ನವದೆಹಲಿ: ಭಾರತವು ರೂಪಾಯಿ ಮೂಲಕವೇ ಹಣ ಪಾವತಿಸಿ (Payment In Rupees) ಯುಎಇಯಿಂದ (UAE) ಕಚ್ಚಾ ತೈಲ ಆಮದು ಮಾಡಿಕೊಂಡು ಇತಿಹಾಸ ಸೃಷ್ಟಿಸಿತ್ತು. ಈ ಇತಿಹಾಸವೀಗ ಮತ್ತೊಂದು ಮುನ್ನಡೆಗೆ ಕಾರಣವಾಗಿದೆ. ರೂಪಾಯಿ ಮೂಲಕವೇ ವಹಿವಾಟು ನಡೆಸಿ ಬೇರೆ ಕ್ಷೇತ್ರಗಳಲ್ಲಿ ಆಮದು ಒಪ್ಪಂದ ಮಾಡಿಕೊಳ್ಳಲು ಇದು ನೆರವಾಗಿದೆ ಎಂದು ಕೇಂದ್ರ ಸರ್ಕಾರದ (Central Government) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ, ಮೊದಲ ಒಪ್ಪಂದವು ಫಲಪ್ರದವಾಗಿದೆ ಎಂದೇ ಹೇಳಲಾಗುತ್ತಿದೆ.
ಹೌದು, ಕಳೆದ ಆಗಸ್ಟ್‌ನಲ್ಲಿ ಯುಎಇಯ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಎಡಿಎನ್‌ಒಸಿ)ಯಿಂದ ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಂಸ್ಥೆಯು ರೂಪಾಯಿ ಮೂಲಕವೇ ಹಣ ಪಾವತಿಸಿ ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲ ಖರೀದಿಸಿದೆ. ಭಾರತ ಮತ್ತು ಯುಎಇ ನಡುವೆ ಸ್ಥಳೀಯ ಕರೆನ್ಸಿ ಸೆಟಲ್‌ಮೆಂಟ್ (ಎಲ್‌ಸಿಎಸ್) ಅನ್ವಯ ಖರೀದಿ ಮಾಡಿದೆ. ಈ ಒಪ್ಪಂದವೀಗ ಬೇರೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಕೂಡ ನೆರವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ಬೇಕಾಗಿರುವ ಒಟ್ಟು ಬೇಡಿಕೆಯ ಕಚ್ಚಾ ತೈಲದಲ್ಲಿ ಶೇ.85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲಕ್ಕಾಗಿ ಭಾರತವು ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾರಣ ರೂಪಾಯಿಯಲ್ಲೇ ವಹಿವಾಟು ನಡೆಸುವುದು ಪ್ರಮುಖವಾಗಿದೆ. ರಷ್ಯಾದ ಕೆಲ ತೈಲ ಕಂಪನಿಗಳಿಗೂ ಭಾರತವು ರೂಪಾಯಿ ಪಾವತಿಸುವ ಮೂಲಕವೇ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲೂ ಯುಎಇ ಜತೆ ಮಾಡಿಕೊಂಡಿರುವ ಒಪ್ಪಂದವು ಹತ್ತಾರು ಕ್ಷೇತ್ರಗಳಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನೆರವಾಗುತ್ತಿದೆ. ಈಗಾಗಲೇ ಜಗತ್ತಿನ 18 ರಾಷ್ಟ್ರಗಳ ಜತೆ ರೂಪಾಯಿಯಲ್ಲೇ ವಹಿವಾಟು ನಡೆಸಲು ಭಾರತದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ (PSU) ಆರ್‌ಬಿಐ ಅನುಮತಿ ನೀಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೂಪಾಯಿ ಮೂಲಕವೇ ವಹಿವಾಟು ನಡೆಯುವ ಸಾಧ್ಯತೆ ಹೆಚ್ಚಿವೆ.
ಇದನ್ನೂ ಓದಿ: Suburban Rail: ಬೆಂಗಳೂರು ಉಪನಗರ ರೈಲು; ಜರ್ಮನಿಯ ಬ್ಯಾಂಕ್ ಜತೆ ಕೆ-ರೈಡ್ ಒಪ್ಪಂದ
ರೂಪಾಯಿಯಲ್ಲೇ ವಹಿವಾಟು ಹೇಗೆ ಅನುಕೂಲ?
ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಪ್ರವಾಸ ಕೈಗೊಂಡಾಗ ರೂಪಾಯಿಯಲ್ಲೇ ವಹಿವಾಟು ನಡೆಸುವ ಕುರಿತು ಮಹತ್ವದ ಒಪ್ಪಂದ ಮಾಡಿಕೊಂಡಿದ್ದರು. ಭಾರತ ಹಾಗೂ ಯುಎಇ ನಡುವಿನ ವಹಿವಾಟಿನಲ್ಲಿ ಡಾಲರ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ರೂಪಾಯಿಗೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಸಂಕಷ್ಟದ ಸಂದರ್ಭಗಳಲ್ಲಿ ಜಾಗತಿಕವಾಗಿ ರೂಪಾಯಿ ಮೌಲ್ಯವನ್ನು ಕಡಿಮೆಗೊಳಿಸುವ ಸಾಧ್ಯತೆಯನ್ನು ಕ್ಷೀಣಿಸುವುದು ಕೂಡ ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ