕೆ ಇರಿಸಿದ್ದಾರೋ, ಅಂತಹವರಿಗೆ ರಾಜಕೀಯ ಕ್ಷೇತ್ರದಲ್ಲಿ ಜಾಗ ನೀಡುವುದನ್ನು ಭಾರತ ವಿರೋಧಿಸುತ್ತದೆ. ಇದು ನಮ್ಮ ನಿಲುವಾಗಿದೆ” ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
#WATCH | Delhi: On Canadian Parliament observing two-minute silence on the death anniversary of Sikh separatist leader Hardeep Singh Nijjar, MEA Spokesperson Randhir Jaiswal says, "We naturally oppose any moves giving political space to extremism and those advocating violence…" pic.twitter.com/nN6iyIWHQQ
— ANI (@ANI) June 21, 2024
ಕಳೆದ ವರ್ಷ ಜೂನ್ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಈ ಬಗ್ಗೆ ಸ್ಪೀಕರ್ ಗ್ರೆಗ್ ಫರ್ಗುಸ್ ಮಾತನಾಡಿ, “ಒಂದು ವರ್ಷದ ಹಿಂದೆ ಸುರ‍್ರೆ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸ್ಮರಣಾರ್ಥ ಮೌನ ಆಚರಿಸೋಣʼʼ ಎಂದು ಘೋಷಿಸಿದರು. ಅದರಂತೆ ಎಲ್ಲ ಸದಸ್ಯರು ಎದ್ದು ನಿಂತುಕೊಳ್ಳುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಖಲಿಸ್ತಾನ್ ಟೈಗರ್ ಫೋರ್ಸ್ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಖಲಿಸ್ತಾನಿ ಉಗ್ರ, ಖಲಿಸ್ತಾನ್ ನಾಯಕ, ಬಂಧಿತ ಅಮೃತ್‌ಪಾಲ್ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್ ಸಿಂಗ್ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್ ಸಿಂಗ್ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು.