ನವದೆಹಲಿ: ಮುಂದಿನ ವಾರ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit 2023) ಸದಸ್ಯ ರಾಷ್ಟ್ರಗಳು ಮತ್ತು ಆಹ್ವಾನಿತರ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಒಳಗೊಂಡಿರುವ ಸಂಸ್ಕೃತಿ ಕಾರಿಡಾರ್ (Culture Corridor) ತೆರೆಯಲು ಕೇಂದ್ರ ಸರ್ಕಾರವು (Indian Government) ಯೋಜಿಸುತ್ತಿದೆ. ಅಂತಿಮ ಸಭೆಯ ಪೂರ್ವದಲ್ಲಿ ಘಟನೆಗಳನ್ನು ಸೆರೆಹಿಡಿಯುವ ಡಿಜಿಟಲ್ ಮ್ಯೂಸಿಯಂ (digital museum) ರಚಿಸಲಾಗುತ್ತಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಕೃತಿ ಕಾರಿಡಾರ್ ಸದಸ್ಯ ರಾಷ್ಟ್ರಗಳು ಮತ್ತು ಆಹ್ವಾನಿತರಿಂದ ಶೇ.100 ಭಾಗವಹಿಸುವಿಕೆಯನ್ನು ಆಧರಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಹಲವಾರು ಸಂಸ್ಕೃತಿಗಳನ್ನು ಸೆರೆಹಿಡಿಯುವ ಮತ್ತು ಅವುಗಳ ಗುಣಲಕ್ಷಣಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಪ್ರತಿಯೊಂದು ರಾಷ್ಟ್ರವೂ ಕಾರಿಡಾರ್‌ಗೆ ಕೊಡುಗೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಚರ್ ಕಾರಿಡಾರ್ ಭಾಗವಾಗಿ ಭೌತಿಕ ಮತ್ತು ವರ್ಚುಯಲ್ ಪ್ರದರ್ಶನಗಳಿರುತ್ತವೆ. ಇದರಲ್ಲಿ ಮೊನಾಲಿಸಾದ ಡಿಜಿಟಲ್ ಆವೃತ್ತಿ ಕೂಡ ಇರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಾರಿಡಾರ್ ಜೊತೆಗೆ, ಸರ್ಕಾರದಿಂದ ಕವನ ಸಂಕಲನವನ್ನು ಸಹ ಬಿಡುಗಡೆ ಮಾಡಲಾಗುವುದು. ಇದಲ್ಲದೆ, ದೇಶಾದ್ಯಂತ G20 ಘಟನೆಗಳನ್ನು ಸೆರೆಹಿಡಿಯುವ ಡಿಜಿಟಲ್ ಮ್ಯೂಸಿಯಂ ಅನ್ನು ಸಹ ರಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿ20 ನಡೆಯಲಿರುವ ಸ್ಥಳದ ಪ್ರವೇಶ ದ್ವಾರದಲ್ಲಿ, ತಮಿಳುನಾಡಿನಿಂದ ತರಿಸಲಾದ ನಟರಾಜ ಕಲಾಕೃತಿ ಇರಲಿದೆ.
ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಾರೆ ಎಂದು ಫೋನ್ ಮಾಡಿ ತಿಳಿಸಿದ ಪುಟಿನ್
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia President Vladimir Putin) ಅವರ ಪರಸ್ಪರ ದೂರವಾಣಿ ಕರೆ ಮಾಡಿ(Phone Call), ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ಶೃಂಗ ಸಭೆಯಲ್ಲಿ (G20 Summit 2023) ತಾವೇಕೆ ಪಾಲ್ಗೊಳ್ಳಲಾಗುವುದಿಲ್ಲ ಎಂಬ ಕುರಿತು ಪ್ರಧಾನಿ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: G20 Summit 2023: ಏನು, ಯಾಕೆ, ಎಲ್ಲಿ? ಸುಲಭವಾಗಿ ಅರ್ಥವಾಗುವ ವಿವರ ಇಲ್ಲಿದೆ!
ಉಭಯ ನಾಯಕರು ದ್ವಿಪಕ್ಷೀಯ ಸಹಕಾರದ ಹಲವಾರು ವಿಷಯಗಳ ಪ್ರಗತಿಯನ್ನು ಪರಿಶೀಲಿಸಿದರು. ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ, ಪುಟಿನ್ ಅವರು ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಮಾಹಿತಿಯನ್ನು ನೀಡಿದರು. ತಮ್ಮ ಬದಲಿಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾಗವಹಿಸಲಿದ್ದಾರೆಂದು ಮೋದಿ ಅವರಿಗೆ ಪುಟಿನ್ ತಿಳಿಸಿದರು.
ರಷ್ಯಾ ನಿರ್ಧಾರವನ್ನು ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜಿ20 ಅಧ್ಯಕ್ಷತೆಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳಿಗೆ ನಿರಂತರ ಬೆಂಬಲ ನೀಡಿದ ರಷ್ಯಾಗೆ ಅಭಿನಂದನೆಗಳನ್ನು ಸಲ್ಲಿಸಿದರು. ನವೆದಹಲಿಯಲ್ಲಿ ಸೆಪ್ಟೆಂಬರ್ 9ರಿಂದ 10ರವರೆಗೆ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಜಿ20 ರಾಷ್ಟ್ರಗಳ ನಾಯಕರ ಈ ಸಮಾವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪಾಲ್ಗೊಳ್ಳುವುದಿಲ್ಲ ಎಂದು ಆಗಸ್ಟ್ 25ರಂದು ರಷ್ಯನ್ ಸರ್ಕಾರ ಘೋಷಣೆ ಮಾಡಿತ್ತು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.