ನವ ದೆಹಲಿ: ಜಾಗತಿಕ ಮಟ್ಟದಲ್ಲಿ ಮತ್ತು ಏಷ್ಯಾ ಪ್ರದೇಶದಲ್ಲಿ ದಿನೇದಿನೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾವನ್ನು ಎದುರಿಸಲು ಅಮೆರಿಕ ಮತ್ತು ಭಾರತ ಜಂಟಿಯಾಗಿ ಸಿದ್ಧಗೊಂಡಿವೆ. ಕಣ್ಗಾವಲು ಡ್ರೋನ್ಗಳ ತಯಾರಿಕೆಯಲ್ಲಿ ಭಾರತಕ್ಕೆ ಅಮೆರಿಕ ಸಂಪೂರ್ಣ ಸಹಕಾರ ನೀಡಲಿದೆ. ಡ್ರೋನ್ಗಳನ್ನು ಭಾರತದಲ್ಲೇ ನಿರ್ಮಿಸಿ, ಅವುಗಳನ್ನು ನೆರೆಹೊರೆಯ ದೇಶಗಳಿಗೆ ರಫ್ತು ಮಾಡಲಾಗುವುದು. ಈ ಕಾರ್ಯದಲ್ಲಿ ಅಮೆರಿಕದ ಪೆಂಟಗಾನ್ (ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪೆಂಟಗಾನ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತದಲ್ಲಿ ಇರುವ ಬಹುತೇಕ ಶಸ್ತ್ರಾಸ್ತ್ರಗಳು ರಷ್ಯಾ ನಿರ್ಮಿತವೇ ಆಗಿವೆ. ಈಗೀಗ ದೇಶೀಯವಾಗಿಯೂ ಹಲವು ಮಿಲಿಟರಿ ಉಪಕರಣಗಳನ್ನು ಭಾರತ ತಯಾರು ಮಾಡುತ್ತಿದೆ. ಈ ಮಧ್ಯೆ ಅಮೆರಿಕದ ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಎಲಿ ರಾಟ್ನರ್, ‘ರಕ್ಷಣಾ ವಲಯದಲ್ಲಿ ಆಧುನಿಕತೆಯನ್ನು ಸಾಧಿಸುವ ಭಾರತದ ಗುರಿಯಲ್ಲಿ ನಾವು ಜತೆಯಾಗಿ ಇರುತ್ತೇವೆ. ರಕ್ಷಣಾ ಸಾಧನಗಳ ಉತ್ಪಾದನೆ, ಅಭಿವೃದ್ಧಿಯಲ್ಲಿ ನಾವು ದೆಹಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಹೇಳಿದ್ದಾರೆ. ಹಾಗೇ, ಭಾರತದೊಂದಿಗೆ ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ. ಭಾರತದ ರಕ್ಷಣಾ ವ್ಯವಸ್ಥೆಗೆ ಚೀನಾ ಅಪಾಯ ಒಡ್ಡುತ್ತಿರುವ ಹೊತ್ತಲ್ಲಿ, ಈ ಬೆಳವಣಿಗೆ ಮುಖ್ಯ ಎನ್ನಿಸಿದೆ.
ಇದನ್ನೂ ಓದಿ: ಚೀನಾದಲ್ಲಿ ದುರ್ಗಮ ಪ್ರದೇಶದಲ್ಲಿ ಪಲ್ಟಿಯಾದ ಬಸ್; 27 ಮಂದಿ ಸಾವು, 20 ಪ್ರಯಾಣಿಕರಿಗೆ ಗಾಯ