ಇಸ್ಲಾಮಾಬಾದ್: ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ರಾಜಕೀಯ ಅರಾಜಕತೆ, ಧಾರ್ಮಿಕ ಮೂಲಭೂತವಾದ, ಸೇನೆಯ ಸರ್ವಾಡಳಿತ ಸೇರಿ ಹಲವು ಕಾರಣಗಳಿಂದಾಗಿ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಹಣಕಾಸು ನೆರವಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಇಷ್ಟಿದ್ದರೂ ಅಲ್ಲಿನ ನಾಯಕರು ಮಾತ್ರ ಅಹಂಕಾರದ ಮಾತುಗಳನ್ನಾಡುವುದು, ಭಾರತದ ವಿರುದ್ಧ ಉದ್ಧಟತನದ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, “2026ರ ನವೆಂಬರ್‌ನಲ್ಲಿ ಭಾರತವು (India) ತುಂಡು ತುಂಡಾಗುತ್ತದೆ” ಎಂಬುದಾಗಿ ಪಾಕಿಸ್ತಾನದ (Pakistan) ಮಾಜಿ ಸಂಸದನೊಬ್ಬ (Pakistan ex Senator) ನಾಲಗೆ ಹರಿಬಿಟ್ಟಿದ್ದಾನೆ.
ಸುದ್ದಿವಾಹಿನಿಯೊಂದರ ಜತೆ ಮಾತನಾಡುವ ವೇಳೆ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಫೈಸಲ್ ರಾಜಾ ಅಬಿದಿ (Faisal Raza Abidi) ಎಂಬ ಮಾಜಿ ಸಂಸದನು ದುರಹಂಕಾರದ ಮಾತುಗಳನ್ನಾಡಿದ್ದಾನೆ. “ಭಾರತದ ಸಂಸತ್ತಿನಲ್ಲಿ ಅಖಂಡ ಭಾರತ ಕಲ್ಪನೆಯ ನಕ್ಷೆ ಹಾಕಲಾಗಿದೆ. ಈ ನಕ್ಷೆಯಲ್ಲಿ ನೇಪಾಳ, ಶ್ರೀಲಂಕಾ, ಭೂತಾನ್ ಹಾಗೂ ಪಾಕಿಸ್ತಾನವೂ ಸೇರಿದೆ. ಆದರೆ, ಒಂದು ಮಾತು ನೆನಪಿರಲಿ. 2026ರ ನವೆಂಬರ್‌ನಲ್ಲಿ ಭಾರತವು ಚೂರು ಚೂರಾಗುತ್ತದೆ. ನರೇಂದ್ರ ಮೋದಿ ಅವರ ಹಿಂದುತ್ವ ಅಜೆಂಡಾ ಕೂಡ ಪತನವಾಗುತ್ತದೆ” ಎಂದು ಹೇಳಿದ್ದಾನೆ.
"…Allah will break India(Bharat Mata) into pieces…"
— Pakistan Untold (@pakistan_untold) May 3, 2024
– Ex-senator Pakistan pic.twitter.com/jg4O4fJsUK
“ಅಖಂಡ ಭಾರತ ಕಲ್ಪನೆಯ ಕುರಿತು ಪಾಕಿಸ್ತಾನ ಮಾತನಾಡಿದರೆ ತಮಾಷೆ ಮಾಡುತ್ತಾರೆ. ಆದರೆ, 2026ರ ನವೆಂಬರ್ 26ರಂದು ಅಲ್ಲಾ ಪಾಕಿಸ್ತಾನದ ಪರವಾಗಿರುತ್ತಾನೆ. ಅಂದು ನಡೆಯುವ ಘಟನೆಯು ನಿಮ್ಮನ್ನು ಅಚ್ಚರಿಯ ಮಡುವಿನಲ್ಲಿ ಬೀಳಿಸುತ್ತದೆ. ಮೋದಿ ಹಿಂದುತ್ವದಿಂದ ಹೊರಗೆ ಬರಲಿರುವ ಜನ, ಪ್ರಾಣ ಉಳಿದರೆ ಸಾಕು ಎಂದು ಹೇಳುತ್ತಾರೆ. ಪಾಕಿಸ್ತಾನದ ಶಸ್ತ್ರಾಸ್ತ್ರಗಳು ಹಾಗೂ ಮಾನವ ಸಂಪನ್ಮೂಲವು ಭಾರತದ ನಾಶಕ್ಕೆ ಸಿದ್ಧವಾಗಿದೆ. ನರೇಂದ್ರ ಮೋದಿ ಆಡಳಿತದಲ್ಲಿಯೇ ಭಾರತ ತುಂಡು ತುಂಡಾಗುವುದೇ ಮುಖ್ಯ” ಎಂಬುದಾಗಿ ಎಲುಬಿಲ್ಲದ ನಾಲಗೆ ಹರಿಬಿಟ್ಟಿದ್ದಾನೆ.
“ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಅವರ ಪ್ರತಿಪಾದನೆಗೆ ಜನರಿಂದ ಅಪಾರ ಬೆಂಬಲವೂ ವ್ಯಕ್ತವಾಗುತ್ತಿದೆ. ಹಾಗಾಗಿ, ಭಾರತವು ಚೂರು ಚೂರು ಆಗುವುದು ಮುಖ್ಯ” ಎಂಬುದಾಗಿ ಅಬಿದಿ ಹೇಳಿದ್ದಾನೆ. ಆ ಮೂಲಕ ಭಾರತದ ಮೇಲೆ ಪಾಕಿಸ್ತಾನವು ಶಸ್ತ್ರಾಸ್ತ್ರಗಳ ಸಮೇತ ದಾಳಿ ಮಾಡುತ್ತದೆ ಎಂಬುದರ ಮುನ್ಸೂಚನೆ ನೀಡಿದ್ದಾನೆ. ಇದುವರೆಗೆ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧಕ್ಕಿಳಿದಿರುವ ಪಾಕಿಸ್ತಾನವು, ನಾಲ್ಕಕ್ಕೆ ನಾಲ್ಕು ಬಾರಿಯೂ ಹೀನಾಯವಾಗಿ ಸೋಲುಂಡಿದೆ. ಇನ್ನು ಮೋದಿ ಆಡಳಿತದಲ್ಲಿ 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್, 2019ರ ಪುಲ್ವಾಮ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರರನ್ನು ಹಿಮ್ಮೆಟ್ಟಿಸಲಾಗಿದೆ. ಹೀಗಿದ್ದರೂ, ಪಾಕಿಸ್ತಾನದ ನಾಯಕರು ಭಾರತದ ವಿಚಾರದಲ್ಲಿ ಹಗುರವಾಗಿ ಮಾತನಾಡುವುದನ್ನು ಬಿಟ್ಟಿಲ್ಲ ಎಂಬುದಕ್ಕೆ ಇದೇ ನಿದರ್ಶನವಾಗಿದೆ.
ಇದನ್ನೂ ಓದಿ: Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ