Site icon Vistara News

Narendra Modi: ಮೋದಿ ಆಡಳಿತದಡಿ ಪ್ರಜಾಪ್ರಭುತ್ವಕ್ಕೆ ಆತಂಕ? ʼನೀವೇ ದಿಲ್ಲಿಗೆ ಹೋಗಿ ನೋಡಿʼ ಎಂದ ಅಮೆರಿಕ

john kirby us

ವಾಷಿಂಗ್ಟನ್:‌ ನರೇಂದ್ರ ಮೋದಿ ಆಡಳಿತದಡಿ ಭಾರತದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದನಿ ಎತ್ತಿದ್ದರ ಬೆನ್ನಿಗೇ ಅಮೆರಿಕ ಅಧಿಕೃತವಾಗಿ ಮಹತ್ವದ ಹೇಳಿಕೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಆಡಳಿತದಡಿ ಭಾರತದಲ್ಲಿ ಪ್ರಜಾಪ್ರಭುತ್ವದ (indian democracy) ಆರೋಗ್ಯ ಕುಸಿಯುತ್ತಿದೆ ಎಂಬ ಕಳವಳವನ್ನು ಶ್ವೇತಭವನ ತಳ್ಳಿಹಾಕಿದೆ. ʼʼಹೊಸದಿಲ್ಲಿಗೆ ಹೋಗಿ ಸ್ವತಃ ನೀವೇ ನೋಡಬಹುದುʼʼ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರ ಸಂವಹನ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.

ಮುಂದಿನ ವಾರ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) , ಮೋದಿ ಆಡಳಿತದಡಿಯಲ್ಲಿ ಭಾರತದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಹೇಳಿದ್ದರು.

ʼಬೈಡೆನ್ ಆಡಳಿತವು ಭಾರತದಲ್ಲಿ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದೆಯೇ?ʼ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಕಿರ್ಬಿ, “ಭಾರತವು ವೈವಿಧ್ಯಮಯವಾದ ಪ್ರಜಾಪ್ರಭುತ್ವವಾಗಿದೆ. ಸ್ವತಃ ನೀವೇ ನವದೆಹಲಿಗೆ ಹೋಗಿ ಅದನ್ನು ನೋಡಬಹುದು. ಖಂಡಿತವಾಗಿಯೂ, ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿ ಮತ್ತು ಆರೋಗ್ಯವು ನಮ್ಮ ಚರ್ಚೆಯ ಭಾಗವಾಗಿರಲಿದೆʼʼ ಎಂದರು.

ಪ್ರಧಾನಿ ಮೋದಿ ಇದೇ ತಿಂಗಳ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಜೂನ್ 22, 2023ರಂದು ಅಧಿಕೃತ ಭೇಟಿಯಾಗಲಿದ್ದು, ವಿಶೇಷ ಡಿನ್ನರ್‌ನ ಆತಿಥ್ಯ ವಹಿಸಲಿದ್ದಾರೆ. ಈ ಸಂದರ್ಭ ಕೆಲವು ದ್ವಿಪಕ್ಷೀಯ ಮಾತುಕತೆ ನಡೆಯಲಿವೆ.

ಔತಣಕೂಟದ ಕಾರಣದ ಬಗ್ಗೆ ಕಿರ್ಬಿ ವಿವರಿಸಿದರು. ʼʼಭಾರತವು ಅನೇಕ ವಿಚಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಬಲಿಷ್ಠ ಪಾಲುದಾರನಾಗಿದೆ. ನಮ್ಮ ನಡುವೆ ಹೆಚ್ಚುವರಿ ರಕ್ಷಣಾ ಸಹಕಾರವಿದೆ. ಸಹಜವಾಗಿ ಎರಡೂ ದೇಶಗಳ ನಡುವೆ ದೊಡ್ಡ ಪ್ರಮಾಣದ ವ್ಯಾಪಾರವಿದೆ. ಭಾರತವು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ. ಭಾರತವು ದ್ವಿಪಕ್ಷೀಯವಾಗಿ ಮಾತ್ರವಲ್ಲ, ಬಹುಪಕ್ಷೀಯವಾಗಿ ಹಲವು ಹಂತಗಳಲ್ಲಿ ನಿಸ್ಸಂಶಯವಾಗಿ ಮಹತ್ವದ್ದಾಗಿದೆ. ಆ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲು, ಸ್ನೇಹವನ್ನು ಗಾಢವಾಗಿಸಲು ನಮ್ಮ ಅಧ್ಯಕ್ಷರು ಪ್ರಧಾನಿ ಮೋದಿಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ” ಎಂದು ಕಿರ್ಬಿ ನುಡಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕಾರು ಡ್ರೈವ್​ ಮಾಡುವಾಗ ಕನ್ನಡಿಯಲ್ಲಿ ಹಿಂಬದಿ ನೋಡುತ್ತಿರುತ್ತಾರೆ ಎಂದ ರಾಹುಲ್ ಗಾಂಧಿ

Exit mobile version