Site icon Vistara News

India vs Bharat Row: ವಿಧೇಯಕಕ್ಕೂ ಮೊದಲೇ ‘ಭಾರತ’ಮಯ; ಪ್ರಧಾನಿ ಅಧಿಸೂಚನೆಯಲ್ಲೂ ‘ಭಾರತ’

India vs Bharat Row

India vs Bharat Row: Bharat is on PM's BRICS notification

ನವದೆಹಲಿ: ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಎಂಬುದಾಗಿ ಬದಲಿಸಲು ಕೇಂದ್ರ ಸರ್ಕಾರ ಸಂಸತ್‌ ವಿಶೇಷ ಅಧಿವೇಶನದಲ್ಲಿ ವಿಧೇಯಕ (India vs Bharat Row) ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಷ್ಟ್ರಪತಿಯವರ ಅಧಿಸೂಚನೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್’‌ ಎಂದು ನಮೂದಿಸಲಾಗಿದೆ. ಇದರ ಬೆನ್ನಲ್ಲೇ ಪ್ರಧಾನಿಯವರ ನೋಟಿಫಿಕೇಷನ್‌ನಲ್ಲೂ ‘ಭಾರತ’ ರಾರಾಜಿಸಿದೆ. ಆ ಮೂಲಕ ಹೆಸರು ಬದಲಾವಣೆ ಕುರಿತ ವಿಧೇಯಕದ ಬಗ್ಗೆ ಚರ್ಚೆ, ಪರ, ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಲ್ಲೆಲ್ಲೂ ‘ಭಾರತ’ ರಾರಾಜಿಸುತ್ತಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು 20ನೇ ಆಸಿಯಾನ್‌-ಭಾರತ ಶೃಂಗಸಭೆ ಹಾಗೂ 18ನೇ ಪೂರ್ವ ಏಷ್ಯಾ ಶೃಂಗಸಭೆಯ ಹಿನ್ನೆಲೆಯಲ್ಲಿ ಬುಧವಾರ (ಸೆಪ್ಟೆಂಬರ್ 6) ರಾತ್ರಿ ಇಂಡೋನೇಷ್ಯಾಗೆ ತೆರಳಲಿದ್ದಾರೆ. ಸೆಪ್ಟೆಂಬರ್‌ 7ರಂದು ಸಭೆಗಳು ನಡೆಯಲಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ಅಧಿಸೂಚನೆಯಲ್ಲಿ ‘ಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತ್‌’ ಎಂದು ನಮೂದಿಸಲಾಗಿದೆ. ಆ ಮೂಲಕ ಭಾರತ ಎಂಬ ಹೆಸರನ್ನು ಎಲ್ಲೆಲ್ಲೂ ಜಾರಿಗೆ ತರಲಾಗುತ್ತಿದೆ.

ಪ್ರಧಾನಮಂತ್ರಿ ನೋಟಿಫಿಕೇಷನ್‌

ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ಹೋಗಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಕೇಂದ್ರದ ವಿರುದ್ಧ ಟೀಕೆ ಆರಂಭಿಸಿದೆ. ಆದರೆ, ಭಾರತ ಎಂಬ ಹೆಸರೇ ದೇಶಕ್ಕೆ ಸೂಕ್ತವಾದುದು. ಇಂಡಿಯಾ ಎಂದು ಬ್ರಿಟಿಷರು ಕರೆದಿದ್ದು ಎಂಬ ವಾದಗಳೂ ಕೇಳಿಬಂದಿವೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ʼಭಾರತʼ ಕೇವಲ ಹೆಸರಲ್ಲ, ಅದೊಂದು ಭಾವನೆ, ಅನನ್ಯ ಪರಂಪರೆ

ʼಇಂಡಿಯಾʼವನ್ನು ಬದಲಿಸಿ ʼಭಾರತʼವನ್ನು ಸ್ಥಾಪಿಸಬೇಕು ಎಂಬುದು ಬಿಜೆಪಿಯ ಬಹುಕಾಲದ ಆಶಯವಾಗಿದೆ. ಈ ಹಿಂದೆ ಹಿಮಂತ ಬಿಸ್ವ ಶರ್ಮಾ, ಆರೆಸ್ಸೆಸ್‌ ಮುಖಂಡ ಮೋಹನ ಭಾಗವತ್‌ ಕೂಡ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಡಿಸೆಂಬರ್ 2022ರಲ್ಲಿ, ಗುಜರಾತ್‌ನ ಆನಂದ್‌ನ ಬಿಜೆಪಿ ಸಂಸದ ಮಿತೇಶ್ ಪಟೇಲ್ ಅವರು ʼಇಂಡಿಯಾʼವನ್ನು “ಭಾರತ್” ಅಥವಾ “ಭಾರತ್ ವರ್ಷ್” ಎಂದು ಮರುನಾಮಕರಣ ಮಾಡುವ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಯನ್ನು ಎತ್ತಿದ್ದರು. ಸೆಪ್ಟೆಂಬರ್ 1949ರಲ್ಲಿ ಸಂವಿಧಾನ ಸಭೆಯು ಈ ಬಗ್ಗೆ ಚರ್ಚಿಸಿತ್ತು. “ಇಂಡಿಯಾ” ಎಂಬುದು ದೇಶವು ಒಳಪಟ್ಟ ಗುಲಾಮಗಿರಿಯನ್ನು ಸೂಚಿಸುತ್ತದೆ. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಬಂದಿದೆ ಎಂದು ಪಟೇಲ್ ಪ್ರತಿಪಾದಿಸಿದ್ದರು.

Exit mobile version