ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ ಭೇಟಿ ಮುಗಿಸಿಕೊಂಡು(PM Modi Visit US), ಈಜಿಪ್ಟ್ (Egypt) ಪ್ರವಾಸವನ್ನು ಸಂಪನ್ನ ಮಾಡಿ ಭಾನುವಾರ ರಾತ್ರಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ, ಅಮೆರಿಕ ಭೇಟಿಯ ಪರಿಣಾಮ ಮುಂದಿನ ಮೂರು ತಿಂಗಳಲ್ಲಿ ಆಗಲಿದೆ. ಏನೆಂದರೆ, ಅಮೆರಿಕದಿಂದ (America) ಭಾರತಕ್ಕೆ (India) ರಫ್ತಾಗುತ್ತಿದ್ದ 8 ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕವನ್ನು (customs duties) ತೆಗೆದು ಹಾಕಲು ಭಾರತವು ನಿರ್ಧರಿಸಿದೆ. 2019ರಲ್ಲಿಅಮೆರಿಕಕ್ಕೆ ಭಾರತದಿಂದ ರಫ್ತಾಗುತ್ತಿದ್ದ ಕೆಲವು ಉಕ್ಕು ಮತ್ತ ಅಲ್ಯುಮಿನಿಯಂ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವು ಕೂಡ ಅಮೆರಿಕದ ಕಡಲೆ, ಬೇಳೆಕಾಳು(ಚೆನ್ನಂಗಿ ಬೇಳೆ), ಸೇಬು ಸೇರಿದಂತೆ ಎಂಟು ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿತ್ತು. ಈಗ ಉಭಯ ರಾಷ್ಟ್ರಗಳು ಆರು ಡಬ್ಲ್ಯೂಟಿಒ(WTO) ವಿವಾದಗಳನ್ನು ಬಗೆಹರಿಸಲು ಮುಂದಾಗಿವೆ. ಹಾಗಾಗಿಯೇ, ಈ ಹೆಚ್ಚುವರಿ ಸುಂಕವನ್ನು ಕೈ ಬಿಡಲು ಭಾರತವು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಆರು ಡಬ್ಲ್ಯೂಟಿಒ (ವಿಶ್ವ ವ್ಯಾಪಾರ ಸಂಸ್ಥೆ) ವಿವಾದಗಳನ್ನು ಬಗೆಹರಿಸಲು ಮುಂದಾಗಿವೆ. ಕೆಲವು ಅಮೆರಿಕ ಉತ್ಪನ್ನಗಳ ಮೇಲಿನ ಈ ಪ್ರತೀಕಾರದ ಸುಂಕಗಳನ್ನು ತೆಗೆದುಹಾಕಲು ನಿರ್ಧರಿಸಿವೆ.
ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಅಮೆರಿಕ 2018ರಲ್ಲಿ ಉಕ್ಕಿನ ಉತ್ಪನ್ನಗಳ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವು 2019ರ ಜೂನ್ ತಿಂಗಳಲ್ಲಿ ಅಮೆರಿಕದ 28 ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿತ್ತು.
ಈ ಎಂಟು ಅಮೆರಿಕ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕಗಳನ್ನು ರದ್ದುಗೊಳಿಸುವ ಸೂಚನೆ ನೀಡಿದ್ದರಿಂದ ಪ್ರಸ್ತುತ ಅನ್ವಯಿಕ ಮೋಸ್ಟ್-ಫೇವರ್ಡ್-ನೇಷನ್ (ಎಂಎಫ್‌ಎನ್) ಎಂಬ ಪಟ್ಟಿಗೆ ಭಾರತವು ಹಿಂದಿರುಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಪರಿಷ್ಕೃತ ದರಗಳು ಮುಂದಿನ ಮೂರು ತಿಂಗಳಲ್ಲಿ ಜಾರಿಯಾಗಲಿವೆ.
ಈ ಸುದ್ದಿಯನ್ನೂ ಓದಿ: PM Modi Visit US: ಭಾರತದಲ್ಲಿ ತಾರತಮ್ಯಕ್ಕೆ ಅವಕಾಶವೇ ಇಲ್ಲ, ನಮ್ಮ ಡಿಎನ್‌ಎದಲ್ಲೇ ಪ್ರಜಾಪ್ರಭುತ್ವವಿದೆ ಎಂದ ಪ್ರಧಾನಿ ಮೋದಿ
ಒಪ್ಪಂದದ ಭಾಗವಾಗಿ ಭಾರತವು ಕಡಲೆ (ಶೇ.10), ಬೇಳೆಕಾಳುಗಳು (ಶೇ.20), ಒಣಗಿದ ಅಥವಾ ತಾಜಾ ಬಾದಾಮಿ (ಪ್ರತಿ ಕೆಜಿಗೆ 7 ರೂ.), ಬಾದಾಮಿ ಸಿಪ್ಪೆ (ಪ್ರತಿ ಕೆಜಿಗೆ 20 ರೂ.), ವಾಲ್‌ನಟ್ಸ್ (ಶೇ.20 ) ಮೇಲಿನ ಹೆಚ್ಚುವರಿ ಸುಂಕವನ್ನು ರದ್ದು ಮಾಡಲಿದೆ. ತಾಜಾ ಸೇಬು (ಶೇ.20 ), ಬೋರಿಕ್ ಆಸಿಡ್ (ಶೇ.20 ಪ್ರತಿಶತ), ಮತ್ತು ಡಯಾಗ್ನೋಸ್ಟಿಕ್ ರೀಜೆಂಟ್ಸ್ (ಶೇ.20 ಪ್ರತಿಶತ) ಮೇಲಿನ ಹೆಚ್ಚುವರಿ ಸುಂಕವನ್ನು ಭಾರತವು ಕೈ ಬಿಡಲಿದೆ ಎಂದು ತಿಳಿದು ಬಂದಿದೆ. ಭಾರತ ಸರ್ಕಾರದ ಈ ನಿರ್ಧಾರವನ್ನು ಕೈಗಾರಿಕಾ ಕ್ಷೇತ್ರದ ಪ್ರಮುಖರು ಸ್ವಾಗತಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.