ಮಾಲೆ: ಭಾರತ ಹಾಗೂ ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು (India Maldives Row) ಏರ್ಪಟ್ಟಿರುವ ಬೆನ್ನಲ್ಲೇ, ಮೇ 10ರೊಳಗೆ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರು ವಾಪಸಾಗಲಿದ್ದಾರೆ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಹೇಳಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸಂಸತ್ತಿನಲ್ಲಿ ಭಾಷಣ ಮಾಡಿದ ಅವರು, “ಸೇನೆ ವಾಪಸಾತಿ ಕುರಿತು ಭಾರತ ಹಾಗೂ ಮಾಲ್ಡೀವ್ಸ್ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೇ 10ರೊಳಗೆ ಭಾರತದಿಂದ ಸೇನೆ ವಾಪಸಾಗಲಿದೆ” ಎಂದು ಹೇಳಿದರು.
“ಮಾಲ್ಡೀವ್ಸ್ ಸಾರ್ವಭೌಮತ್ವ, ಸಮಗ್ರತೆಯಲ್ಲಿ ಬೇರೆ ದೇಶಗಳ ಮಧ್ಯಸ್ಥಿಕೆಯನ್ನು ನಾವು ಸಹಿಸುವುದಿಲ್ಲ. ಹಾಗಾಗಿ, ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್ ಕಳುಹಿಸಲು ತೀರ್ಮಾನಿಸಲಾಗಿದೆ. ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ ಕೂಡ ಸಮ್ಮತಿ ಸೂಚಿಸಿದೆ. ಮೇ 10ರೊಳಗೆ ಭಾರತದ ಎಲ್ಲ ಸೈನಿಕರು ದೇಶದಿಂದ ಹಿಂತಿರುಗಲಿದ್ದಾರೆ” ಎಂದು ತಿಳಿಸಿದರು.
First group of Indian troops to be sent before March 10: Maldives President
— ANI Digital (@ani_digital) February 5, 2024
Read @ANI Story | https://t.co/WbjQFyw3PK
#Maldives #India #MohamedMuizzu pic.twitter.com/XJyk8wpVVZ
ಭಾರತದ ಸೈನಿಕರನ್ನು ಹಿಂತೆಗೆದುಕೊಳ್ಳಬೇಕು ಎಂದು ಇದಕ್ಕೂ ಮೊದಲು ಮಾಲ್ಡೀವ್ಸ್ ಮಾರ್ಚ್ 15ರ ಗಡುವು ನೀಡಿತ್ತು. ಆದರೆ, ಮಾಲ್ಡೀವ್ಸ್ ಹಾಗೂ ಭಾರತದ ಮಧ್ಯೆ ಮಾತುಕತೆ ನಡೆದು, ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾಗಿ, ಮೇ 10ರೊಳಗೆ ಭಾರತದ ಸೇನೆ ವಾಪಸಾಗಲಿದೆ ಎಂದು ಮುಯಿಜು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್ ಸಚಿವರು ನೀಡಿದ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಕೂಡ ಆರಂಭವಾಗಿತ್ತು. ಅಷ್ಟೇ ಅಲ್ಲ, ಮೊಹಮ್ಮದ್ ಮುಯಿಜು ಅವರ ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ವಿರೋಧ ವ್ಯಕ್ತವಾಗಿತ್ತು.
ಭಾರತದ ಸುಮಾರು 80 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್ ಹಾಗೂ ನಿಗಾ ಯುದ್ಧವಿಮಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನಲ್ಲಿ ಸೈನಿಕರನ್ನು ನಿಯೋಜಿಸಿದೆ. ಯಾವ ದೇಶದ ಸೇನೆಯೂ ಮಾಲ್ಡೀವ್ಸ್‌ನಲ್ಲಿ ಇರುವುದು ಬೇಕಾಗಿಲ್ಲ ಎಂದು ಮೊಹಮ್ಮದ್ ಮುಯಿಜು ಹೇಳಿದ್ದಾರೆ. ಆದರೆ, ಸೈನಿಕರನ್ನು ವಾಪಸ್ ಕಳುಹಿಸುವ ಕುರಿತು ಚೀನಾ ಜತೆ ಮಾತನಾಡಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: Mohamed Muizzu: ಮುಯಿಜು ಭಾರತ ವಿರೋಧಿ ನೀತಿಗೆ ಮಾಲ್ಡೀವ್ಸ್‌ನಲ್ಲೇ ಆಕ್ರೋಶ!
ಮೊಹಮ್ಮದ್ ಮುಯಿಜು ಚೀನಾ ಪರ ನಿಲುವು
ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ. ಈಗ ಚೀನಾಗೆ ತೆರಳಿರುವ ಮೊಹಮ್ಮದ್ ಮುಯಿಜು, 50 ದಶಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮೊಹಮ್ಮದ್ ಮುಯಿಜು ಅವರು ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಆರೋಪ ಮಾಡಿರುವುದು ಕೂಡ ಓಲೈಕೆಯ ಸಂಕೇತ ಎನ್ನಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ